ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ ಮುನ್ಸೂಚನೆ : ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

ಕಾರವಾರ : ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಆಗಸ್ಟ್‌ 20 ಬೆಳಗ್ಗೆ ವರೆಗೆ ರೆಡ್ ಅಲರ್ಟ್‌ ಘೋಷಿಸಲಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ಗಣನೀಯವಾಗಿ ಏರುತ್ತಿದೆ. ಜಲಾಶಯದಿಂದ ಆಗಸ್ಟ್‌ 19 ರಂದು ಬೆಳಗ್ಗೆ 10 ಗಂಟೆಯಿಂದ ಹೊರಬಿಡಲಾಗುವುದು ಎಂದು ತಿಳಿಸಲಾಗಿದೆ.
ಜಲಾಶಯದ ಗರಿಷ್ಠ ಮಟ್ಟವು 1819.00 ಅಡಿಗಳಾಗಿದ್ದು ಆಗಸ್ಟ್‌ 18 ರಂದು ಮಧ್ಯಾಹ್ನ 1 ಗಂಟೆಗೆ ಜಲಾಶಯದ ನೀರಿನ ಮಟ್ಟವು 1815.50 ಅಡಿಗಳಿಗೆ ತಲುಪಿದೆ. ಲಿಂಗನಮಕ್ಕಿ ಜಲಾಶಯದ ಒಳ ಹರಿವು ಸುಮಾರು 59,891 ಕ್ಯೂಸೆಕ್ಸ್ ಗಳಿಗಿಂತಲೂ ಅಧಿಕವಾಗಿದ್ದು ಇದೇ ರೀತಿಯಲ್ಲಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣವು ಮುಂದುವರೆದರೆ ಜಲಾಶಯವು ಶೀಘ್ರದಲ್ಲಿ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.

ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಆಗಸ್ಟ್‌ 19 ರಂದು ಬೆಳಗ್ಗೆ 10 ಗಂಟೆಯಿಂದ ಹೊರಬಿಡಲಾಗುವುದು ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರರು ಕೆ ಪಿ ಸಿ ಲಿಂಗನಮಕ್ಕಿ ಸೋಮವಾರ (ಆಗಸ್ಟ್‌ 18) ತಿಳಿಸಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮೀಪ್ರಿಯಾ ಕೆ. ತಿಳಿಸಿದ್ದಾರೆ.
ಲಿಂಗನಮಕ್ಕಿ ಜಲಾಶಯದ ತಗ್ಗು ಪ್ರದೇಶದಲ್ಲಿ ಶರಾವತಿ ನದಿಯ ಇಕ್ಕೆಲಗಳ ಪ್ರದೇಶದಲ್ಲಿರುವ ಹೊನ್ನಾವರ ತಾಲೂಕಿನ ವ್ಯಾಪ್ತಿಯಲ್ಲಿರುವ ತಳಮಟ್ಟದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

ಪ್ರವಾಹ ಸಂಭವನೀಯ ಸ್ಥಳಗಳ ಸಾರ್ವಜನಿಕರು ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯಬೇಕು ಎಂದು ಸೂಚಿಸಲಾಗಿದೆ.
ಶರಾವತಿ ನದಿಯ ತಗ್ಗು ಪ್ರದೇಶಗಳಲ್ಲಿರುವ ಸಾರ್ವಜನಿಕರ ಕುರಿತು ಕಾಳಜಿ ಕೇಂದ್ರಗಳನ್ನು ಅಣಿಗೊಳಿಸಲಾಗಿದೆ. ಮೀನುಗಾರರು, ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿಯ ಒಳಗೆ ಅಥವಾ ಅದರ ಸುತ್ತಲಿನ ಪ್ರದೇಶಗಳಿಗೆ ತೆರಳದಂತೆ ಕಟ್ಟೆಚ್ಚರ ವಹಿಸಬೇಕು. ಪ್ರವಾಸಿಗರು, ಹಾಗೂ ಸಾರ್ವಜನಿಕರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ತುರ್ತು ಸೇವೆಗೆ 24*7 ಕಂಟ್ರೋಲ್ ರೂಮ್ ಟೋಲ್ ಪ್ರೀ ಸಂಖ್ಯೆ 08382-229857 ಮತ್ತು ವಾಟ್ಸಪ್ ಸಂಖ್ಯೆ 9483511015 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement