ಅಮೆರಿಕದ H-1B ವೀಸಾಗಳಿಗೆ $1,00,000 (₹88 ಲಕ್ಷ) ಶುಲ್ಕ ವಿಧಿಸಿದ ಅಧ್ಯಕ್ಷ ಟ್ರಂಪ್‌ : ಭಾರತೀಯರ ಮೇಲೆ ಇದರ ಪರಿಣಾಮವೇನು..?

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸೆ ನಿಯಂತ್ರಣದ ಹೊಸ ಹೆಜ್ಜೆಯಾಗಿ, H-1B ವೀಸಾ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಗೆ ಮುಂದಾಗಿದ್ದಾರೆ. ಅವರು ಸಹಿ ಹಾಕಿದ ನೂತನ ಘೋಷಣೆಯಂತೆ, ಈಗ H-1B ವೀಸಾ ಸ್ಪಾನ್ಸರ್ ಮಾಡಲು ಕಂಪನಿಗಳಿಗೆ ಪ್ರತಿ ಅರ್ಜಿದಾರನಿಗೆ $100,000 (ಅಂದರೆ ಸುಮಾರು ₹88 ಲಕ್ಷ) ಶುಲ್ಕ ವಿಧಿಸಲಾಗುತ್ತದೆ.
ಈ ಕ್ರಮದಿಂದ ಭಾರತೀಯ ಮತ್ತು ಚೀನಾದಂತಹ ದೇಶಗಳಿಂದ ಅಮೆರಿಕಕ್ಕೆ ಕೆಲಸಕ್ಕಾಗಿ ಹೋಗುವ ನಿಪುಣ ಉದ್ಯೋಗಿಗಳಿಗೆ ಭಾರಿ ಆರ್ಥಿಕ ಹೊರೆ ಉಂಟಾಗಲಿದೆ. ಅಮೆರಿಕ ಸರ್ಕಾರದ ವಲಸೆ ನೀತಿ ಪ್ರಕಾರ, ಟೆಕ್ ಕಂಪನಿಗಳು ಬಳಸುವ H-1B ವೀಸಾ ಈಗ ಹೆಚ್ಚು ದುಬಾರಿಯಾಗಲಿದೆ. ಇದು ಭಾರತ ಮತ್ತು ಚೀನಾದ ನುರಿತ ಕೆಲಸಗಾರರನ್ನು ಹೆಚ್ಚು ಅವಲಂಬಿಸಿರುವ ಅಮೆರಿಕದ ತಂತ್ರಜ್ಞಾನ ವಲಯಕ್ಕೆ ಗಮನಾರ್ಹ ಹೊಡೆತ ನೀಡುವ ಸಾಧ್ಯತೆಯಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಕಾರ, ದೇಶಕ್ಕೆ ಕರೆತರಲಾಗುವ ಜನರು “ವಾಸ್ತವವಾಗಿ ಅತ್ಯಂತ ಹೆಚ್ಚು ನುರಿತವರು” ಆಗಿರಬೇಕು ಮತ್ತು ಅವರು ಅಮೇರಿಕನ್ ಕೆಲಸಗಾರರನ್ನು ಬದಲಾಯಿಸಬಾರದು ಎಂದು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಈ ಕ್ರಮ ಹೊಂದಿದೆ. “ನಮಗೆ ಕೆಲಸಗಾರರು ಬೇಕು. ನಮಗೆ ಉತ್ತಮ ಕೆಲಸಗಾರರು ಬೇಕು, ಮತ್ತು ಆದರೆ ಅವರು ಅಮೆರಿಕದ ಕೆಲಸಗಾರರನ್ನು ಬದಲಿಸಬಾರದು” ಎಂದು ಅವರು ಹೇಳಿದರು.

H-1B ವೀಸಾಗಳು ವಿದೇಶಿಯರನ್ನು ಉನ್ನತ ಕೌಶಲ್ಯದ ಉದ್ಯೋಗಗಳಿಗೆ ಅಮೆರಿಕಗೆ ಕರೆತರಲು ಉದ್ದೇಶಿಸಿವೆ. ಅಮೆರಿಕ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ಕೊಟ್ಟು ನೇಮಿಸಿಕೊಳ್ಳುವುದು ಟೆಕ್‌ ಕಂಪನಿಗಳಿಗೆ ಕಷ್ಟ. ಹೀಗಾಗಿ, ಕಡಿಮೆ ಸಂಬಳಕ್ಕೆ ನುರಿತ, ಕೌಶಲಪೂರ್ಣ ವಿದೇಶಿ ಉದ್ಯೋಗಿಗಳನ್ನು ಕರೆತಂದು ಕೆಲಸ ನೀಡುತ್ತಿವೆ. ಅದಕ್ಕಾಗಿ ಹೆಚ್‌-1ಬಿ ವೀಸಾ ಕ್ರಮ ಅಮೆರಿಕದಲ್ಲಿ ಜಾರಿಯಲ್ಲಿದೆ.
ಆದರೆ “ಈ ಕ್ರಮದಿಂದ ಕಂಪನಿಗಳು H-1B ಅರ್ಜಿದಾರರನ್ನು ಪ್ರಾಯೋಜಿಸಲು ಪಾವತಿಸುವ ಶುಲ್ಕವನ್ನು $100,000 ಪಾವತಿಸಬೇಕಾಗುತ್ತದೆ. ಇದು ಅವರು ಕರೆತರುವ ಜನರು ವಾಸ್ತವವಾಗಿ ಅತ್ಯಂತ ಹೆಚ್ಚು ಕೌಶಲ್ಯ ಹೊಂದಿದ್ದಾರೆ ಮತ್ತು ಅವರನ್ನು ಅಮೇರಿಕನ್ ಕೆಲಸಗಾರರು ಬದಲಾಯಿಸಲಾಗುವುದಿಲ್ಲ ಎಂದು ಖಚಿತಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ.

H-1B ವೀಸಾ ಎಂದರೇನು…?
H-1B ವೀಸಾ ಅಮೆರಿಕದ ತಾತ್ಕಾಲಿಕ ಕೆಲಸದ ವೀಸಾ ಆಗಿದ್ದು, ಇದು ಅಮೆರಿಕದ ಕಂಪನಿಗಳು ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಉದ್ಯೋಗಗಳನ್ನು ತುಂಬಲು ಕಷ್ಟಕರವೆಂದು ಪರಿಗಣಿಸಲಾದ ಕ್ಷೇತ್ರಗಳಲ್ಲಿ, ವಿಶೇಷವಾಗಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿ ಹೊಂದಿರುವ ಜನರಿಗಾಗಿ ಇದನ್ನು 1990 ರಲ್ಲಿ ಜಾರಿಗೆ ತರಲಾಯಿತು.
ಆರಂಭದಲ್ಲಿ ವೀಸಾವನ್ನು ಮೂರು ವರ್ಷಗಳವರೆಗೆ ನೀಡಲಾಗುತ್ತದೆ, ಆದರೆ ಗರಿಷ್ಠ ಆರು ವರ್ಷಗಳವರೆಗೆ ವಿಸ್ತರಿಸಬಹುದು. ಗ್ರೀನ್ ಕಾರ್ಡ್ (ಶಾಶ್ವತ ನಿವಾಸ) ಪಡೆದವರಿಗೆ, ವೀಸಾವನ್ನು ಅನಿರ್ದಿಷ್ಟವಾಗಿ ನವೀಕರಿಸಬಹುದು. ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಅಮೆರಿಕ ಪೌರತ್ವ ಮತ್ತು ವಲಸೆ ಸರ್ವಿಸ್‌ನಲ್ಲಿ (USCIS) ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳುತ್ತಾರೆ, ಅದರ ನಂತರ ಲಾಟರಿ ವ್ಯವಸ್ಥೆ ಮೂಲಕ ಅರ್ಜಿದಾರರನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುತ್ತದೆ. ಆದಾಗ್ಯೂ, ಟ್ರಂಪ್ ಆಡಳಿತವು ಅರ್ಜಿಗಳನ್ನು ಪರಿಗಣಿಸುವ ವಿಧಾನಕ್ಕೆ ಮತ್ತಷ್ಟು ಬದಲಾವಣೆಗಳನ್ನು ತರಲು ಯೋಜಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಒಮ್ಮೆ ಮಂಜೂರು ಮಾಡಿದ ನಂತರ, ವೀಸಾವು ಅಮೆರಿಕನ್ನರಂತೆಯೇ ಸಮಾನ ವೇತನ ಮತ್ತು ಹೋಲಿಸಬಹುದಾದ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸುತ್ತದೆ.

ಭಾರತೀಯರ ಮೇಲೆ ಏನು ಪರಿಣಾಮ…?
H-1B ವೀಸಾ ಹೊಂದಿರುವವರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರಿ ದತ್ತಾಂಶದ ಪ್ರಕಾರ, ಕಳೆದ ವರ್ಷ ಭಾರತದವರು ಅತಿಹೆಚ್ಚು H-1B ವೀಸಾಗಳನ್ನು ಪಡೆದಿದ್ದು, ಅನುಮೋದಿತರಲ್ಲಿ ಶೇಕಡಾ 71ರಷ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಚೀನಾ ಶೇಕಡಾ 11.7 ರಷ್ಟು H-1B ವೀಸಾಗಳಿಗೆ ಅನುಮೋದನೆ ಪಡೆದಿದೆ ಎಂದು ವರದಿಯಾಗಿದೆ.
2025 ರ ಮೊದಲಾರ್ಧದಲ್ಲಿ, ಅಮೆಜಾನ್ ಮತ್ತು ಅದರ ಕ್ಲೌಡ್-ಕಂಪ್ಯೂಟಿಂಗ್ ಘಟಕವಾದ ಎಡಬ್ಲ್ಯುಎಸ್‌ (AWS), 12,000 ಕ್ಕೂ ಹೆಚ್ಚು H-1B ವೀಸಾಗಳಿಗೆ ಅನುಮೋದನೆ ಪಡೆದಿವೆ ಎಂದು ವರದಿಯಾಗಿದೆ, ಆದರೆ ಮೈಕ್ರೋಸಾಫ್ಟ್ ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳು ತಲಾ 5,000 ಕ್ಕೂ ಹೆಚ್ಚು H-1B ವೀಸಾ ಅನುಮೋದನೆಗಳನ್ನು ಹೊಂದಿದ್ದವು.
ಆದಾಗ್ಯೂ, ಟ್ರಂಪ್ ಅವರ ಹೊಸ ಬದಲಾವಣೆಗಳೊಂದಿಗೆ ತಂದಿರುವ ಶುಲ್ಕಗಳು ಅಮೆರಿಕ ವೀಸಾ ಪಡೆಯಲು ಪ್ರಯತ್ನಿಸುವಾಗ ಭಾರತೀಯರಿಗೆ ಹೊರೆಯಾಗುವ ಸಾಧ್ಯತೆಯಿದೆ. ಭಾರತೀಯರು ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದಾದರೂ, ಸಾಮಾನ್ಯವಾಗಿ ಹೆಚ್ಚು ಸಮಯ ಕಾಯಬೇಕಾಗುತ್ತದೆ. ಈ ಸಮಯದಲ್ಲಿ, ಅವರು ತಮ್ಮ ವೀಸಾಗಳನ್ನು ಕಾಲಕಾಲಕ್ಕೆ ನವೀಕರಿಸಬೇಕಾಗುತ್ತದೆ. ಹೀಗಾಗಿ ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿ ಇರುವವರು ತಮ್ಮ ವೀಸಾ ನವೀಕರಣಕ್ಕೆ ಮತ್ತೆ ಮತ್ತೆ ₹88 ಲಕ್ಷ ಪಾವತಿಸಬೇಕಾಗಬಹುದು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಅಲ್ಲದೆ, ಅಮೆರಿಕ ಸರ್ಕಾರವು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಹೆಚ್ಚು ಬೇಡಿಕೆಯ ಪರೀಕ್ಷೆಯನ್ನು ಪರಿಚಯಿಸುತ್ತಿದೆ . ಇದನ್ನು ಟ್ರಂಪ್ ತಮ್ಮ 2020 ರ ಅಧ್ಯಕ್ಷತೆಯಲ್ಲಿ ಜಾರಿಗೆ ತಂದಿದ್ದರು, ಆದರೆ ಹಿಂದಿನ ಜೋ ಬೈಡನ್‌ ಆಡಳಿತವು ಅದನ್ನು ರದ್ದುಗೊಳಿಸಿತ್ತು. ವರದಿಗಳ ಪ್ರಕಾರ, ಅರ್ಜಿದಾರರು ಅಮೆರಿಕದ ಇತಿಹಾಸ ಮತ್ತು ರಾಜಕೀಯವನ್ನು ಒಳಗೊಂಡ 128 ಪ್ರಶ್ನೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ ಮತ್ತು 20 ರಲ್ಲಿ 12 ಪ್ರಶ್ನೆಗಳಿಗೆ ಮೌಖಿಕವಾಗಿ ಸರಿಯಾಗಿ ಉತ್ತರಿಸಬೇಕಾಗುತ್ತದೆ.
‘ಗೋಲ್ಡ್ ಕಾರ್ಡ್’ ಯೋಜನೆ ಕೂಡ ಘೋಷಣೆ
ಟ್ರಂಪ್ ನೇತೃತ್ವದಲ್ಲಿ ಹೊಸ ಗೋಲ್ಡ್‌ ಕಾರ್ಡ್‌ (Gold Card) ವೀಸಾ ಯೋಜನೆಯೂ ಆರಂಭವಾಗಿದೆ. ವ್ಯಕ್ತಿಗೆ $1 ಮಿಲಿಯನ್ (ಸುಮಾರು ₹8.8 ಕೋಟಿ) ಮತ್ತು ಉದ್ಯಮಗಳಿಗಾಗಿ $2 ಮಿಲಿಯನ್ (ಸುಮಾರು ₹17.6 ಕೋಟಿ) ಶುಲ್ಕ ನಿಗದಿಪಡಿಸಲಾಗಿದೆ. “ಅತ್ಯುನ್ನತ ಮಟ್ಟದ ಪ್ರತಿಭೆಯುಳ್ಳವರು ಮಾತ್ರ ಈ ಯೋಜನೆಯಡಿ ಅಮೆರಿಕ ಸೇರುವ ಅವಕಾಶ ಪಡೆಯುತ್ತಾರೆ. ಇದರಿಂದ ಅಮೆರಿಕಕ್ಕೆ ನುರಿತ ಕೆಸಗಾರರು ಮಾತ್ರ ಬರುತ್ತಾರೆ ಎಂದು ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲಟ್ನಿಕ್ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement