ನವದೆಹಲಿ: ಬಿಜೆಪಿಯು ತನ್ನ ಎಲ್ಲಾ ಸಂಸದರು ಪಾಲ್ಗೊಳ್ಳುವ ಎರಡು ದಿನಗಳ ಕಾರ್ಯ ಕಾರ್ಯಾಗಾರವನ್ನು ನಡೆಸುವ ಮೂಲಕ ಉಪರಾಷ್ಟ್ರಪತಿ ಚುನಾವಣೆಗೆ ಸಜ್ಜಾಗಿದೆ. ಭಾನುವಾರ (ಸೆಪ್ಟೆಂಬರ್ 7) ಪ್ರಾರಂಭವಾದ ಕಾರ್ಯಾಗಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಇತರ ಕಾರ್ಯಕರ್ತರೊಂದಿಗೆ ಕೊನೆಯ ಸಾಲಿನಲ್ಲಿ ಕುಳಿತುಕೊಂಡಿದ್ದು ವಿಶೇಷವಾಗಿ ಗಮನಸೆಳೆಯಿತು.
ಸೆಪ್ಟೆಂಬರ್ 3 ರಂದು ಜಿಎಸ್ಟಿ ಕೌನ್ಸಿಲ್ ಅನುಮೋದಿಸಿದ ಪ್ರಮುಖ ಜಿಎಸ್ಟಿ ಸುಧಾರಣೆಗಳನ್ನು ಕಾರ್ಯಾಗಾರವು ಅನುಮೋದಿಸಿತು. ಇದು ಭಾರತದ ಪರೋಕ್ಷ ತೆರಿಗೆ ವ್ಯವಸ್ಥೆಯ ಅತ್ಯಂತ ಮಹತ್ವದ ಪರಿಷ್ಕರಣೆಗಳಲ್ಲಿ ಒಂದಾಗಿದೆ. ಕೌನ್ಸಿಲ್ನ ನಿರ್ಧಾರವು ತೆರಿಗೆ ಸ್ಲ್ಯಾಬ್ಗಳ ಸಂಖ್ಯೆಯನ್ನು ಕಡಿಮೆ ಮಾಡಿತು ಮತ್ತು ವ್ಯಾಪಕ ಶ್ರೇಣಿಯ ಅಗತ್ಯ ಸರಕು ಮತ್ತು ಸೇವೆಗಳಲ್ಲಿ ದರಗಳನ್ನು ಕಡಿತಗೊಳಿಸಿತು. ಮೂಲಗಳ ಪ್ರಕಾರ, ಕಾರ್ಯಕ್ರಮದ ಸಮಯದಲ್ಲಿ ಬಿಜೆಪಿ ಸಂಸದರು ಜಿಎಸ್ಟಿ ಸುಧಾರಣೆಗಳಿಗಾಗಿ ಪ್ರಧಾನಿ ಮೋದಿಯವರನ್ನು ಸನ್ಮಾನಿಸಿದರು.
ಕಾರ್ಯಾಗಾರದ ಮೊದಲ ದಿನವು ಎರಡು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿದೆ – ‘2027 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ’ ಮತ್ತು ‘ಸಂಸದರಿಂದ ಸಾಮಾಜಿಕ ಮಾಧ್ಯಮದ ಪರಿಣಾಮಕಾರಿ ಬಳಕೆ’. ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ದೀಪ ಬೆಳಗಿಸುವ ಸಮಾರಂಭ, ವಂದೇ ಮಾತರಂ, ಪರಿಚಯಾತ್ಮಕ ಭಾಷಣ ಮತ್ತು ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು. ಈ ಕಾರ್ಯಕ್ರಮವು ಮುಂಬರುವ ಸಂಸತ್ತಿನ ಅಧಿವೇಶನದ ಸಿದ್ಧತೆಗಳು, ಸಂಸದೀಯ ಕಾರ್ಯವಿಧಾನಗಳು, ಅಧೀನ ಶಾಸನ ಮತ್ತು ಸದನದ ಒಳಗೆ ಸಮಯ ನಿರ್ವಹಣೆಯನ್ನು ಸಹ ಒಳಗೊಂಡಿದೆ.
ಕಾರ್ಯಾಗಾರದ ಎರಡನೇ ದಿನವು ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಸಂಸದರಿಗೆ ತರಬೇತಿ ನೀಡುವ ಬಗ್ಗೆ ಗಮನಹರಿಸುತ್ತದೆ.
ಉಪರಾಷ್ಟ್ರಪತಿ ಚುನಾವಣೆ
ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ನ್ಯಾಯಮೂರ್ತಿ (ನಿವೃತ್ತ) ಬಿ ಸುದರ್ಶನ ರೆಡ್ಡಿ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಇಬ್ಬರೂ ಅಭ್ಯರ್ಥಿಗಳು ದಕ್ಷಿಣ ಭಾರತದವರಾಗಿದ್ದಾರೆ. ರಾಧಾಕೃಷ್ಣನ್ ಅವರು ತಮಿಳುನಾಡಿನವರು ಹಾಗೂ ಸುದರ್ಶನ ರೆಡ್ಡಿ ಅವರು ತೆಲಂಗಾಣದವರು.
ರಾಧಾಕೃಷ್ಣನ್ (67) ಅವರು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಕೊಯಮತ್ತೂರಿನಿಂದ ಎರಡು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನಂತರ ಅವರು ತಮಿಳುನಾಡಿನಲ್ಲಿ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾರೆ. ಅವರು ಶಾಸಕಾಂಗ ಚಾತುರ್ಯ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ.
ಇಂಡಿಯಾ ಬಣದ ಉಪರಾಷ್ಟ್ರಪತಿ ಅಭ್ಯರ್ಥಿಯಾದ ಸುದರ್ಶನ ರೆಡ್ಡಿ (79) ಅವರು ಜುಲೈ 2011 ರಲ್ಲಿ ನಿವೃತ್ತರಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು. ಕಪ್ಪು ಹಣ ಪ್ರಕರಣಗಳ ತನಿಖೆಯಲ್ಲಿ “ಆಲಸ್ಯ” ತೋರಿಸಿದ್ದಕ್ಕಾಗಿ ಆಗಿನ ಕೇಂದ್ರ ಸರ್ಕಾರವನ್ನು ಟೀಕಿಸಿದ ಹಲವಾರು ಮಹತ್ವದ ತೀರ್ಪುಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ. ಛತ್ತೀಸಗಢ ಸರ್ಕಾರ ನೇಮಿಸಿದ ಸಲ್ವಾ ಜುಡುಮ್ ಅನ್ನು ಅವರು ಸಂವಿಧಾನಬಾಹಿರ ಎಂದು ಘೋಷಿಸಿದ್ದರು.
ಕೇಂದ್ರದಲ್ಲಿ ಆಡಳಿತಾರೂಢ ಎನ್ಡಿಎ ಪರವಾಗಿ ಸಂಖ್ಯಾಬಲಗಳು ಅನುಕೂಲಕರವಾಗಿದ್ದರೂ ವಿಪಕ್ಷಗಳು ಉಪರಾಷ್ಟ್ರಪತಿ ಈ ಚುನಾವಣೆಯನ್ನು ಸೈದ್ಧಾಂತಿಕ ಯುದ್ಧ ಎಂದು ಬಣ್ಣಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ