ಶಿರಸಿ : ಉತ್ತರಕನ್ನಡ ಜಿಲ್ಲೆಯ ಹಿರಿಯ ಹಾರ್ಮೊನಿಯಂ ವಾದಕ, ಅತ್ಯುತ್ತಮ ಕೃಷಿಕ ಹಾಗೂ ಶತಾಯುಷಿ ಶ್ರೀಕೃಷ್ಣ ರಾವ್ ಕಲ್ಗೊಂಡಿಕೊಪ್ಪ (100) ಅವರು, ಶನಿವಾರ (ಆಗಸ್ಟ್ 16) ಬೆಳಗಿನ ಜಾವ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಶಿರಸಿ ತಾಲೂಕಿನ ಸುಗಾವಿ ಗ್ರಾಮದ ಕಲ್ಗೊಂಡಿಕೊಪ್ಪದ ನಿವಾಸಿಯಾಗಿದ್ದ ಮೃತ ಶ್ರೀಕೃಷ್ಣ ರಾವ್ ಕಲ್ಗೊಂಡಿಕೊಪ್ಪ ಅವರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಕೃಷ್ಣಾಷ್ಟಮಿಯಂದು ಜನಿಸಿದ್ದ ಶ್ರೀಕೃಷ್ಣ ರಾವ್ ಅವರು ಕೃಷ್ಣಾಷ್ಟಮಿಯಂದೇ ನಿಧನರಾಗಿದ್ದಾರೆ.
ಶ್ರೀಕೃಷ್ಣ ರಾವ್ ಕಲ್ಗೊಂಡಿಕೊಪ್ಪ ಅವರು ಹಿಂದೂಸ್ತಾನೀ ಸಂಗೀತದ ಖ್ಯಾತ ಹಾರ್ಮೊನಿಯಂ ವಾದಕರಾಗಿದ್ದರು.
ಹಾರ್ಮೋನಿಯಂ ಅನ್ನು ಸ್ವತಂತ್ರ ವಾದನವಾಗಿಯೂ ನುಡಿಸುತ್ತಿದ್ದರು. ಅವರ ಮನೆಯಲ್ಲಿ ಯಾವಾಗಲೂ ಸಂಗೀತಕಾರರು ಇರುತ್ತಿದ್ದರು. ದೇಶದ ಅನೇಕ ಸಂಗೀತಗಾರರಿಗೆ ಇವರ ಮನೆ ಆಶ್ರಯ ತಾಣವಾಗಿತ್ತು. ಅತ್ಯುತ್ತಮ ಕೃಷಿಕರೂ ಆಗಿದ್ದರು. ತಮ್ಮ 90ನೇ ವಯಸ್ಸಿನ ನಂತರವೂ ಅವರು ಐದಾರು ಎಕರೆ ಅಡಕೆ ತೋಟ ಮಾಡಿದ್ದರು. ಕೊನೆಯ ಕ್ಷಣದ ವರೆಗೂ ಅವರು ತೋಟದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದರು. ಮನೆಯಲ್ಲಿ ಕಳೆಕೀಳುತ್ತಿದ್ದಾಗ ತಲೆತಿರುಗಿ ಬಿದ್ದ ಅವರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ 5ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ