ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಸಿನಿಮಿಯ ರೀತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ಮಧ್ಯರಾತ್ರಿಯ ನಂತರ ನಡೆದಿದೆ ಎಂದು ವರದಿಯಾಗಿದೆ.
ಗಘಾವತಿ ನಗರದ ಕೊಪ್ಪಳ ರಸ್ತೆಯ ಲೀಲಾವತಿ ಆಸ್ಪತ್ರೆಯ ಮುಂದುಗಡೆ ಈ ಘಟನೆ ನಡೆದಿದ್ದು, ನಸುಕಿನ ಜಾವ 2 ಗಂಟೆ ಸುಮಾರಿಗೆ ಕಾರಿನಲ್ಲಿ ಆಗಮಿಸಿದ್ದ ಗ್ಯಾಂಗ್ ಕೊಲೆ ಮಾಡಿದೆ ಎನ್ನಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ವೆಂಕಟೇಶ (31 ವರ್ಷ) ಎಂದು ಗುರುತಿಸಲಾಗಿದೆ. ಗಂಗಾವತಿಯ ದೇವಿನಗರದಿಂದ ಜೂಲಾಯಿನಗರ ಮಾರ್ಗವಾಗಿ ಎಪಿಎಂಸಿ ಕಡೆಗೆ ಹೋಗುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ವೆಂಕಟೇಶ ದೇವಿಕ್ಯಾಂಪ್‌ನಿಂದ ಸ್ನೇಹಿತರೊಂದಿಗೆ ಊಟ ಮಾಡಿ ಬೈಕ್‌ನಲ್ಲಿ ಗಂಗಾವತಿಗೆ ತೆರಳುತ್ತಿದ್ದರು. ಕೊಪ್ಪಳ ರಸ್ತೆಯ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ಮದ್ಯರಾತ್ರಿ 2 ಗಂಟೆ ಸುಮಾರಿಗೆ ಬೈಕ್‌ಗೆ ಗುದ್ದಿ ಅಡ್ಡಗಟ್ಟಿದ ಗುಂಪು, ನಂತರ ವೆಂಕಟೇಶ ಅವರು ಬೈಕಿನಿಂದ ಕೆಳಕ್ಕೆ ಬಿದ್ದ ಮೇಲೆ ಲಾಂಗ್ ಮತ್ತು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಹಳೆಯ ದ್ವೇಷದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ