ಬೆಂಗಳೂರು: ರಾಜ್ಯ ಸರ್ಕಾರ ಕನ್ನಡದ ಖ್ಯಾತ ನಟರಾದ ವಿಷ್ಣುವರ್ಧನ್ ಹಾಗೂ ಸರೋಜಾದೇವಿಗೆ ಮರಣೋತ್ತರ ʼಕರ್ನಾಟಕ ರತ್ನʼ ಪ್ರಶಸ್ತಿ ಘೋಷಿಸಿದೆ. ಕನ್ನಡ ಚಿತ್ರರಂಗಕ್ಕೆ ಈ ಇಬ್ಬರು ಕಲಾವಿದರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ನಟರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಇಂದು ಗುರುವಾರ (ಸೆ.೧೨) ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಪ್ರಶಸ್ತಿಯನ್ನು ಯಾವಾಗ, ಎಲ್ಲಿ ಪ್ರದಾನ ಮಾಡಬೇಕೆಂದು ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್ ಕೆ ಪಾಟೀಲ ತಿಳಿಸಿದ್ದಾರೆ. ಅಲ್ಲದೆ, ಸಂಪುಟ ಸಭೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಕಳುಹಿಸಲು ನಿರ್ಣಯ ಅಂಗೀಕರಿಸಲಾಯಿತು ಎಂದು ತಿಳಿಸಿದರು.
200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎನ್ನುವುದು ಅವರ ಅಪಾರ ಅಭಿಮಾನಿಗಳ ಕೋರಿಕೆಯಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ ಭೇಟಿಯಾಗಿದ್ದರು. ಅಲ್ಲದೇ, ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ ಮೊದಲಾದವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದರು. ಕನ್ನಡ ಚಿತ್ರರಂಗಕ್ಕೆ ಈ ಇಬ್ಬರು ಕಲಾವಿದರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಈಗ ಅವರಿಗೆ ಕರ್ನಾಟಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
1972ರಲ್ಲಿ ವಂಶವೃಕ್ಷ ಚಿತ್ರದಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅವರು ಅದೇ ವರ್ಷ ಬಿಡುಗಡೆಯಾಗಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡರು. ಈ ಚಿತ್ರ ಸೂಪರ್ ಹಿಟ್ ಆಯಿತು. ಮೊದಲ ಪ್ರಯತ್ನದಲ್ಲೇ ವಿಷ್ಣುವರ್ಧನ್ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು 220 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯವು 2005ರಲ್ಲಿ ವಿಷ್ಣುವರ್ಧನ್ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿತ್ತು. ವಿಷ್ಣುವರ್ಧನ್ 2009ರಲ್ಲಿ ನಿಧನ ಹೊಂದಿದ್ದಾಗ ಅವರಿಗೆ 59 ವರ್ಷ ವಯಸ್ಸಾಗಿತ್ತು.
ಕನ್ನಡದ ಹಿರಿಯ ಚಲನಚಿತ್ರ ನಟಿಯರಲ್ಲಿ ಬಿ. ಸರೋಜಾದೇವಿ ಸಹ ಒಬ್ಬರು. ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸುವ ಮೂಲಕ ಅವರು ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಅಭಿನಯ ಸರಸ್ವತಿ’ ಮತ್ತು ತಮಿಳಿನಲ್ಲಿ ‘ಕನ್ನಡತು ಪೈಂಗಿಲಿ’ (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಅವರನ್ನು ಕರೆಯಲಾಗುತ್ತದೆ. ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತ ಸರ್ಕಾರ ಅವರಿಗೆ 2008ರ ಜೀವಮಾನ ಸಾಧನೆ ಪ್ರಶಸ್ತಿ ನೀಡಿತ್ತು. 1969ರಲ್ಲಿ ಪದ್ಮಶ್ರೀ ಹಾಗೂ 1992ರಲ್ಲಿ ‘ಪದ್ಮಭೂಷಣ ಪ್ರಶಸ್ತಿ’ ಗೆ ಭಾಜನರಾಗಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ