ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ; ಅಮೆರಿಕ ಅಧ್ಯಕ್ಷ ಟ್ರಂಪ್‌ ಗೆ ನಿರಾಸೆ

ವೆನೆಜುಯೆಲಾದ ಪ್ರಜಾಪ್ರಭುತ್ವದ ಪ್ರತಿಪಾದಕಿ ಹಾಗೂ ಸರ್ವಾಧಿಕಾರಿ ವಿರೋಧಿ ಹೋರಾಟಗಾರ್ತಿ ಮತ್ತು ವಿಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೋ ಅವರಿಗೆ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ.
ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಣೆಗೆ ಮುನ್ನ, ಈ ಬಾರಿಯ ಶಾಂತಿ ನೊಬೆಲ್ ಬಹುಮಾನ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ತಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ, ಹೀಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತನಗೇ ನೀಡಬೇಕೆಂದು ಪದೇಪದೇ ಹೇಳಇಕೊಂಡಿದ್ದ ಟ್ರಂಪ್ ಅವರಿಗೆ ಭಾರೀ ನಿರಾಸೆಯಾಗಿದೆ. ಇತ್ತೀಚೆಗೆ ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾ ಪ್ರದೇಶದಲ್ಲಿ ಶಾಂತಿ ಒಪ್ಪಂದ ರೂಪಿಸಿರುವ ಟ್ರಂಪ್ ಅವರ ಯೋಜನೆ ಹಿನ್ನೆಲೆಯಲ್ಲಿ ಕದನ ವಿರಾಮಕ್ಕೆ ಎರಡು ಕಡೆಯವರು ಒಪ್ಪಿದ್ದು, ಈ ಊಹಾಪೋಹಗಳಿಗೆ ಕಾರಣವಾಗಿತ್ತು.

ನಾರ್ವೇಜಿಯನ್ ನೊಬೆಲ್ ಸಮಿತಿಯು ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿದೆ. ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಕೊಡಿಸುವ ಸಲುವಾಗಿ ಅವರ ದಣಿವರಿಯದ ಕೆಲಸ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಗಾಗಿ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಅವರ ಹೋರಾಟಕ್ಕಾಗಿ ಮಚಾಡೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಮಚಾಡೊ ಅವರು 20 ವರ್ಷಗಳ ಹಿಂದೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗಾಗಿ ಧ್ವನಿಯೆತ್ತಿದರು. ಅಂದಿನಿಂದ ಅವರು ಜನರ ಪರವಾಗಿ ಹೋರಾಡುತ್ತಲೇ ಇದ್ದಾರೆ. ಮಚಾಡೋ ಅವರು ತಮ್ಮ ಜೀವಕ್ಕೆ ಅಪಾಯವಿದ್ದರೂ ವೆನೆಜುಯೆಲಾದಲ್ಲೇ ಉಳಿದುಕೊಂಡಿದ್ದಾರೆ. ಜನವರಿಯಿಂದಲೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ರಾಷ್ಟ್ರಪತಿ ನಿಕೋಲಸ್ ಮದುರೋ ಅವರ ಆಡಳಿತದ ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಹಲವು ಬಾರಿ ಬೆದರಿಕೆ, ಬಂಧನ ಮತ್ತು ರಾಜಕೀಯ ಪೀಡನೆ ಎದುರಿಸಿದ್ದಾರೆ.ಈ ಧೈರ್ಯವು ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದೆ ಎಂದು ನೊಬೆಲ್ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಕೊನೆಯ ಚುನಾವಣೆಗಳಲ್ಲಿ ಮಚಾಡೋ ಅವರು ಮದುರೋ ವಿರುದ್ಧ ಸ್ಪರ್ಧಿಸಲು ಸಿದ್ಧರಾಗಿದ್ದರೂ, ಅವರನ್ನು ಸ್ಪರ್ಧಿಸಲು ಅನರ್ಹಗೊಳಿಸಲಾಯಿತು. ಅವರ ಬದಲಿಗೆ ರಾಜಕೀಯಕ್ಕೆ ಹೊಸಬರಾಗಿದ್ದ ಎಡ್ಮುಂಡೋ ಗೋನ್ಸಾಲೆಜ್ ಅವರು ಸ್ಪರ್ಧೆ ನಡೆಸಿದರು. ಆದರೆ ಮತದಾನ ಸಮಯದಲ್ಲಿ ಅನೇಕರನ್ನು ಅನರ್ಹಗೊಳಿಸುವುದು, ಬಂಧನಗಳು ಮತ್ತು ಮಾನವ ಹಕ್ಕು ಉಲ್ಲಂಘನೆಗಳು ನಡೆದವು. ಚುನಾವಣಾ ಫಲಿತಾಂಶದ ನಂತರ, ದೇಶದಾದ್ಯಾಂತ ಪ್ರತಿಭಟನೆಗಳು ಆರಂಭವಾಗಿದ್ದವು. ಸರ್ಕಾರದ ದಬ್ಬಾಳಿಕೆ ಕ್ರಮಕ್ಕೆ ಅನೇಕರು ಬಲಿಯಾದರು. 20ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದರು. ಕೆಲವು ರಾಷ್ಟ್ರಗಳು ವೆನೆಜುಯೆಲಾ ಜೊತೆ ತಾತ್ಕಾಲಿಕವಾಗಿ ರಾಜತಾಂತ್ರಿಕ ಸಂಬಂಧ ಕಡಿದುಕೊಂಡವು.
ಪ್ರತಿ ವರ್ಷ ನೀಡಲಾಗುವ ನೊಬೆಲ್ ಪ್ರಶಸ್ತಿಗಳ ಪೈಕಿ ಶಾಂತಿ ಪ್ರಶಸ್ತಿಯನ್ನಷ್ಟೆ ನಾರ್ವೆಯ ಓಸ್ಲೋದಲ್ಲಿ ನೀಡಲಾಗುತ್ತದೆ. 2024ರ ಪ್ರಶಸ್ತಿ ನಿಹೋನ್ ಹಿದಾಂಕ್ಯೊ ಸಂಘಟನೆಗೆ ಲಭಿಸಿತ್ತು. ಇದು ಜಪಾನ್‌ನ ಅಣುಬಾಂಬ್ ಸ್ಫೋಟದಿಂದ ಬದುಕುಳಿದವರಿಂದ ಸ್ಥಾಪಿಸಲಾದ ಹಕ್ಕು ಚಳವಳಿಯಾಗಿತ್ತು, ಅದು ಅಣುಬಾಂಬ್ ಬಳಕೆಯ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement