ನ್ಯಾ. ಯಶವಂತ ವರ್ಮಾ ಹಗರಣದ ತನಿಖಾ ಸಮಿತಿಗೆ ಕಾರ್ಯದರ್ಶಿಯಾಗಿ ಉತ್ತರ ಕನ್ನಡ ಮೂಲದ ಗಣಪತಿ ಭಟ್ ನೇಮಕ

ಬೆಂಗಳೂರು : ಮಾಜಿ ಐಆರ್‌ಎಸ್ ಅಧಿಕಾರಿ ಗಣಪತಿ ಭಟ್ ಅವರನ್ನು, ದೋಷಾರೋಪಣೆ ಎದುರಿಸುತ್ತಿರುವ ನ್ಯಾಯಮೂರ್ತಿ ಯಶವಂತ ವರ್ಮಾ ವಿರುದ್ಧದ ಆರೋಪಗಳ ತನಿಖೆಗಾಗಿ ನ್ಯಾಯಾಧೀಶರ (ವಿಚಾರಣಾ) ಕಾಯ್ದೆಯಡಿ ರಚಿಸಲಾದ ಮೂವರು ಸದಸ್ಯರ ಸಮಿತಿಗೆ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ 1989 ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಭಟ್ ಅವರನ್ನು ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅರವಿಂದಕುಮಾರ, ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ ಶ್ರೀವಾಸ್ತವ ಮತ್ತು ಹಿರಿಯ ವಕೀಲ ಬಿ.ವಿ. ಆಚಾರ್ಯ ಇದ್ದಾರೆ. ಈ ಸಮಿತಿಗೆ ಗಣಪತಿ ಭಟ್‌ ಅವರನ್ನು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಆದಾಯ ತೆರಿಗೆ (ಕರ್ನಾಟಕ ಮತ್ತು ಗೋವಾ ಪ್ರದೇಶ)ದ ಪ್ರಧಾನ ಮುಖ್ಯ ಆಯುಕ್ತರಾಗಿ ನಿವೃತ್ತರಾದ ಗಣಪತಿ ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅಣಲಗಾರ ಬಳಿಯ ಬಿದ್ರೆಪಾಲಿನವರು ಎಂದು ಹೇಳಲಾಗಿದೆ. ನವದೆಹಲಿಯಲ್ಲಿ ಆದಾಯ ತೆರಿಗೆ (ಅಂತಾರಾಷ್ಟ್ರೀಯ ತೆರಿಗೆ)ಯ ಪ್ರಧಾನ ಮುಖ್ಯ ಆಯುಕ್ತರಾಗಿ ಮತ್ತು ಲೋಕಸಭೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.ಅವರು ಆದಾಯ ತೆರಿಗೆ ತನಿಖಾ ಮಹಾನಿರ್ದೇಶಕರಾಗಿ (ಕರ್ನಾಟಕ ಮತ್ತು ಗೋವಾ ಮತ್ತು ಕೇರಳ) ಸಹ ಸೇವೆ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ವರ್ಮಾ ವಿರುದ್ಧದ ಆರೋಪಗಳ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಬಿರ್ಲಾ ಕಳೆದ ತಿಂಗಳು ಘೋಷಿಸಿದ್ದರು. ಮಾರ್ಚ್‌ನಲ್ಲಿ ನಡೆದ ಬೆಂಕಿ ಅವಘಡದ ನಂತರ ದೆಹಲಿಯಲ್ಲಿರುವ ಅವರ ಅಧಿಕೃತ ನಿವಾಸದಿಂದ ಸುಟ್ಟುಹೋದ ಕರೆನ್ಸಿ ನೋಟುಗಳು ಪತ್ತೆಯಾಗಿದ್ದವು. ಭ್ರಷ್ಟಾಚಾರದ ಆರೋಪದಲ್ಲಿ ನ್ಯಾಯಮೂರ್ತಿ ವರ್ಮಾ ತಪ್ಪಿತಸ್ಥರೆಂದು ಸಮಿತಿಯು ತೀರ್ಮಾನಿಸಿದರೆ, ಸಂಸತ್ತಿನಲ್ಲಿ ದೋಷಾರೋಪಣೆ ಪ್ರಕ್ರಿಯೆಗಳು ಪ್ರಾರಂಭವಾಗುತ್ತವೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement