ಅಯೋಧ್ಯೆ ದೀಪೋತ್ಸವ : ಬೆಳಗಿದ 26.17 ಲಕ್ಷ ದೀಪಗಳು, 2,128 ಜನರಿಂದ ಆರತಿ ; ಎರಡು ವಿಶ್ವ ದಾಖಲೆ ಸೃಷ್ಟಿ

ಅಯೋಧ್ಯೆ: ಸರಯೂ ನದಿಯ ತಟದಲ್ಲಿ ಭಾನುವಾರ ನಡೆದ ದೀಪೋತ್ಸವದ ಸಂಭ್ರಮದಲ್ಲಿ ದೀಪಾವಳಿ ಹಬ್ಬವು ಮತ್ತೊಮ್ಮೆ ದಾಖಲೆ ಸೃಷ್ಟಿಸುವ ವೈಭವಕ್ಕೆ ಸಾಕ್ಷಿಯಾಯಿತು.
ಅಯೋಧ್ಯೆಯ ರಾಮ್ ಕಿ ಪೈಡಿ ಮತ್ತು 56 ಘಾಟ್‌ಗಳಲ್ಲಿ ಒಟ್ಟಿಗೆ ಬರೋಬ್ಬರಿ 26.17 ಲಕ್ಷ ದೀಪಗಳನ್ನು ಬೆಳಗಿಸಲಾಯಿತು. ಜೊತೆಗೆ, 2,128 ಮಂದಿ ಏಕಕಾಲದಲ್ಲಿ ‘ಮಹಾ ಆರತಿ’ ಮಾಡುವ ಮೂಲಕ, ಈ ಬಾರಿಯ ದೀಪೋತ್ಸವದಲ್ಲಿ ಎರಡು ಹೊಸ ಗಿನ್ನಿಸ್ ವಿಶ್ವ ದಾಖಲೆಗಳು ಸ್ಥಾಪಿತವಾದವು.
ಉತ್ತರ ಪ್ರದೇಶ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಗಿನ್ನಿಸ್ ವಿಶ್ವ ದಾಖಲೆಗಳ ಪ್ರತಿನಿಧಿಗಳು ಡ್ರೋನ್‌ಗಳ ಮೂಲಕ ದೀಪಗಳ ಲೆಕ್ಕವನ್ನು ಪರಿಶೀಲಿಸಿ ದಾಖಲೆ ಸೃಷ್ಟಿಯಾಗಿದ್ದರ ಬಗ್ಗೆ ಘೋಷಣೆ ಮಾಡಿದ್ದಾರೆ.
ಸಂಜೆ 5 ಗಂಟೆಗೆ ಆರಂಭವಾದ ಈ ದೀಪೋತ್ಸವದ ಸಂಭ್ರಮ ರಾತ್ರಿ 8 ಗಂಟೆಯವರೆಗೆ ಮುಂದುವರೆಯಿತು. ಈ ವರ್ಷದ ಆಚರಣೆಯಲ್ಲಿ ದಾಖಲೆಯ 2,128 ಕಲಾವಿದರು ಪ್ರದರ್ಶಿಸಿದ ಭವ್ಯ ‘ಆರತಿ’ ಸಮಾರಂಭ, ಲೈಟ್ ಅಂಡ್ ಸೌಂಡ್ ಶೋ ಮತ್ತು ಪಟಾಕಿಗಳ ಪ್ರದರ್ಶನ ಇತ್ತು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಆರತಿ:
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಉತ್ಸವದ ಮೊದಲು ಅಯೋಧ್ಯೆಯ ಸಂತರು ಮತ್ತು ಮಹಂತರನ್ನು ಭೇಟಿ ಮಾಡಿ ಶುಭ ಕೋರಿದರು. ಬಳಿಕ, ರಾಮ, ಸೀತೆ ಮತ್ತು ಲಕ್ಷ್ಮಣನ ವೇಷ ಧರಿಸಿದ ಕಲಾವಿದರಿಗೆ ‘ಆರತಿ’ ಮಾಡಿ, ಸಾಂಕೇತಿಕ ರಥ ಅಥವಾ ‘ಪುಷ್ಪಕ ವಿಮಾನ’ವನ್ನು ಎಳೆದರು.
ಅಯೋಧ್ಯೆ ವಿಭಾಗೀಯ ಆಯುಕ್ತ ರಾಜೇಶಕುಮಾರ ಮಾಹಿತಿ ನೀಡಿ,ಈ ಬೆಳಕಿನ ಹಬ್ಬದಲ್ಲಿ ದೀಪಗಳನ್ನು ಬೆಳಗಿಸಲು 33,000 ಸ್ವಯಂಸೇವಕರು ಕಾರ್ಯೋನ್ಮುಖರಾಗಿದ್ದರು. ಅವರಿಗೆ ನಿಗದಿಪಡಿಸಲಾಗಿದ್ದ ಸಣ್ಣ ವಲಯಗಳಲ್ಲಿ ಅವರು ದೀಪಗಳನ್ನು ಸಿದ್ಧಪಡಿಸುತ್ತಿದ್ದರು ಎಂದು ತಿಳಿಸಿದರು.”ಐದು ದೇಶಗಳ ಕಲಾವಿದರು ರಾಮಲೀಲಾ ಪ್ರದರ್ಶನಕ್ಕಾಗಿ ಬಂದಿದ್ದು, ಇದು ರಾತ್ರಿಯಿಡೀ ನಡೆಯಲಿದೆ,” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಹಲವಾರು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸ್ವಯಂಸೇವಕರು ಕಳೆದ ವರ್ಷದ ದಾಖಲೆಯನ್ನು ಮುರಿಯುವ ಗುರಿಯೊಂದಿಗೆ 26 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿದರು. ಒಟ್ಟಾರೆಯಾಗಿ 26,17,215 ದೀಪಗಳು ರಾಮ್ ಕಿ ಪೈಡಿ ಮತ್ತು 56 ಘಾಟ್‌ಗಳನ್ನು ಬೆಳಗಿದವು. ಅತಿ ಹೆಚ್ಚು ಎಣ್ಣೆ ದೀಪಗಳ ಪ್ರದರ್ಶನ (Largest display of oil lamps) ವಿಭಾಗದಲ್ಲಿ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ, ಅಯೋಧ್ಯೆ ಆಡಳಿತ ಮತ್ತು ರಾಮನೋಹರ ಲೋಹಿಯಾ ಅವಧ್ ವಿಶ್ವವಿದ್ಯಾಲಯವು ಜಂಟಿಯಾಗಿ ಗಿನ್ನಿಸ್ ಪ್ರಶಸ್ತಿಯನ್ನು ಸ್ವೀಕರಿಸಿತು.
ಅದೇ ರೀತಿ, ಏಕಕಾಲದಲ್ಲಿ ಅತಿ ಹೆಚ್ಚು ಜನರು ‘ಆರತಿ’ ಮಾಡಿದ ವಿಭಾಗದಲ್ಲಿ (most number of people performing ‘aarti’ simultaneously) ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮತ್ತು ಸರಯೂ ಆರತಿ ಸಮಿತಿ ಜಂಟಿಯಾಗಿ ಗಿನ್ನಿಸ್ ಪ್ರಶಸ್ತಿಯನ್ನು ಪಡೆದುಕೊಂಡವು.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement