ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಬೇಕೆಂಬ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಪ್ರಧಾನಿ ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿ ಒದಗಿಸುವಂತೆ ವಿಶ್ವವಿದ್ಯಾಲಯಕ್ಕೆ ಸಿಐಸಿ 2017ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಸಚಿನ್ ದತ್ತ ಪುರಸ್ಕರಿಸಿದರು. “ಸಿಐಸಿ ಆದೇಶವನ್ನು ರದ್ದುಗೊಳಿಸಲಾಗಿದೆ” ಎಂದು ಏಕ ಸದಸ್ಯ ಪೀಠವು ತೀರ್ಪು ಪ್ರಕಟಿಸುವಾಗ ಹೇಳಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಪ್ರಧಾನಿ ಮೋದಿಯವರ ತಮ್ಮ ಶೈಕ್ಷಣಿಕ ಪದವಿಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಅವುಗಳನ್ನು ಬಹಿರಂಗಪಡಿಸಬೇಕು ಎಂದು ಆರ್‌ಟಿಐ ಅರ್ಜಿದಾರರು ದಾವೆ ಹೂಡಿದ್ದರು. ತಾನು 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬಿಎ ರಾಜ್ಯಶಾಸ್ತ್ರ ಕೋರ್ಸ್‌ನಲ್ಲಿ ಪದವಿ ಪಡೆದಿರುವುದಾಗಿ ಮೋದಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ವಿವರಿಸಿದ್ದರು.
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ 2016ರಲ್ಲಿ ಪ್ರಧಾನಿ ಮೋದಿಯವರು “ತಮ್ಮ ಶೈಕ್ಷಣಿಕ ಪದವಿ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಪದವಿ ಪ್ರಮಾಣಪತ್ರಗಳನ್ನು ಬಹಿರಂಗಪಡಿಸಬೇಕು ಎಂದು ಕೋರಿದ್ದರು.
ಅದಕ್ಕೂ ಒಂದು ವರ್ಷದ ಮೊದಲು ದೆಹಲಿ ವಿಶ್ವವಿದ್ಯಾಲಯದಿಂದ ಪ್ರಧಾನಿ ಮೋದಿಯವರ ಪದವಿಯ ವಿವರಗಳನ್ನು ಕೋರಿ ಆರ್‌ಟಿಐ ಅಡಿ ಆಮ್ ಆದ್ಮಿ ಪಕ್ಷದ ಬೆಂಬಲಿಗ ನೀರಜ ಶರ್ಮಾ ಅರ್ಜಿ ಸಲ್ಲಿಸಿದ್ದರು. ಆದರೆ ಈ ಮಾಹಿತಿ ಖಾಸಗಿಯಾಗಿದ್ದು ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ಸಂಬಂಧವಿಲ್ಲ ಎಂದ ವಿವಿ ಪದವಿ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿತು.
ಡಿಸೆಂಬರ್ 2016ರಲ್ಲಿ, ಶರ್ಮಾ ವಿಶ್ವವಿದ್ಯಾಲಯದ ವಿರುದ್ಧ ಸಿಐಸಿಗೆ ಅರ್ಜಿ ಸಲ್ಲಿಸಿದರು. ಅಂದಿನ ಮಾಹಿತಿ ಆಯುಕ್ತ ಪ್ರೊ ಎಂ ಆಚಾರ್ಯುಲು 1978ರಲ್ಲಿ ಬಿ ಎ ಪದವಿ ಪಡೆದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿವರವುಳ್ಳ ರೆಜಿಸ್ಟರ್ ನೀಡುವಂತೆ ಅದೇಶಿಸಿದ್ದರು. ಈ ನಿರ್ಧಾರ ಪ್ರಶ್ನಿಸಿ ವಿವಿ ಜನವರಿ 23, 2017ರಂದು ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಜನವರಿ 2017ರಲ್ಲಿ ಸಿಐಸಿ ಆದೇಶಕ್ಕೆ ತಡೆ ನೀಡಿತ್ತು.
ಜನವರಿ 23, 2017ರಂದು ವಿಶ್ವವಿದ್ಯಾಲಯ ಸಿಐಸಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಜನವರಿ 2017 ರಲ್ಲಿ ಶರ್ಮಾ ಅವರಿಗೆ ನೋಟಿಸ್ ನೀಡಿದ್ದ ನ್ಯಾಯಾಲಯವು ಸಿಐಸಿ ಆದೇಶಕ್ಕೆ ತಡೆ ನೀಡಿತು.
ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಕೋಟ್ಯಂತರ ವಿದ್ಯಾರ್ಥಿಗಳ ಪದವಿ ವಿವರಗಳನ್ನು ವಿಶ್ವಸ್ಥ ಜವಾಬ್ದಾರಿಯಿಂದ (ಫಿಡ್ಯೂಷಿಯರಿ – ಮತ್ತೊಬ್ಬರ ಮಾಹಿತಿಯನ್ನು ನಂಬಿಕೆಯಿಂದ ಇರಿಸಿಕೊಂಡಿರುವ ಜವಾಬ್ದಾರಿಯುತ ಸಂಸ್ಥೆ) ಇರಿಸಿಕೊಂಡಿವೆ ಎಂಬ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ ಮೆಹ್ತಾ ಅವರ ವಾದಗಳನ್ನು ಗಮನಿಸಿದ ನಂತರ ನ್ಯಾಯಾಲಯವು ಜನವರಿ 2017 ರಲ್ಲಿ ಶರ್ಮಾ ಅವರಿಗೆ ನೋಟಿಸ್ ನೀಡಿ ಆದೇಶವನ್ನು ತಡೆಹಿಡಿಯಿತು .
ಈ ಬಾರಿಯವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಪ್ರಧಾನಿ ಮೋದಿ ಅವರ ಪದವಿ ವಿವರಗಳನ್ನು ಅರಿಯುವುದು ಆತ್ಯಂತಿಕ ಹಕ್ಕಲ್ಲ . ಆರ್‌ಟಿಐ ಕಾಯ್ದೆಯಡಿಯಲ್ಲಿ ವೈಯಕ್ತಿಕ ಮಾಹಿತಿ ಕೇಳುವಂತಿಲ್ಲ. ಸಾರ್ವಜನಿಕ ಹುದ್ದೆಯಲ್ಲಿರುವವರನ್ನು ಬೆದರಿಸಲು ಆರ್‌ಟಿಐ ಕಾಯಿದೆ ಬಳಸುವಂತಿಲ್ಲ. ಆರ್‌ಟಿಐ ಅರ್ಜಿದಾರರು ಮಾಹಿತಿ ಹಕ್ಕು ಕಾಯಿದೆ ಅಣಕಿಸುತ್ತಿದ್ದಾರೆ ಎಂದು ವಾದಿಸಿದ್ದರು.
ಆರ್‌ಟಿಐ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸಂಜಯ ಹೆಗ್ಡೆ, ವಿದ್ಯಾರ್ಥಿಗಳ ಪದವಿ ವಿವರಗಳನ್ನು ವಿವಿಯು ವಿಶ್ವಸ್ಥನಾಗಿ (ಫಿಡ್ಯೂಷಿಯರಿ) ಇರಿಸಿಕೊಂಡಿದೆ ಎಂಬ ವಾದವನ್ನು ಪ್ರಶ್ನಿಸಿದರು. ಯಾರಾದರೂ ಚಾಲನಾ ಪರೀಕ್ಷೆಗೆ ಹೋದರೆ ಉತ್ತೀರ್ಣ ಅಥವಾ ಅನುತ್ತೀರ್ಣ ಎಂಬ ಮಾಹಿತಿ ಬಹಿರಂಗಗೊಳ್ಳುತ್ತದೆ. ಫಿಡ್ಯೂಷಿಯರಿ ವಿಚಾರ ವಿಶ್ವವಿದ್ಯಾಲಯದ ಮೌಲ್ಯಮಾಪನ ಪತ್ರಿಕೆಗಳಿಗೆ ಅನ್ವಯವಾಗದು ಎಂದರು. “ಪದವಿ ಸಂಬಂಧಿತ ಮಾಹಿತಿಯು ಸಾರ್ವಜನಿಕ ವಲಯದಲ್ಲಿ ಲಭ್ಯವಿದೆ. ಸಾಮಾನ್ಯ ವ್ಯಕ್ತಿಯೇ ಆಗಲಿ ಅಥವಾ ಸೆಲೆಬ್ರಿಟಿಗಳೇ ಆಗಲಿ ಸಂಬಂಧಿಸಿದ ಮಾಹಿತಿ ಪಡೆಯಲು ಅವಕಾಶ ಇರಬೇಕು” ಎಂದು ಅವರು ವಾದಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ