
ಬೆಂಗಳೂರು: ರಾಜ್ಯದ ರೈತರಿಗೆ ವಂಚಿಸಿದ ತೆಲಂಗಾಣದ ವ್ಯಾಪಾರಿಗಳ ವಿರುದ್ಧದ ಪ್ರಕರಣದಲ್ಲಿ ಆರೋಪಿ ವ್ಯಕ್ತಿಯ ಪರವಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಭಾವ ಬೀರಲು ಮುಂದಾಗಿದ್ದರು ಎನ್ನಲಾದ ಪೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಚಿಕ್ಕಬಳ್ಳಾಪುರದ ಪೆರೆಸಂದ್ರ ಪಿಎಸ್‌ಐ ಜಗದೀಶ್ ರೆಡ್ಡಿ ಅವರಿಗೆ ಫೋನ್ ಮಾಡಿರುವ ಸಚಿವ ಜಮೀರ್ ಅಹ್ಮದ್ ಖಾನ್, ರಾಜ್ಯದ ರೈತರಿಗೆ ವಂಚನೆ ಮಾಡಿದವರ ಪರವಾಗಿ ಮಾತನಾಡಿದ್ದು, ಈ ಪ್ರಕರಣವನ್ನು ರಾಜಿ ಮಾಡಿಸಿ ಎಂದು ಸೂಚಿಸಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಆಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಜೆಡಿಎಸ್, ಜಮ್ಮೀರ್ ಅಹ್ಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಜಮೀರ್ ಅಹ್ಮದ್‌ಖಾನ್ ಅವರು ತಮ್ಮ ಕಚೇರಿಯ ಆಪ್ತಸಹಾಯಕ ಲಕ್ಷ್ಮೀನಾರಾಯಣ ಅವರ ಫೋನ್ ಮೂಲಕ ಮಾತನಾಡಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಸಾಹೇಬರು ತಮ್ಮೊಂದಿಗೆ ಮಾತನಾಡುತ್ತಾರೆ ಎಂದು ಹೇಳಿದ ಲಕ್ಷ್ಮೀನಾರಾಯಣ ಫೋನ್ ಅನ್ನು ಸಚಿವ ಜಮೀರ್ ಅಹ್ಮದ್‌ಗೆ ಕೊಡುತ್ತಾರೆ.

ಆಗ ಮಾತನಾಡುವ ಸಚಿವರು, ನಮಸ್ತೆ ಬ್ರದರ್ ಏನಿಲ್ಲ… ನಮ್ಮ ಹೈದರಾಬಾದ್‌ನ ಅಕ್ಬರ್ ಅಂತ. ನಮ್ಮ ಸಂಬಂಧಿ ಯಾವುದೋ ಒಂದು ಕೇಸಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ಯಾರಿಗೋ ಒಂದಷ್ಟು ದುಡ್ಡು ಕೊಡಬೇಕಾಗಿತ್ತಂತೆ. ಅಕ್ಬರ್ ಪಾಷಾ ಅಂತ ಹೈದರಾಬಾದ್‌ನಿಂದ ತಾವು ಕರೆದುಕೊಂಡು ಬಂದಿದ್ದಿರಂತೆ. ಏನದು ಕೇಸು ಎಂದು ಪಿಎಸ್‌ಐ ಅವರನ್ನು ಕೇಳುತ್ತಾರೆ. ಸಚಿವರಿಗೆ ಮಾಹಿತಿ ನೀಡುವ ಪಿಎಸ್‌ಐ ಜಗದೀಶ ರೆಡ್ಡಿ ಚೀಟಿಂಗ್ ಪ್ರಕರಣದಲ್ಲಿ ಎಫ್‌ಐಆರ್ ಆಗಿದೆ. ಹೀಗಾಗಿ ಬಂಧಿಸಿ ಕರೆತರಲಾಗಿದೆ ಎಂದು ಹೇಳುತ್ತಾರೆ.
ಅದಕ್ಕೆ ಸಚಿವರು, ಅವರು ನಮಗೆ ಬಹಳ ಬೇಕಾದವರು, ಸ್ವಲ್ಪ ಸಹಾಯ ಮಾಡಿ ಬ್ರದರ್ ಎನ್ನುತ್ತಾರೆ. ಅದಕ್ಕೆ ಉತ್ತರಿಸುವ ಪಿಎಸ್‌ಐ, ದೂರು ಬಂದ ಕೂಡಲೇ ಹೈದರಾಬಾದಿಗೆ ಹೋಗಿ ಸಮಯಕೊಟ್ಟು ಸೆಟಲ್ ಮಾಡಿಕೊಳ್ಳುವಂತೆ ಹೇಳಿದ್ದೆವು. ಆರೋಪಿಯನ್ನು ಪೆರೇಸಂದ್ರಕ್ಕೆ ಕೂಡ ಕರೆಸಿ ಇಲ್ಲಿಯೂ ಮಾತುಕತೆ ಮೂಲಕ ಸೆಟಲ್ ಮಾಡಿಕೊಂಡರೆ ನಾನು ಬಿ ರಿಪೋರ್ಟ್ ಹಾಕುವುದಾಗಿ ಹೇಳಿದ್ದೆ. ಇಬ್ಬರಿಗೂ ಕೂಡ ಈಗೋ ಪ್ರಶ್ನೆ. ಇಬ್ಬರೂ ಒಪ್ಪುತ್ತಿಲ್ಲ ಎನ್ನುತ್ತಾರೆ. ಆಗ ಸಚಿವಜಮೀರ್ ಅಹ್ಮದ್, ಇದೊಂದು ಬಾರಿ ಅವಕಾಶ ಮಾಡಿಕೊಡಿ ಎಂದು ಹೇಳುತ್ತಾರೆ.
ಈ ಆಡಿಯೋ ವೈರಲ್ ಆಗಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್, ರಾಜ್ಯದ ರೈತರಿಗೆ ವಂಚಿಸಿರುವ ನಿಮ್ಮ ಸಂಬಂಧಿಕರ ಪರವಾಗಿ ಸಹಾಯ ಮಾಡುವಂತೆ ಪೊಲೀಸ್ ಅಧಿಕಾರಿಗೆ ಫೋನ್ ಮಾಡಿ ಶಿಫಾರಸ್ಸು ಮಾಡಿರುವುದು ಅಕ್ಷಮ್ಯ. ರಾಜ್ಯದ ಜವಾಬ್ದಾರಿಯುತ ಸಚಿವರಾಗಿ ವಂಚಕರ ಪರ ವಹಿಸಿ, ರಾಜ್ಯದ ರೈತರಿಗೆ ಮೋಸ ಮಾಡಲು ಆತ್ಮಸಾಕ್ಷಿ ಹೇಗೆ ಒಪ್ಪುತ್ತದೆ ಎಂದು ಪ್ರಶ್ನಿಸಿದೆ.
ಗೃಹ ಸಚಿವ ಡಾ.ಪರಮೇಶ್ವರ ಅವರೇ, ರಾಜ್ಯದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸುವುದನ್ನು ಬಿಟ್ಟು ಪೊಲೀಸ್ ಇಲಾಖೆ ಸೆಟಲ್‌ಮೆಂಟ್ ಕೇಂದ್ರಗಳಾಗಿವೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ ಎಂದು ಟೀಕಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ