ಬೆಂಗಳೂರು :ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಚುನಾವಣೆಯಲ್ಲಿ ವಂಚನೆಯಿಂದಾಗಿ ಸೋತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿಕೊಂಡಿದ್ದಾರೆ. ಇದು ಬಿಹಾರದಲ್ಲಿ “ಮತ ಅಧಿಕಾರ ಯಾತ್ರೆ” ಆಯೋಜಿಸಿರುವ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಲು ಬಿಜೆಪಿಗೆ ಅವಕಾಶ ನೀಡಿದೆ.
1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ (Siddaramaiah) ಕಾಂಗ್ರೆಸ್‌ನ ಬಸವರಾಜ ಪಾಟೀಲ್ ಅನ್ವರಿ ವಿರುದ್ಧ ಸೋಲು ಕಂಡಿದ್ದರು. ಈ ಚುನಾವಣೆಯಲ್ಲಿ ತಮ್ಮನ್ನು ಮೋಸದಿಂದ ಸೋಲಿಸಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಈ ಹೇಳಿಕೆ ಕಾಂಗ್ರೆಸ್ ಹಾಗೂ ಮತಗಳ್ಳತನ ಆರೋಪ ಮಾಡಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗೆ ತಿರುಗುಬಾಣವಾಗಿದೆ.
ವಕೀಲರ ಸಂಘದಿಂದ ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದ ಸಿದ್ದರಾಮಯ್ಯ, , ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ವಂಚನೆ (fraud)ಯಿಂದಾಗಿ ನಾನು ಸೋತಿದ್ದೇನೆ ಎಂದು ನಾವು ಹೇಳಬಹುದು. ಆ ಸಮಯದಲ್ಲಿ, ರವಿವರ್ಮಕುಮಾರ ವಕೀಲರಾಗಿ ನನಗಾಗಿ ಹೋರಾಡಿದರು,” ಎಂದು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.
ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದ ಅಂದಿನ ಸಂಸದರಾಗಿದ್ದ ಬಸವರಾಜ ಪಾಟೀಲ್ ಅನ್ವರಿ, 1991 ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳದಿಂದ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದರು.
2024ರ ಲೋಕಸಭೆ ಚುನಾವಣೆ ವೇಲೆ ಮತಗಳ್ಳತನವಾಗಿದೆ ಎಂದು ರಾಹುಲ್ ಗಾಂಧಿ (Rahul Gandhi) ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರ ಈಗ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ, ಅಂದು ಜೆಡಿಎಸ್ ನಿಂದ ಸ್ಪರ್ಧಿಸಿದ್ದ ನಿಮ್ಮನ್ನು ಕಾಂಗ್ರೆಸ್ ಮೋಸದಿಂದ ಸೋಲಿಸಿದೆ ಅಲ್ಲವೇ? ಎಂದು ಸಿದ್ದರಾಮಯ್ಯನವರಿಗೆ ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದ ಮತಗಳ್ಳತನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಯಲು ಮಾಡಿದ್ದಾರೆ. ಈಗ ರಾಜಣ್ಣ ಅವರಿಗೆ ಮಾಡಿದ ಹಾಗೆ ಸಿದ್ದರಾಮಯ್ಯ ಅವರನ್ನೂ ವಜಾ ಮಾಡ್ತೀರಾ ಎಂದು ರಾಹುಲ್ ಗಾಂಧಿಗೆ ವಿಪಕ್ಷ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅಶೋಕ, 1991ರಲ್ಲಿ ಸಿದ್ದರಾಮಯ್ಯನವರು ಲೋಕಸಭೆಗೆ ಸ್ಪರ್ಧಿಸಿದ್ದರು. ಎಲ್ಲಿಂದ? – ಕೊಪ್ಪಳ ಲೋಕಸಭಾ ಕ್ಷೇತ್ರದಿಂದ, ಯಾವ ಪಕ್ಷದಿಂದ? – ಜನತಾದಳ ಪಕ್ಷದಿಂದ. ಸಿದ್ದರಾಮಯ್ಯನವರನ್ನ ಮೋಸದಿಂದ ಸೋಲಿಸಿದ್ದು ಯಾರು? – ಕಾಂಗ್ರೆಸ್ ಪಕ್ಷ ಎಂದು ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಕಾಂಗ್ರೆಸ್ಸಿನದು “ಬೂಟಾಟಿಕೆ” ಎಂದು ಟೀಕಿಸಿದ್ದಾರೆ. 1991 ರ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ “ಚುನಾವಣಾ ವಂಚನೆ”ಗೆ ಬಲಿಯಾಗಿದ್ದಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಮೋಸದಿಂದ ಸೋಲಿಸಿದರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ವೀಡಿಯೊ ಇದಕ್ಕೆ ಸಾಕ್ಷಿ. ಮತಗಳ್ಳತನ ವಿರುದ್ಧ ಹೋರಾಡಿದ ಕಾಂಗ್ರೆಸ್ಸಿನ ಅದೇ ವ್ಯಕ್ತಿ ಇಂದು ಅವರ ಮುಖ್ಯಮಂತ್ರಿಯಾಗಿದ್ದು, ಮತ ಅಧಿಕಾರ ರ್ಯಾಲಿಯ ನೇತೃತ್ವ ವಹಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ಚುನಾವಣೆಗಳನ್ನು ಗೆಲ್ಲಲು ಬಿಜೆಪಿ “ಮತ ವಂಚನೆ” ಮಾಡಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸುತ್ತಿದೆ, ಬಿಜೆಪಿ ಈ ಆರೋಪವನ್ನು ನಿರಾಕರಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ