ಹೊನ್ನಾವರ | ಮಾರುತಿ ಓಮ್ನಿ ವಾಹನದ ನಾಲ್ಕೂ ಟೈರ್‌ ಕದ್ದೊಯ್ದ ಕಳ್ಳರು

ಹೊನ್ನಾವರ: ಮಾರುತಿ ಓಮ್ನಿ ವಾಹನದ ನಾಲ್ಕೂ ಟೈರ್‌ಗಳನ್ನು ಕಳ್ಳತನ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಾಳೆಗದ್ದೆ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಶಿರಸಿಯ ಕಸ್ತೂರಬಾ ನಗರದ ನಿವಾಸಿ ಸತೀಶ ಶೆಟ್ಟಿ ಎಂಬವರಿಗೆ ಸೇರಿದೆ. ಅವರು ಹೊನ್ನಾವರ ತಾಲೂಕಿನ ಬಾಳೆಗದ್ದೆ ಸಂಬಂಧಿಕರ ಮನೆಗೆ ಹೋದಾಗ ಈ ಘಟನೆ ನಡೆದಿದೆ. ರಾತ್ರಿ ಅವರು ರಸ್ತೆ ಬಳಿ ವಾಹನ ನಿಲ್ಲಿಸಿದ್ದರು. ಆದರೆ ಬೆಳಗಾಗುವಷ್ಟರಲ್ಲಿ ವಾಹನದ ನಾಲ್ಕೂ ಟೈರ್‌ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಶನಿವಾರ ಸಂಜೆಯಿಂದ ರವಿವಾರ ಬೆಳಿಗ್ಗೆ 8:30ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸತೀಶ ಅವರ ಮಾರುತಿ ಓಮ್ನಿ ವಾಹನದಲ್ಲಿದ್ದ ಡಿಸ್ಕ್ ಸಮೇತದ ನಾಲ್ಕೂ ಟೈರ್‌ಗಳನ್ನು ಕಳ್ಳತನ ಮಾಡಿದ್ದಾರೆ. ಟೈರ್‌ ಇರುವ ಜಾಗದಲ್ಲಿ ಕೆಂಪು ಕಲ್ಲುಗಳನ್ನು ತಂದಿಟ್ಟು ನಾಲ್ಕು ಟೈರ್‌ಗಳನ್ನು ಕದ್ದೊಯ್ದಿದ್ದಾರೆ ಎಂದು ಸತೀಶ ಶೆಟ್ಟಿ ತಿಳಿಸಿದ್ದಾರೆ. ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement