ಬೆಳಗಾವಿ: 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ನಂತರ ವಿಚ್ಛೇದನ ಪಡೆದ ನಂತರವೂ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಮಾಜಿ ಪತಿ ಆಕೆಯನ್ನು ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
ಜಿಲ್ಲೆಯ ಸವದತ್ತಿಯ ರಾಮಸೈಟಿನಲ್ಲಿ ಘಟನೆ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ಕೊಲೆಯಾಗಿದ್ದ ಬಸ್ ನಿರ್ವಾಹಕಿ ಕಾಶವ್ವ ಕರೀಕಟ್ಟಿ (34) ತನ್ನ ಮಾಜಿ ಪತಿಯಿಂದಲೇ ಕೊಲೆಯಾದವರು ಎಂದು ಗುರುತಿಸಲಾಗಿದೆ. ಪೊಲೀಸ್ ಆಗಿರುವ ವಿಚ್ಛೇದಿತ ಪತಿ ಸಂತೋಷ ಕಾಂಬಳೆ (35) ಆಕೆಯನ್ನು ಭೀಕರವಾಗಿ ಕೊಲೆಗೈದ ಆರೋಪಿಯಾಗಿದ್ದಾನೆ.
ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾಶವ್ವ ಹಾಗೂ ನಿಪ್ಪಾಣಿಯ ಕಾನ್‌ಸ್ಟೆಬಲ್ ಸಂತೋಷ ಕಾಂಬಳೆ ಇಬ್ಬರು ಪ್ರೀತಿಸಿ 2013ರಲ್ಲಿ ವಿವಾಹವಾಗಿದ್ದರು. 11 ವರ್ಷದ ಪುತ್ರ ಇದ್ದಾನೆ.
ಕಾಶವ್ವ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಈತ ಪದೇ ಪದೇ ಆಕೆಯ ಮೇಲೆ ಸಂಶಯ ಪಟ್ಟು ಕಿರುಕುಳ ನೀಡುತ್ತಿದ್ದ.
ನಿಪ್ಪಾಣಿಯಲ್ಲಿ ಪತಿ, ಪತ್ನಿಯರ ಮಧ್ಯೆ ಕಲಹ ನಡೆದಿತ್ತು. ಇದರಿಂದ ಬೇಸತ್ತ ಪತ್ನಿ ಕಾಶವ್ವ ಸವದತ್ತಿ ಡಿಪೊಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಸವದತ್ತಿಗೂ ಬಂದ ಸಂತೋಷ ಪತ್ನಿಯನ್ನು ಸತಾಯಿಸುತ್ತಿದ್ದ. ಈ ಕುರಿತು ಪತ್ನಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಬಳಿಕ ಸಂತೋಷನನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿತ್ತು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಕಾಶವ್ವ ಬೈಲಹೊಂಗಲ ನ್ಯಾಯಾಲಯದಿಂದ 2025 ರ ಏಪ್ರಿಲ್ 5 ರಂದು ವಿಚ್ಛೇದನ ಪಡೆದುಕೊಂಡಿದ್ದರು.
ಸಂತೋಷ ಅಕ್ಟೋಬರ್ 13 ರಂದು ರಾತ್ರಿ 8 ಗಂಟೆಗೆ ಕಾಶವ್ವನ ಮನೆಗೆ ಹೋಗಿ ಗಲಾಟೆ ಮಾಡಿದ್ದ, ಜಗಳವಾಡಿದ ನಂತರ, ಮಾರಕಾಸ್ತ್ರದಿಂದ ಹೊಟ್ಟೆ, ಕುತ್ತಿಗೆಗೆ ಇರಿದು ಕೊಲೆ ಮಾಡಿ ವಿಷಯ ಬಹಿರಂಗವಾಗದಿರಲೆಂದು ಮನೆಗೆ ಬೀಗ ಹಾಕಿ ಹೋಗಿದ್ದ.
ಆಕೆ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ