ಬೆಂಗಳೂರು: ಕನ್ನಡದ ಖ್ಯಾತ ಕಾದಂಬರಿಕಾರ, ಚಿಂತಕ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್ ಎಲ್ ಭೈರಪ್ಪ (SL Bhyrappa) ಇಂದು, ಬುಧವಾರ ಮಧ್ಯಾಹ್ನ 2:30ರ ಸುಮಾರಿಗೆ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ್ದ ಅವರು ತಮ್ಮ ಕೃತಿಗಳ ಮೂಲಕ ಕನ್ನಡದ ಮನೆ ಮಾತಾಗಿದ್ದರು. ಪರ್ವ, ಉತ್ತರಕಾಂಡ, ವಂಶವೃಕ್ಷ, ಆವರಣ ಸೇರಿ ಹಲವು ಕೃತಿಗಳನ್ನು ಎಸ್ಎಲ್ ಬೈರಪ್ಪ ರಚಿಸಿದ್ದರು. ಗೃಹ ಭಂಗ ಕಾದಂಬರಿ ಧಾರಾವಾಹಿಯಾಗಿದ್ದರೆ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಮೊದಲಾದ ಕಾದಂಬರಿಗಳು ಸಿನಿಮಾಗಳಾಗಿವೆ. ಇಂದಿಗೂ ಕೂಡ ಎಸ್ಎಲ್ ಭೈರಪ್ಪನವರ ಕೃತಿಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಎಸ್ಎಲ್ ಭೈರಪ್ಪ ಅವರ ಅನೇಕ ಕೃತಿಗಳು ಮರಾಠಿ, ಗುಜರಾತ್ ಸೇರಿದಂತೆ ದೇಶದ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ 20-08-1931 ರಂದು ಜನಿಸಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಸಂತೇಶಿವರದಲ್ಲಿ ಪಡೆದರು. ಕಿತ್ತು ತಿನ್ನುವ ಬಡತನ, ಪ್ಲೇಗ್ ಮಹಾಮಾರಿಯಿಂದ ಕುಟುಂಬದವರನ್ನು ಕಳೆದುಕೊಂಡು ತತ್ತರಗೊಂಡ ಪರಿಸರದಲ್ಲೂ ಅವರ ಸಣ್ಣ ವಯಸ್ಸಿನಲ್ಲೇ ಅವರ ತಾಯಿಯ ಧೀಮಂತಿಕೆಯನ್ನು ಮೈಗೂಡಿಸಿಕೊಂಡರು.
ಅತ್ಯಂತ ಬಡತನದಲ್ಲೇ ಪ್ರೌಢ ಶಿಕ್ಷಣ ಹಾಗೂ ಕಾಲೇಜು ವ್ಯಾಸಂಗವನ್ನು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ.ಎ.ನಲ್ಲಿ ಸುವರ್ಣ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ”, ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು.
ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವ ವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕರಾಗಿದ್ದ ಭೈರಪ್ಪನವರು, ಶಾಸ್ತ್ರಿಯ ಶಿಸ್ತಿನ ಓದಿನ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದ್ದಾರೆ. 1961 ರಲ್ಲಿ `ಧರ್ಮಶ್ರೀ’ ಕಾದಂಬರಿ ಪ್ರಕಟಿಸಿ
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (ಎಸ್.ಎಲ್.ಭೈರಪ್ಪ) ನಾಲ್ಕು ದಶಕಗಳಲ್ಲಿ 21 ಕಾದಂಬರಿಗಳನ್ನು ಬರೆದಿದ್ದಾರೆ. ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ವಂಶವೃಕ್ಷಕ್ಕೆ 1966 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. `ಅವರು 1999 ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಭೈರಪ್ಪ ಬರೆದ ಕಾದಂಬರಿಗಳು:
ಭೀಮಕಾಯ, ಬೆಳಕು ಮೂಡಿತು, ಧರ್ಮಶ್ರೀ – (1961), ದೂರ ಸರಿದರು- (1962), ಮತದಾನ – (1965), ವಂಶವೃಕ್ಷ- (1965), ಜಲಪಾತ – (1967), ನಾಯಿ ನೆರಳು- (1968), ತಬ್ಬಲಿಯು ನೀನಾದೆ ಮಗನೆ-(1968), ಗೃಹಭಂಗ-(1970), ನಿರಾಕರಣ-(1971), ಗ್ರಹಣ-(1972),vದಾಟು -(1973), ಅನ್ವೇಷಣ-(1976), ಪರ್ವ-(1979), ನೆಲೆ -(1983), ಸಾಕ್ಷಿ -(1986), ಅಂಚು-(1990), ತಂತು -(1993), ಸಾರ್ಥ-(1998), ಮಂದ್ರ-(2001), ಆವರಣ-(2007), ಕವಲು – (2010), ಯಾನ – (2014), ಉತ್ತರಕಾಂಡ-(2017)
ಆತ್ಮ ಚರಿತ್ರೆ : ಭಿತ್ತಿ
ತತ್ತ್ವಶಾಸ್ತ್ರ :
ಸತ್ಯ ಮತ್ತು ಸೌಂದರ್ಯ (1966) – ಪಿ.ಎಚ್.ಡಿ ಪ್ರಬಂಧ, ಸಾಹಿತ್ಯ ಮತ್ತು ಪ್ರತೀಕ (1967), ಕಥೆ ಮತ್ತು ಕಥಾವಸ್ತು (1969), ಸಂದರ್ಭ:ಸಂವಾದ (2011)
ಇತರೆ, ನಾನೇಕೆ ಬರೆಯುತ್ತೇನೆ? (1980)
ಇತರ ಭಾಷೆಗಳಿಗೆ ಅನುವಾದವಾಗಿರುವ ಕಾದಂಬರಿಗಳು
ಧರ್ಮಶ್ರೀ – ಸಂಸ್ಕೃತ, ಮರಾಠಿ
ವಂಶವೃಕ್ಷ – ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ್
ನಾಯಿ ನೆರಳು – ಗುಜರಾತಿ, ಹಿಂದಿ
ತಬ್ಬಲಿಯು ನೀನಾದೆ ಮಗನೆ – ಹಿಂದಿ
ಗೃಹಭಂಗ – ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ
ನಿರಾಕರಣ -ಹಿಂದಿ
ದಾಟು – ಇಂಗ್ಲೀಷ್, ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ
ಅನ್ವೇಷಣ -ಹಿಂದಿ,ಮರಾಠಿ
ಪರ್ವ -ಹಿಂದಿ, ಮರಾಠಿ, ಇಂಗ್ಲೀಷ್, ತೆಲುಗು, ಬೆಂಗಾಲಿ, ತಮಿಳು
ನೆಲೆ -ಹಿಂದಿ
ಸಾಕ್ಷಿ – ಹಿಂದಿ, ಇಂಗ್ಲೀಷ್
ಅಂಚು -ಹಿಂದಿ, ಮರಾಠಿ
ತಂತು -ಹಿಂದಿ, ಮರಾಠಿ
ಸಾರ್ಥ -ಹಿಂದಿ, ಮರಾಠಿ, ಇಂಗ್ಲೀಷ್, ಸಂಸ್ಕೃತ
ನಾನೇಕೆ ಬರೆಯುತ್ತೇನೆ -ಮರಾಠಿ
ಸತ್ಯ ಮತ್ತು ಸೌಂದರ್ಯ -ಇಂಗ್ಲೀಷ್
ಭಿತ್ತಿ -ಹಿಂದಿ, ಮರಾಠಿ
ಚಲನಚಿತ್ರವಾಗಿರುವ ಕಾದಂಬರಿಗಳು
ವಂಶವೃಕ್ಷ -1972
ತಬ್ಬಲಿಯು ನೀನಾದೆ ಮಗನೆ – 1977
ಮತದಾನ -2001
ನಾಯಿ ನೆರಳು – 2006
ಟಿ.ವಿ. ಧಾರಾವಾಹಿಯಾಗಿರುವ ಕಾದಂಬರಿಗಳು
ಗೃಹಭಂಗ
ದಾಟು (ಹಿಂದಿ)
ಭೈರಪ್ಪ ಅವರು ಬರೆದ ಕಾದಂಬರಿಗಳು ವ್ಯಾಪಕವಾಗಿ ಚರ್ಚೆಗೆ ಒಳಗಾಗಿವೆ. ಅದರಲ್ಲಿಯೂ ಅವರು ಬರೆದ ಪರ್ವ ಹಾಗೂ ಅನಾವರಣ ಕಾದಂಬರಿಗಳು ತೀವ್ರ ಚರ್ಚೆಗೆ ಒಳಗಾದ ಕಾದಂಬರಿಗಳಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದಗೊಂಡಿವೆ. ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.
ಭೈರಪ್ಪನವರು ಭಾರತೀಯ ಸಂಗೀತ ಅದರಲ್ಲಿಯೂ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಪ್ರೇಮಿಗಳಾಗಿದ್ದರು. ಬಾಲ್ಯದಿಂದಲೇ ಅವರಿಗೆ ಪ್ರವಾಸ ಅಚ್ಚುಮೆಚ್ಚು. ಇವರು ಉತ್ತರ ಮತ್ತು ದಕ್ಷಿಣ ಧ್ರುವ ಸೇರಿದಂತೆ ವಿಶ್ವದ ಏಳು ಭೂಖಂಡಗಳಲ್ಲಿ ಪ್ರವಾಸ ಮಾಡಿದ್ದಾರೆ.
ಭೈರಪ್ಪನವರಿಗೆ ಸಂದ ಪ್ರಮುಖ ಪ್ರಶಸ್ತಿಗಳು…
ಪದ್ಮ ಭೂಷಣ-2023
ಕೇಂದ್ರ ಸರಕಾರದ ಪದ್ಮಶ್ರೀ- 2016
ಮಮೋನಿ ರೈಸೊಂ ಗೋಸ್ವಾಮಿ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ (ಅಸ್ಸಾಂ ಸಾಹಿತ್ಯ ಸಭಾ)-2016
ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್- 2015
ಸಾಹಿತ್ಯ ಅಕಾಡೆಮಿ ಫೆಲೋಶಿಪ್-2015
ಡಾ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ-2014
ವಾಗ್ವಿಲಾಸಿನಿ ಪುರಸ್ಕಾರ್ (ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ)-2012
ನಾಡೋಜ ಪ್ರಶಸ್ತಿ-2011
ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ)-2010
ಎನ್.ಟಿ.ಆರ್ ರಾಷ್ಟ್ರೀಯ ಪ್ರಶಸ್ತಿ-2007
ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್-2007
ಪಂಪ ಪ್ರಶಸ್ತಿ-2005
ಎಸ್.ಆರ್.ಪ್ರಶಸ್ತಿ-2002
ಗೊರೂರು ಪ್ರಶಸ್ತಿ-2000
ಗ್ರಂಥಲೋಕ, ವರ್ಷದ ಅತ್ಯುತ್ತಮ ಸಾಹಿತ್ಯ ಕೃತಿ (ಸಾಕ್ಷಿ)-1998
ಭಾರತೀಯ ಭಾಷಾ ಪರಿಷತ್ ಸಂವತ್ಸರ ಪುರಸ್ಕಾರ್
ಮಾಸ್ತಿ ಸಾಹಿತ್ಯ ಪ್ರಶಸ್ತಿ-1996
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1995
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿ)-1975
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಂಶವೃಕ್ಷ)-1966
ರಾಷ್ಟ್ರೀಯ ಪ್ರಾಧ್ಯಾಪಕ (ನ್ಯಾಷನಲ್ ಪ್ರೊ-ಸರ್) ಗೌರವ ಸಾಹಿತ್ಯ ಅಕಾಡೆಮಿ ಫೆಲೋ ಗೌರವ


ನಿಮ್ಮ ಕಾಮೆಂಟ್ ಬರೆಯಿರಿ