ಐಷಾರಾಮಿ ಕಾರು ಕಳ್ಳಸಾಗಣೆ ಪ್ರಕರಣ :‌ ಮಲಯಾಳಂ ನಟರಿಗೆ ಇ.ಡಿ. ಶಾಕ್

ಕೇರಳ: ಮಲಯಾಳಂ ಚಿತ್ರರಂಗದ ಖ್ಯಾತ ನಟರಾದ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮತ್ತು ಅಮಿತ್ ಚಕ್ಕಲಕಲ್ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿದೆ.
ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ತೀವ್ರಗೊಳಿಸಿದ್ದು, ಈ ಸಂಬಂಧ ಮಲಯಾಳಂ ಚಿತ್ರರಂಗದ ಖ್ಯಾತ ನಟರ ನಿವಾಸಗಳೂ ಸೇರಿದಂತೆ ಕೇರಳ ಮತ್ತು ತಮಿಳುನಾಡಿನ 17 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಈ ಕಾರುಗಳ ಅಕ್ರಮ ಆಮದು ಮತ್ತು ನೋಂದಣಿಯಲ್ಲಿ ತೊಡಗಿರುವ ಜಾಲ ಪತ್ತೆಹಚ್ಚಲು ಈ ಕಾರ್ಯಾಚರಣೆ ನಡೆಯುತ್ತಿದೆ.
ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನ ವಾಹನ ವ್ಯಾಪಾರಿಗಳನ್ನು ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಭಾರತ-ಭೂತಾನ್ ಮತ್ತು ಭಾರತ-ನೇಪಾಳ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್, ಡಿಫೆಂಡರ್ ಮತ್ತು ಮಸೆರಾಟಿ ಮುಂತಾದ ದುಬಾರಿ ಕಾರುಗಳನ್ನು ಅಕ್ರಮವಾಗಿ ತಂದು ನೋಂದಣಿ ಮಾಡುತ್ತಿದ್ದ ಜಾಲ ಭೇದಿಸಲು ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿನ ಆರ್‌ಟಿಒ ನೋಂದಣಿಗಳನ್ನು ಬಳಸಿ ಕಾರುಗಳನ್ನು ಮಾರಾಟ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಈ ಹಿಂದೆ ಭೂತಾನ್‌ನಿಂದ ವಾಹನಗಳ ಕಳ್ಳಸಾಗಣೆ ಸಂಬಂಧ ಕಸ್ಟಮ್ಸ್ ಇಲಾಖೆಯೂ ದಾಳಿ ನಡೆಸಿತ್ತು. ಈಗ ಇಡಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 23 ರಂದು, ಕಸ್ಟಮ್ಸ್ ಅಧಿಕಾರಿಗಳು ಕೇರಳದಾದ್ಯಂತ ಸುಮಾರು 30 ಕಡೆ ದಾಳಿ ನಡೆಸಿ, ಮೂವರು ನಟರ ನಿವಾಸಗಳೂ ಸೇರಿದಂತೆ 36 ಅತ್ಯಾಧುನಿಕ ಐಷಾರಾಮಿ ವಾಹನಗಳನ್ನು ವಶಪಡಿಸಿಕೊಂಡಿದ್ದರು, ಈ ಪೈಕಿ ದುಲ್ಕರ್ ಸಲ್ಮಾನ್ ಅವರ ಕಾರನ್ನು ಕೂಡಾ ಸೀಜ್ ಮಾಡಲಾಗಿತ್ತು. . ಈ ದಾಳಿಗಳನ್ನು ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್‌ಮೆಂಟ್ ಆಕ್ಟ್ (FEMA) ಅಡಿಯಲ್ಲಿ ನಡೆಸಲಾಗುತ್ತಿದೆ. ಆರಂಭಿಕ ತನಿಖೆಗಳ ಪ್ರಕಾರ, ಕೊಯಮತ್ತೂರು ಮೂಲದ ಒಂದು ಜಾಲವು ಭಾರತೀಯ ಸೇನೆ, ಅಮೆರಿಕ ರಾಯಭಾರಿ ಕಚೇರಿ ಮತ್ತು ಎಂಇಎಯಿಂದ ಬಂದಿದೆ ಎಂದು ಹೇಳುವ “ನಕಲಿ” ದಾಖಲೆಗಳು ಹಾಗೂ ಕೆಲವು ರಾಜ್ಯಗಳಲ್ಲಿನ ನಕಲಿ ಆರ್‌ಟಿಒ ನೋಂದಣಿಗಳನ್ನು ಬಳಸಿಕೊಂಡಿದೆ. ನಂತರ, ಈ ವಾಹನಗಳನ್ನು ಅವುಗಳ ಬೆಲೆಗಿಂತ ಕಡಿಮೆ ಬೆಲೆಗೆ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಅನಧಿಕೃತ ವಿದೇಶಿ ವಿನಿಮಯ ವಹಿವಾಟುಗಳು ಮತ್ತು ಹವಾಲಾ ಚಾನೆಲ್‌ಗಳ ಮೂಲಕ ಗಡಿ ದಾಟುವ ಪಾವತಿಗಳನ್ನು ಒಳಗೊಂಡಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ದೆಹಲಿ ಹೊಟೇಲ್‌ ಅಗ್ನಿ ದುರಂತ : ಐಸಿಯುನಲ್ಲಿದ್ದ ತಂದೆ ಸನಿಹ ಇರಲು ಹೊಟೇಲ್‌ನಲ್ಲಿ ತಂಗಿದ್ದ ಸಿಎ ಕುಟುಂಬದ 8 ಮಂದಿ ಸಾವು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement