ಹೊಸಪೇಟೆ : ವಿಜಯ ನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಇನ್ಶೂರೆನ್ಸ್ ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ, ಅದನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಪಟ್ಟ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸಪೇಟೆ ಹೊರವಲಯದಲ್ಲಿ ವ್ಯಕ್ತಿಯೊಬ್ಬನನ್ನು ಅಪಘಾತದಲ್ಲಿ ಮೃತಪಟ್ಟಂತೆ ತೋರಿಸಿ, 5.25 ಕೋಟಿ ರೂ. ಇನ್ಶೂರೆನ್ಸ್ ಹಣ ಲಪಟಾಯಿಸುವ ಯತ್ನವನ್ನು ಮಾಡಿದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಗ್ಯಾಂಗ್ ವ್ಯಕ್ತಿಯನ್ನು ಸಾಯಿಸಿ ನಕಲಿ ರಸ್ತೆ ಅಪಘಾತವನ್ನು ಸೃಷ್ಟಿಸಿ, ನಂತರ ಈ ಗ್ಯಾಂಗ್ನ ಮಹಿಳೆಯೋರ್ವಳು ಅವರ ಹೆಸರಿನಲ್ಲಿ ಮಾಡಿಸಿದ್ದ ವಿಮಾ ಹಣ ಪಡೆಯಲು ಮೃತನ ಪತ್ನಿಯಂತೆ ನಟಿಸಿ ವಂಚನೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಮೃತನ ನಿಜವಾದ ಪತ್ನಿ ಪೊಲೀಸ್ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಜೀರಗನೂರು ಗ್ರಾಮದ 34 ವರ್ಷದ ಗಂಗಾಧರ ಎಂದು ಗುರುತಿಸಲಾದ ಮೃತ ವ್ಯಕ್ತಿ ಹೊಸಪೇಟೆಯಲ್ಲಿ ವಾಸಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ಪಾರ್ಶ್ವವಾಯುವಿನ ತುತ್ತಾದ ನಂತರ ಅವರು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದರು ಮತ್ತು ಅವರ ದೇಹದ ಎಡಭಾಗ ಶಕ್ತಿ ಕಳೆದುಕೊಂಡಿತ್ತು. ಅವರು ಆರ್ಥಿಕವಾಗಿ ತೊಂದರೆಯಲ್ಲಿದ್ದ ಅವರ ಪರಿಸ್ಥಿತಿಯ ದುರ್ಲಾಭ ಪಡೆಯಲು ಈ ಆರು ಜನ ಸಂಚು ರೂಪಿಸಿದರು. ಹೆಸರಿನಲ್ಲಿ ವಿಮೆ ಮಾಡಿಸಿ ಇವರದ್ದೇ ಗ್ಯಾಂಗ್ನ ಮಹಿಳೆಯೊಬ್ಬಳನ್ನು ವಿಮಾ ಪಾಲಿಸಿಗೆ ನಾಮಿನಿ ಎಂದು ನಕಲಿ ನೋಂದಣಿ ಮಾಡಿಸಿದ್ದರು ಎಂಬುದು ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 28 ರಂದು ಸಂಡೂರು ರಸ್ತೆಯಲ್ಲಿ ಶವ ಪತ್ತೆಯಾದ ನಂತರ ಈ ಬಗ್ಗೆ ಪೊಲೀಸರಿಗೆ ಕರೆ ಬಳಿಕ ಸ್ಥಳಕ್ಕೆ ಹೋದಾಗ ಪ್ರಕರಣವು ಮೇಲ್ನೋಟಕ್ಕೆ ಹಿಟ್-ಅಂಡ್-ರನ್ ಎಂಬಂತೆ ಕಾಣುತ್ತಿತ್ತು. ಆದಾಗ್ಯೂ, ಮೃತನ ಪತ್ನಿ ತಮ್ಮ ಬಳಿ ದ್ವಿಚಕ್ರ ವಾಹನವಿಲ್ಲ ಎಂದು ಹೇಳಿದಾಗ ಪೊಲೀಸರಿಗೆ ಅನುಮಾನ ಉಂಟಾಯಿತು ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಹೇಳಿದ್ದಾರೆ.
“ಸೆಪ್ಟೆಂಬರ್ 28 ರಂದು ಬೆಳಿಗ್ಗೆ 5:30 ಕ್ಕೆ ಸಂಡೂರು ರಸ್ತೆಯಲ್ಲಿ ಮೃತದೇಹ ಬಿದ್ದಿರುವ ಬಗ್ಗೆ ಹಾಗೂ ಹಿಟ್ ಅಂಡ್ ರನ್ ಪ್ರಕರಣದ ಕುರಿತು ನಮಗೆ ಕರೆ ಬಂದಿತು. ಸ್ಥಳಕ್ಕೆ ಭೇಟಿ ನೀಡಿದ ನಂತರ ಸೂಕ್ತ ಕಾರ್ಯವಿಧಾನಗಳನ್ನು ನಡೆಸಿ ಶವವನ್ನು ಸ್ಥಳಾಂತರಿಸಲಾಯಿತು. ಮೃತರ ಗುರುತು ದೃಢಪಟ್ಟ ನಂತರ, ಅವರ ಪತ್ನಿ ಹೊಸಪೇಟೆ ಪಟ್ಟಣದ ಕೌಲಪೇಟೆ ನಿವಾಸಿ ಶಾರದಮ್ಮ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು, ಅಲ್ಲಿ ಅವರು ದೂರು ದಾಖಲಿಸಿದರು. ಮೃತ ಗಂಗಾಧರ ಅವರ ಬಳಿ ದ್ವಿಚಕ್ರ ವಾಹನ ಇರಲಿಲ್ಲ. ಹಿಟ್ ಅಂಡ್ ರನ್ ಪ್ರಕರಣದ ಬಗ್ಗೆ ನಮಗೆ ಅನುಮಾನವಿದೆ ಎಂದು ಅವರ ಪತ್ನಿ ಹೇಳಿದರು ಎಂದು ಎಸ್ಪಿ ತಿಳಿಸಿದ್ದಾರೆ.
ಈ ಗ್ಯಾಂಗ್ ಗಂಗಾಧರ ಅವರನ್ನು ಕೊಲೆ ಮಾಡಿ ವಿಮಾ ಹಣ ಪಡೆಯುವ ಉದ್ದೇಶದಿಂದ ಅವರ ಹೆಸರಿನಲ್ಲಿ ಹೆಚ್ಚಿನ ಮೌಲ್ಯದ ವಿಮಾ ಪಾಲಿಸಿಯನ್ನು ತೆಗೆದುಕೊಂಡಿದ್ದು, ನಕಲಿ ಪತ್ನಿ “ನಿಂಗಮ್ಮ” ಅವರನ್ನು ಅವರ ನಾಮಿನಿ ಎಂದು ನೋದಾಯಿಸಿತ್ತು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಆ ಗ್ಯಾಂಗ್ ಗಂಗಾಧರ ಅವರನ್ನು ಕೊಂದು ನಂತರ ಅವರ ಶವವನ್ನು ನಗರದ ಹೊರವಲಯಕ್ಕೆ ಕೊಂಡೊಯ್ದು, ಅಲ್ಲಿ ಅದನ್ನು ದ್ವಿಚಕ್ರ ವಾಹನದಲ್ಲಿ ಇರಿಸಿ, ನಂತರ ಅದಕ್ಕೆ ವಾಹನದಿಂದ ಡಿಕ್ಕಿ ಹೊಡೆಸಿ ಅದನ್ನು ಹಿಟ್ ಅಂಡ್ ರನ್ ಎಂದು ಬಿಂಬಿಸಿದೆ.
ಮೃತನ (ನಕಲಿ) ಪತ್ನಿ ಎಂದು ಹೇಳಿಕೊಂಡ ಮಹಿಳೆ ಸೇರಿದಂತೆ ಗ್ಯಾಂಗ್ನ ಆರು ಜನರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಪತ್ನಿಯಂತೆ ನಟಿಸಿದ ಹುಲಿಗೆಮ್ಮ, ಕೊಪ್ಪಳದ ಕೃಷ್ಣಪ್ಪ; ಹೊಸಪೇಟೆಯ ರವಿ, ಅಜಯ, ರಿಯಾಜ್ ಮತ್ತು ಯೋಗರಾಜ ಸಿಂಗ್ ಎಂದು ಗುರುತಿಸಲಾಗಿದೆ. ಅಪರಾಧ ಮಾಡಲು ಬಳಸಿದ ಕಾರು ಮತ್ತು ದ್ವಿಚಕ್ರ ವಾಹವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಿರಾಶ್ರಿತರು ಮತ್ತು ಗಂಭೀರ ಕಾಯಿಲೆ ಅಥವಾ ಅಂಗವೈಕಲ್ಯ ಹೊಂದಿರುವವರು ಸೇರಿದಂತೆ ದುರ್ಬಲ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಈ ಗ್ಯಾಂಗ್ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ನಂತರ 40–50 ಲಕ್ಷ ರೂ. ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಪಡೆಯುವುದು ಮಾಡುತ್ತಿದ್ದರು ಎಂದು ಪೊಲೀಸರು ನಂಬಿದ್ದಾರೆ. ನಡೆಯುತ್ತಿರುವ ವಂಚನೆಯ ಕುರಿತು ವಿಮಾ ಕಂಪನಿಗೆ ಪತ್ರ ಬರೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರೆದಿದ್ದು, ಇದೇ ರೀತಿಯ ಪ್ರಕರಣಗಳಲ್ಲಿ ಆರೋಪಿತ ಗ್ಯಾಂಗ್ ಭಾಗಿಯಾಗಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ