ಕುಮಟಾ | ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆಗೆ ವಿರೋಧ; ವ್ಯಕ್ತಿ ಮೇಲೆ ಹಲ್ಲೆ

ಕುಮಟಾ: ಪಟ್ಟಣದ ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿ ಬುಧವಾರ ಗಣೇಶ ವಿಸರ್ಜನೆ ವೇಳೆ ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ಆದೇಶವನ್ನು ಲೆಕ್ಕಿಸದೇ ಡಿಜೆ ಬಳಕೆ ಮಾಡಿದ ಕಾರಣಕ್ಕೆ ಆಕ್ಷೇಪಿಸಿದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಬಳಕೆ ಮಾಡಬಾರದೆಂದು ಸರಕಾರದಿಂದ ಖಡಕ್ ಆದೇಶ ಹೊರಡಿಸಲಾಗಿತ್ತು. ಆದರೆ, ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ದೊಡ್ಡ ಪ್ರಮಾಣದಲ್ಲಿ ಡಿಜೆ ಬಳಕೆ ಮಾಡಲಾಗಿದ್ದು, ಇದರಿಂದ ವ್ಯಕ್ತಿಯೊಬ್ಬರು ಈ ಬಗ್ಗೆ ದೂರು ನೀಡಿದ್ದರು ಎನ್ನಲಾಗಿದೆ.
ಇಂದು ಸಂಜೆ ಸ್ಥಳೀಯ ಪೊಲೀಸರು ಹಳೆ ಬಸ್‌ ನಿಲ್ದಾಣದ ಬಳಿ ಘಟನೆ ಸಂಬಂಧ ಪಂಚನಾಮೆ ಮಾಡುತ್ತಿರುವ ವೇಳೆ, ಕೆಲ ಯುವಕರ ಗುಂಪು ಪೊಲೀಸರ ಎದುರೇ ದೂರುದಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಇದೀಗ ಕುಮಟಾ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement