ಮೀರತ್: ಬುಲಂದಶಹರದ 60 ವರ್ಷದ ರೈತ ಸಂಜಯಕುಮಾರ, ತಾವು ಮಾಡದ ಅಪರಾಧಕ್ಕಾಗಿ ನ್ಯಾಯಕ್ಕಾಗಿ ಕಾಯುತ್ತಾ 11 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಅವರಿಗೆ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದೆ ಅವರು 11 ವರ್ಷಗಳ ಜೈಲಿನಲ್ಲಿ ಕಳೆಯಬೇಕಾಯಿತು. ಈಗ ನ್ಯಾಯಾಲಯವು ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ.
ಬುಧವಾರ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ADJ) ಮೊಹಮ್ಮದ್ ನಸೀಮ್ ಅವರ ನ್ಯಾಯಾಲಯವು ಸಂಜಯಕುಮಾರ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. ಸಂಜಯಕುಮಾರ ಅವರಿಗೆ ವರ್ಷಗಳಿಂದ ಖಾಸಗಿ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದ ಕಾರಣ 2024 ರಲ್ಲಿ, ಕಾನೂನು ನೆರವು ರಕ್ಷಣಾ ಮಂಡಳಿ ವ್ಯವಸ್ಥೆ (LADCS) ಅವರ ಪ್ರಕರಣವನ್ನು ಕೈಗೆತ್ತಿಕೊಂಡಿತು.
ಈ ಪ್ರಕರಣವು 1993 ರ ಹಿಂದಿನದು. ಜಹಾಂಗೀರಾಬಾದ್‌ನ ಶಂಖಾನಿ ಗ್ರಾಮದ ನಿವಾಸಿ ಶಕೀಲ್ ಅಹ್ಮದ್ ಎಂಬಾತ ಸಂಜಯಕುಮಾರ ಅವರ ಜಮೀನಿನ ಬಳಿ ಕಬ್ಬು ಕದಿಯುವಾಗ ಸಿಕ್ಕಿಬಿದ್ದಿದ್ದ ಮತ್ತು ನಂತರ ಅವರನ್ನು ಹೊಡೆದು ಸಾಯಿಸಲಾಯಿತು. ಕೊಲೆ ಆರೋಪ ಹೊರಿಸಲಾದ ಐವರಲ್ಲಿ ಸಂಜಯಕುಮಾರ ಒಬ್ಬರು. ಅವರನ್ನು 2014 ರಲ್ಲಿ ಬಂಧಿಸಲಾಯಿತು ಮತ್ತು ಈ ವಾರ ಖುಲಾಸೆಯಾಗುವವರೆಗೂ ಜೈಲಿನಲ್ಲಿ ಅವರು ಕಳೆದರು. “ಘಟನೆಯ ಸಮಯದಲ್ಲಿ ಸಂಜಯಕುಮಾರ ಗ್ರಾಮದಲ್ಲಿ ಇರಲಿಲ್ಲ ಎಂದು ಕಾನೂನು ನೆರವು ರಕ್ಷಣಾ ಮಂಡಳಿ ವ್ಯವಸ್ಥೆ(LADCS)ಯ ಬುಲಂದಶಹರದ ಮುಖ್ಯ ವಕೀಲ ರಾಜೀವಕುಮಾರ ಹೇಳಿದರು. ಬಿಡುಗಡೆಯಾದ ನಂತರ ಸಂಜಯಕುಮಾರ ಅವರು ತಾನು ಮಾಡದ ಅಪರಾಧಕ್ಕಾಗಿ 11 ವರ್ಷ ಜೈಲಿನಲ್ಲಿ ಕಳೆದ ನಂತರ, ಈಗ ಅಂತಿಮವಾಗಿ ಮುಕ್ತನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
“1993 ರಿಂದ ನನ್ನ ಜೀವನವು ನಿರಂತರ ಯುದ್ಧವಾಗಿದೆ. ನಾನು ವರ್ಷಗಳ ಕಾಲ ತಲೆಮರೆಸಿಕೊಂಡು ಮನೆಗೆ ನುಸುಳುತ್ತಿದ್ದೆ. 2014 ರಲ್ಲಿ ನನ್ನ ಮಗಳ ಮದುವೆಗೆ ಬಂದಿದ್ದಾಗ, ನನ್ನ ಸ್ವಂತ ಮಗನಿಗೆ ನನ್ನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆಗ, ನಮ್ಮ 50 ಬಿಘಾ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ವಕೀಲರ ಶುಲ್ಕಕ್ಕೆ ನಮ್ಮಲ್ಲಿ ಹಣ ಉಳಿದಿರಲಿಲ್ಲ ಎಂದು ಹೇಳಿದ್ದಾರೆ.
ಜೈಲಿನಲ್ಲಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ನಾನು ಕೈದಿಗಳಿಗೆ ಹೆದರುತ್ತಿರಲಿಲ್ಲ. ನನ್ನ ಕುಟುಂಬವನ್ನು ನೆನೆದು ಹೆದರುತ್ತಿದ್ದೆ ಎಂದು ಹೇಳಿದ್ದಾರೆ. “ನಾನು ಇಂದು ಸ್ವತಂತ್ರ, ಆದರೆ ಜೈಲಿನಲ್ಲಿ ಕಳೆದುಕೊಂಡ ವರ್ಷಗಳು ಎಂದಿಗೂ ಮರಳಿ ಬರುವುದಿಲ್ಲ” ಎಂದು ಅವರು ವಿಷಾದಿಸಿದ್ದಾರೆ. ಸಂಜಯಕುಮಾರ ಅವರ 26 ವರ್ಷದ ಮಗ ಕಪಿಲಕುಮಾರ ಅವರು, ತನ್ನ ತಂದೆ ಜೈಲಿನಲ್ಲಿದ್ದಾಗ ಇಡೀ ಕುಟುಂಬ ಭಯದಲ್ಲಿ ಬದುಕುತ್ತಿತ್ತು ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ