ನಿವೃತ್ತ ಎಂಜಿನಿಯರ್‌ ನ ಐಷಾರಾಮಿ ಸಾಮ್ರಾಜ್ಯ : ಪತ್ತೆಯಾಯ್ತು ಕೇಜಿ ಗಟ್ಟಲೆ ಚಿನ್ನ-ಬೆಳ್ಳಿ, ಐಷಾರಾಮಿ ಕಾರುಗಳು, 17 ಟನ್ ಜೇನುತುಪ್ಪ…!

ಭೋಪಾಲ (ಮಧ್ಯಪ್ರದೇಶ): ಭೋಪಾಲ ನಗರದಲ್ಲಿ ಲೋಕೋಪಯೋಗಿ ಇಲಾಖೆಯ (PWD) ನಿವೃತ್ತ ಮುಖ್ಯ ಇಂಜಿನಿಯರ್ ಜಿ.ಪಿ. ಮೆಹ್ರಾ ಅವರ ನಿವಾಸ ಮತ್ತು ಆಸ್ತಿಗಳ ಮೇಲೆ ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಲೋಕಾಯುಕ್ತ ನಡೆಸಿದ ದಾಳಿಯ ನಂತರ ಅಲ್ಲಿ ಪತ್ತೆಯಾದ ಸಂಪತ್ತು ನೋಡಿ ಲೋಕಾಯುಕ್ತವೇ ಬೆಚ್ಚಿಬಿದ್ದಿದೆ…!
ಹೆಚ್ಚಿನ ಆಸ್ತಿಗಳ ತನಿಖೆಯು, ಮಧ್ಯಪ್ರದೇಶದ ರಾಜ್ಯದಲ್ಲಿ ಇತ್ತೀಚಿನ ವರ್ಷಗಳ ಅತ್ಯಂತ ಸಂಚಲನ ಮೂಡಿಸಿದ  ಭ್ರಷ್ಟಾಚಾರ ಪ್ರಕರಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇಲ್ಲಿ ಸಂಪತ್ತು, ಐಷಾರಾಮಿ ಜೀವನ ಮತ್ತು ವಿಚಿತ್ರ ಸಂಗತಿಗಳ ಮಿಶ್ರಣವು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹಣ ಎಣಿಕೆಗೆ ಯಂತ್ರಗಳು, ಚಿನ್ನದ ರಾಶಿ:
ದಾಳಿಯ ಸಮಯದಲ್ಲಿ ಅಧಿಕಾರಿಗಳು ಲೆಕ್ಕವಿಲ್ಲದಷ್ಟು ನಗದು ಕಂಡಿದ್ದು, ಅದನ್ನು ಎಣಿಸಲು ಹಣ ಎಣಿಕೆ ಯಂತ್ರಗಳನ್ನು ತರಿಸಿಕೊಳ್ಳಬೇಕಾಯಿತು. 3 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳು, ಹಾಗೂ ಕೆಜಿಗಟ್ಟಲೆ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದ್ದು ಮೆಹ್ರಾ ಅವರ ಫಾರ್ಮ್‌ಹೌಸ್‌ನಲ್ಲಿ ಅಚ್ಚುಕಟ್ಟಾಗಿ ಸಂಗ್ರಹಿಸಿಟ್ಟಿದ್ದ 17 ಟನ್ ಜೇನುತುಪ್ಪ….!

ನಾಲ್ಕು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ:
ಲೋಕಾಯುಕ್ತದ ನಾಲ್ವರು ಉಪ ಪೊಲೀಸ್ ಅಧೀಕ್ಷಕ (DSP) ಶ್ರೇಣಿ ಅಧಿಕಾರಿಗಳ ನೇತೃತ್ವದಲ್ಲಿ ಬೆಳಗಿನ ಜಾವದಲ್ಲಿ ಭೋಪಾಲ ಮತ್ತು ನರ್ಮದಾಪುರಂನ ನಾಲ್ಕು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಯಿತು.
ಮಣಿಪುರಂ ಕಾಲೋನಿ ನಿವಾಸ: ಇಲ್ಲಿ ಅಧಿಕಾರಿಗಳಿಗೆ 8.79 ಲಕ್ಷ ರೂ. ನಗದು, ಸುಮಾರು 50 ಲಕ್ಷ ರೂ. ಮೌಲ್ಯದ ಆಭರಣಗಳು ಮತ್ತು 56 ಲಕ್ಷ ರೂ. ಮೌಲ್ಯದ ಸ್ಥಿರ ಠೇವಣಿ ಪತ್ರಗಳು ಸಿಕ್ಕಿವೆ.
ಓಪಲ್ ರೆಜೆನ್ಸಿ ಐಷಾರಾಮಿ ಅಪಾರ್ಟ್‌ಮೆಂಟ್ (ಎರಡನೇ ನಿವಾಸ): ಇಲ್ಲಿ ತನಿಖಾಧಿಕಾರಿಗಳು ಅಕ್ಷರಶಃ ಚಿನ್ನದ ನಿಧಿಯನ್ನೇ ಪತ್ತೆಹಚ್ಚಿದ್ದಾರೆ. 26 ಲಕ್ಷ ರೂ. ನಗದು, 3.05 ಕೋಟಿ ರೂ. ಮೌಲ್ಯದ 2.6 ಕೆಜಿ ಚಿನ್ನ ಮತ್ತು 5.5 ಕೆಜಿ ಬೆಳ್ಳಿ ಇಲ್ಲಿ ದೊರೆತಿದೆ.
ಫಾರ್ಮ್‌ಹೌಸ್‌ನಲ್ಲಿ ಐಷಾರಾಮಿ ಸಾಮ್ರಾಜ್ಯ: ನರ್ಮದಾಪುರಂನ ಸೈನಿ ಗ್ರಾಮದಲ್ಲಿರುವ ಮೆಹ್ರಾ ಅವರ ಫಾರ್ಮ್‌ಹೌಸ್ ಐಷಾರಾಮಿ ಸಾಮ್ರಾಜ್ಯವನ್ನೇ ತೆರೆದಿಟ್ಟಿದೆ. ಇಲ್ಲಿ ಅಧಿಕಾರಿಗಳು 17 ಟನ್ ಜೇನುತುಪ್ಪ, ಆರು ಟ್ರ್ಯಾಕ್ಟರ್‌ಗಳು, ನಿರ್ಮಾಣ ಹಂತದಲ್ಲಿರುವ 32 ಕಾಟೇಜ್‌ಗಳು, ಈಗಾಗಲೇ ಪೂರ್ಣಗೊಂಡಿರುವ ಏಳು ಕಾಟೇಜ್‌ಗಳು ಮತ್ತು ಮೀನು ಸಾಕಾಣಿಕಾ ಸೌಲಭ್ಯವಿರುವ ಖಾಸಗಿ ಕೊಳ ಪತ್ತೆ ಹಚ್ಚಿದ್ದಾರೆ. ಇದರ ಜೊತೆಗೆ, ಗೋಶಾಲೆ, ದೇವಸ್ಥಾನ ಮತ್ತು ಫೋರ್ಡ್ ಎಂಡೀವರ್, ಸ್ಕೋಡಾ ಸ್ಲಾವಿಯಾ, ಕಿಯಾ ಸೋನೆಟ್, ಮತ್ತು ಮಾರುತಿ ಸಿಯಾಜ್ ಸೇರಿದಂತೆ ಹಲವು ಐಷಾರಾಮಿ ಕಾರುಗಳು ಪತ್ತೆಯಾಗಿವೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ವ್ಯವಹಾರದ ಮುಖವಾಡ: ಕೆ.ಟಿ. ಇಂಡಸ್ಟ್ರೀಸ್ ಮೇಲೆ ದಾಳಿ:
ಮೆಹ್ರಾ ಅವರ ವ್ಯವಹಾರದ ಕ್ಷೇತ್ರವೆಂದು ನಂಬಲಾದ ಗೋವಿಂದಪುರ ಕೈಗಾರಿಕಾ ಪ್ರದೇಶದ ಕೆಟಿ ಇಂಡಸ್ಟ್ರೀಸ್‌ ಮೇಲೆಯೂ ದಾಳಿ ನಡೆಸಲಾಯಿತು. ಇಲ್ಲಿ, ಅಧಿಕಾರಿಗಳು ಉಪಕರಣಗಳು, ಕಚ್ಚಾ ವಸ್ತುಗಳು,  1.25 ಲಕ್ಷ ರೂ. ನಗದು ಮತ್ತು ಮೆಹ್ರಾ ಅವರ ಸಂಬಂಧಿಕರು ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ ಎಂದು ತೋರಿಸುವ ದಾಖಲೆಗಳು ಪತ್ತೆಯಾದವು.
ಸಂಜೆ ಹೊತ್ತಿಗೆ, ವಶಪಡಿಸಿಕೊಂಡ ಸಂಪತ್ತಿನ ಒಟ್ಟು ಮೊತ್ತವು ದಂಗುಬಡಿಸುವಂತಿತ್ತು.  36.04 ಲಕ್ಷ ರೂ. ನಗದು, 2.649 ಕೆಜಿ ಚಿನ್ನ, 5.523 ಕೆಜಿ ಬೆಳ್ಳಿ, ಸ್ಥಿರ ಠೇವಣಿಗಳು, ವಿಮಾ ಪಾಲಿಸಿಗಳು, ಷೇರು ದಾಖಲೆಗಳು, ಬಹು ಆಸ್ತಿಗಳ ದಾಖಲೆಗಳು ಮತ್ತು ನಾಲ್ಕು ಐಷಾರಾಮಿ ಕಾರುಗಳು ಲೋಕಾಯುಕ್ತಕ್ಕೆ ಸಿಕ್ಕಿವೆ.
ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ಆಸ್ತಿಗಳ ಮೌಲ್ಯಮಾಪನ ಇನ್ನೂ ಪ್ರಗತಿಯಲ್ಲಿದ್ದು, ಅದು ಹಲವು ಕೋಟಿ ರೂ. ದಾಟುವ ನಿರೀಕ್ಷೆಯಿದೆ. ವಶಪಡಿಸಿಕೊಂಡ ದಾಖಲೆಗಳು, ಡಿಜಿಟಲ್ ಫೈಲ್‌ಗಳು ಮತ್ತು ಬ್ಯಾಂಕಿಂಗ್ ದಾಖಲೆಗಳನ್ನು ಪರಿಶೀಲಿಸಲು ವಿಧಿವಿಜ್ಞಾನ (Forensic) ತಂಡಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, ಬೇನಾಮಿ ಹೂಡಿಕೆಗಳಿಗಾಗಿ ಮೆಹ್ರಾ ಅವರ ಆರ್ಥಿಕ ವ್ಯವಹಾರಗಳ ಜಾಡನ್ನು ಪತ್ತೆಹಚ್ಚಲಾಗುತ್ತಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement