ಕೇಂದ್ರದ 2027ರ ಜನಗಣತಿ ಪ್ರಕ್ರಿಯೆಗೆ ಚಾಲನೆ: ನವೆಂಬರ್ 1 ರಿಂದ 7ರ ವರೆಗೆ ಸ್ವಯಂ ಮಾಹಿತಿ ಸಲ್ಲಿಕೆಗೆ ಅವಕಾಶ

ನವದೆಹಲಿ: ಕೇಂದ್ರ ಸರ್ಕಾರವು 2027ರ ಜನಗಣತಿ (Census) ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಭಾಗವಾಗಿ, ನಾಗರಿಕರು ತಮ್ಮ ವೈಯಕ್ತಿಕ ಮಾಹಿತಿಯನ್ನು 2025ರ ನವೆಂಬರ್ 1 ರಿಂದ 7ರವರೆಗೆ ಡಿಜಿಟಲ್ ಮೂಲಕ ‘ಸ್ವಯಂ-ನಮೂದು’ (Self-enumeration) ವಿಂಡೋದಲ್ಲಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದೆ.
ಜನಗಣತಿ-2027ರ ಮೊದಲ ಹಂತವಾದ ಮನೆ ಪಟ್ಟಿ ಮತ್ತು ವಸತಿ ಗಣತಿ (Houselisting and Housing Census) ಕಾರ್ಯಕ್ಕಾಗಿ, ದೇಶದ ಆಯ್ದ ಮಾದರಿ ಪ್ರದೇಶಗಳಲ್ಲಿ ಪೂರ್ವ-ಪರೀಕ್ಷೆ (Pre-test) ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಈ ಪೂರ್ವ-ಪರೀಕ್ಷೆಯನ್ನು 2025ರ ನವೆಂಬರ್ 10 ರಿಂದ 30ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುತ್ತದೆ.
ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾದ ಮೃತ್ಯುಂಜಯಕುಮಾಯ ನಾರಾಯಣ ಅವರು ಗೆಜೆಟ್ ಅಧಿಸೂಚನೆಯಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದ್ದು, ನವೆಂಬರ್ 1 ರಿಂದ 7, 2025ರವರೆಗೆ ಸ್ವಯಂ-ನಮೂದಿಗೆ ಆಯ್ಕೆ ಲಭ್ಯವಿರುತ್ತದೆ ಎಂದು ಖಚಿತಪಡಿಸಿದ್ದಾರೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (MHA)ವು ಜನಗಣತಿ ಕಾಯ್ದೆ, 1948ರ ಸೆಕ್ಷನ್ 17ಎ ಅಡಿಯಲ್ಲಿ ಪೂರ್ವ-ಪರೀಕ್ಷೆಗಾಗಿ ಕಾಯ್ದೆಯ ನಿಬಂಧನೆಗಳನ್ನು ವಿಸ್ತರಿಸಿದೆ. ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ. 2027ರ ಪೂರ್ಣ ಪ್ರಮಾಣದ ಜನಗಣತಿ ಮೊದಲು, ವ್ಯವಸ್ಥೆಗಳನ್ನು ಪರೀಕ್ಷಿಸಲು, ಸವಾಲುಗಳನ್ನು ಗುರುತಿಸಲು ಮತ್ತು ವಿಧಾನಗಳನ್ನು ಉತ್ತಮಗೊಳಿಸಲು ಈ ಪೂರ್ವ-ಪರೀಕ್ಷೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಡಿಜಿಟಲ್ ಹಾಗೂ ಜಾತಿ ಗಣತಿ: ಇದು ಭಾರತದ ಮೊತ್ತಮೊದಲ ಡಿಜಿಟಲ್ ಜನಗಣತಿಯಾಗಿದ್ದು, ಇದೇ ಮೊದಲ ಬಾರಿಗೆ ನಾಗರಿಕರ ಜಾತಿಯನ್ನು ಸಹ ದಾಖಲಿಸಲಾಗುತ್ತದೆ. ಪರೀಕ್ಷಾ ಹಂತದಲ್ಲಿ ಪ್ರಶ್ನೆಗಳು, ದತ್ತಾಂಶ ಸಂಗ್ರಹಣೆ, ತರಬೇತಿ, ಲಾಜಿಸ್ಟಿಕ್ಸ್, ಮೊಬೈಲ್ ಅಪ್ಲಿಕೇಶನ್ ಮತ್ತು ಸಾಫ್ಟ್‌ವೇರ್ ಕಾರ್ಯಕ್ಷಮತೆ ಸೇರಿದಂತೆ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಹಂತ-1 (HLO): ಪ್ರತಿ ಮನೆಯ ವಸತಿ ಪರಿಸ್ಥಿತಿಗಳು, ಆಸ್ತಿಗಳು ಮತ್ತು ಸೌಲಭ್ಯಗಳ ದತ್ತಾಂಶವನ್ನು ಸಂಗ್ರಹಿಸಲಾಗುತ್ತದೆ.
ಹಂತ-2 (PE): ಪ್ರತಿ ಮನೆಯಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ವಿವರ, ಕುಟುಂಬದ ಜನಸಂಖ್ಯೆ ವಿವರ, ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ವಿವರಗಳನ್ನು ದಾಖಲಿಸಲಾಗುತ್ತದೆ. ಈ ಜನಸಂಖ್ಯಾ ಗಣತಿ ಪ್ರಕ್ರಿಯೆಯು 2027ರ ಫೆಬ್ರವರಿ 1 ರಿಂದ ಆರಂಭವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಜನಗಣತಿಯ ಉಲ್ಲೇಖ ದಿನಾಂಕ (Reference Date) ಭಾರತದ ಬಹುತೇಕ ಭಾಗಗಳಿಗೆ ಮಾರ್ಚ್ 1, 2027 ಆಗಿರುತ್ತದೆ. ಆದರೆ, ಲಡಾಖ್ ಮತ್ತು ಹಿಮದಿಂದ ಆವೃತವಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಪ್ರದೇಶಗಳಿಗೆ ಇದು ಅಕ್ಟೋಬರ್ 1, 2026 ಆಗಿರುತ್ತದೆ.
ದೊಡ್ಡ ಪ್ರಮಾಣದ ಈ ದತ್ತಾಂಶ ಸಂಗ್ರಹಣೆ ಕಾರ್ಯಕ್ಕಾಗಿ 34 ಲಕ್ಷಕ್ಕೂ ಹೆಚ್ಚು ಗಣತಿದಾರರು (Enumerators) ಮತ್ತು ಮೇಲ್ವಿಚಾರಕರು (Supervisors) ಹಾಗೂ ಸುಮಾರು 1.3 ಲಕ್ಷ ಜನಗಣತಿ ಕಾರ್ಯಕರ್ತರನ್ನು ನಿಯೋಜಿಸಲಾಗುತ್ತದೆ.
ಇದು ಭಾರತದಲ್ಲಿ ಈ ಪ್ರಕ್ರಿಯೆ ಆರಂಭವಾದ ನಂತರದ 16ನೇ ಜನಗಣತಿ ಮತ್ತು ಸ್ವಾತಂತ್ರ್ಯದ ನಂತರದ 8ನೇ ಜನಗಣತಿಯಾಗಿದೆ. ಜನಗಣತಿ ನಡೆಸುವ ಸರ್ಕಾರದ ಉದ್ದೇಶದ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು 2025ರ ಜೂನ್ 16 ರಂದು ಪ್ರಕಟಿಸಲಾಗಿತ್ತು. ಇದರ ಹಿಂದಿನ ಜನಗಣತಿಯು 2011ರಲ್ಲಿ ನಡೆದಿತ್ತು. 2021ರ ಜನಗಣತಿಯು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿತ್ತು.
ಜನಗಣತಿ 2027 ಭಾರತದ ಅತ್ಯಂತ ಸಮಗ್ರ ಮತ್ತು ತಾಂತ್ರಿಕವಾಗಿ ಮುಂದುವರಿದ ದತ್ತಾಂಶ ಸಂಗ್ರಹಣೆ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇದು ದೇಶದ ವಿವರವಾದ ಜನಸಂಖ್ಯಾ, ಸಾಮಾಜಿಕ ಮತ್ತು ಆರ್ಥಿಕ ಪ್ರೊಫೈಲ್ ಅನ್ನು ಒದಗಿಸುವ ಗುರಿ ಹೊಂದಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

 

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement