ಪಹ್ಲಗಾಮ್ ದಾಳಿಯ ನಂತರ ಭಾರತವು ನಡೆಸಿದ ಸೇನಾ ಕಾರ್ಯಾಚರಣೆ ಆಪರೇಷನ್ ಸಿಂಧೂರ ಸಮಯದಲ್ಲಿ ತೀವ್ರ ಹಾನಿ ಅನುಭವಿಸಿದ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ), ತನ್ನ ಹೆಜ್ಜೆಗುರುತನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಮತ್ತೆ ಚುರುಕುಗೊಳಿಸಿದೆ. ಹಾಗೂ ತನ್ನ ಮೊದಲ ಮಹಿಳಾ ಘಟಕದ ರಚನೆ ಮಾಡಿರುವುದಾಗಿ ಘೋಷಿಸಿದೆ.
ಸಾಂಪ್ರದಾಯಿಕವಾಗಿ ಮಹಿಳೆಯರು ಸಶಸ್ತ್ರ ಅಥವಾ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಮಸೂದ್ ಅಜರ್ ನೇತೃತ್ವದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್, ಬುಧವಾರ ತನ್ನ ಕಾರ್ಯತಂತ್ರದಲ್ಲಿ ಬದಲಾವಣೆಯನ್ನು ಪ್ರಕಟಿಸಿದ್ದು, ,ಹಿಳಾ ಘಟಕ ರಚನೆ ಮಾಡಲಾಗಿದೆ. ಅದಕ್ಕೆ “ಜಮಾತ್-ಉಲ್-ಮೊಮಿನಾತ್” ಎಂದು ಹೆಸರಿಸಲಾಗಿದೆ. ಈ ಮಹಿಳಾ ಘಟಕವನ್ನು ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ ಭಯೋತ್ಪಾದಕ ಮಸೂದ್ ಅಜರ್ ಸಹೋದರಿ ಸಾದಿಯಾ ಅಜರ್ ನೇತೃತ್ವ ವಹಿಸಲಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಮಹಿಳಾ ಘಟಕಕ್ಕೆ ಬಹಾವಲ್ಪುರದ ಮರ್ಕಜ್ ಉಸ್ಮಾನ್-ಒ-ಅಲಿಯಲ್ಲಿ ಈಗಾಗಲೇ ನೇಮಕಾತಿ ಪ್ರಾರಂಭಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ. ಬಹಾವಲ್ಪುರ್, ಕರಾಚಿ, ಮುಜಫರಾಬಾದ್, ಕೋಟ್ಲಿ, ಹರಿಪುರ್ ಮತ್ತು ಮನ್ಸೆಹ್ರಾದಲ್ಲಿರುವ ತನ್ನ ಕೇಂದ್ರಗಳಲ್ಲಿರುವ ತನ್ನ ಕಮಾಂಡರ್‌ಗಳ ಪತ್ನಿಯರನ್ನು ಹಾಗೂ ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ಸಂಘಟನೆಗೆ ಸೇರಿಸಿಕೊಳ್ಳಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಸಿಂಧೂರ ಸಮಯದಲ್ಲಿ, ಭಾರತೀಯ ಪಡೆಗಳು ಪಾಕಿಸ್ತಾನದ ದಕ್ಷಿಣ ಪಂಜಾಬ್ ಪ್ರಾಂತ್ಯದ ಒಳಗೆ ಸುಮಾರು 100 ಕಿ.ಮೀ ದೂರದಲ್ಲಿರುವ ಬಹಾವಲ್ಪುರದಲ್ಲಿರುವ ಜೆಇಎಂ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಅಪಾರ ಹಾನಿಯನ್ನುಂಟು ಮಾಡಿತ್ತು. ಈ ವೇಳೆ ಈಗ
ಜೆಇಎಂ ಭಯೋತ್ಪಾದಕ ಸಂಘಟನೆ ಮಹಿಳಾ ಘಟಕದ ನೇತೃತ್ವ ವಹಿಸಿರುವ ಸಾದಿಯಾ ಅಜರ್ ಪತಿ ಯೂಸುಫ್ ಅಜರ್ ಕೊಲ್ಲಲ್ಪಟ್ಟ ಎಂದು ಹೇಳಲಾಗಿದೆ.
ಐಸಿಸ್, ಬೊಕೊ ಹರಾಮ್, ಹಮಾಸ್ ಮತ್ತು ಎಲ್‌ಟಿಟಿಇಯಂತಹ ಭಯೋತ್ಪಾದಕ ಗುಂಪುಗಳು ಮಹಿಳೆಯರನ್ನು ಆತ್ಮಹತ್ಯಾ ದಾಳಿಕೋರರನ್ನಾಗಿ ನಿಯೋಜಿಸುವ ಇತಿಹಾಸವನ್ನು ಹೊಂದಿವೆ ಆದರೆ ಜೆಇಎಂ ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಗಳು ಹೆಚ್ಚಾಗಿ ಹಾಗೆ ಮಾಡುವುದರಿಂದ ದೂರ ಇದ್ದವು.
ಜೆಇಎಂ ತಮ್ಮ ಭವಿಷ್ಯದ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಮಹಿಳಾ ಆತ್ಮಹತ್ಯಾ ಬಾಂಬರ್‌ಗಳನ್ನು ನಿಯೋಜಿಸಲು ಪ್ರಯತ್ನಿಸುತ್ತಿದೆ ಎಂದು ತೋರುತ್ತದೆ ಎಂದು ಮೂಲಗಳು ತಿಳಿಸಿವೆ. ಮಸೂದ್ ಅಜರ್ ಮತ್ತು ಆತನ ಸಹೋದರ ತಲ್ಹಾ ಅಲ್-ಸೈಫ್ ಜಂಟಿಯಾಗಿ ಭಯೋತ್ಪಾದಕ ಸಂಘಟನೆಯ ಕಾರ್ಯಾಚರಣೆಯ ಚೌಕಟ್ಟಿನಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವ ನಿರ್ಧಾರವನ್ನು ಅನುಮೋದಿಸಿದ್ದಾರೆ. ಇದು ವಿಶೇಷ ಮಹಿಳಾ ಬ್ರಿಗೇಡ್ ಸ್ಥಾಪನೆಗೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಆನ್‌ಲೈನ್ ನೆಟ್‌ವರ್ಕ್‌ಗಳು
“ಜಮಾತ್-ಉಲ್-ಮೊಮಿನಾತ್” ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಆನ್‌ಲೈನ್ ನೆಟ್‌ವರ್ಕ್‌ಗಳ ಮೂಲಕ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಘಟಕದ ಚಟುವಟಿಕೆಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ವಾಟ್ಸಾಪ್ ಗುಂಪುಗಳ ಮೂಲಕ ಹರಡುವ ಸಾಧ್ಯತೆಯಿದೆ.
ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಆಕರ್ಷಿಸಲು ಮತ್ತು ಭಯೋತ್ಪಾದಕ ಗುಂಪಿನ ಚಟುವಟಿಕೆಗಳನ್ನು ನಡೆಸಲು ಅವರನ್ನು ಬಳಸಿಕೊಳ್ಳಲು ಈ ಬ್ರಿಗೇಡ್ ಪ್ರಯತ್ನಿಸುತ್ತದೆ. 2001 ರ ಸಂಸತ್ತಿನ ದಾಳಿ ಮತ್ತು 2019 ರ ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪ್ರಮುಖ ದಾಳಿಗಳಿಗೆ ಜೆಇಎಂ ಸಂಬಂಧ ಹೊಂದಿದೆ.
ಆಪರೇಶನ್ ಸಿಂಧೂರ ಕಾರ್ಯಾಚರಣೆಯಲ್ಲಿ ಜೆಇಎಂ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ತನ್ನ ಕುಟುಂಬದ 10 ಸದಸ್ಯರು ಮತ್ತು ತನ್ನ ನಾಲ್ವರು ಸಹಾಯಕರು ಹತರಾಗಿದ್ದಾರೆ ಎಂದು ಅಜರ್ ಈ ಹಿಂದೆ ಹೇಳಿಕೊಂಡಿದ್ದ. 1994 ರಲ್ಲಿ ಭಾರತದಲ್ಲಿ ಬಂಧಿಸಲ್ಪಟ್ಟ ಮತ್ತು ಏರ್ ಇಂಡಿಯಾ ಐಸಿ 814 ಅಪಹರಣದ ನಂತರ ಬಿಡುಗಡೆಯಾದ ಅಜರ್‌ಗೆ ಸೇರಿದ ಹೇಳಿಕೆಯ ಪ್ರಕಾರ, ದಾಳಿಯಲ್ಲಿ ಕೊಲ್ಲಲ್ಪಟ್ಟವರು ಅವನ ಸಹೋದರಿ, ಅವಳ ಪತಿ, ಸೋದರಳಿಯ ಮತ್ತು ಅವನ ಹೆಂಡತಿ, ಸೊಸೆ ಮತ್ತು ವಿಸ್ತೃತ ಕುಟುಂಬದ ಐದು ಮಕ್ಕಳು ಎಂದು ಹೇಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ