ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸೂರ್ಯಕಾಂತ ನೇಮಕ

ನವದೆಹಲಿ: ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ (CJI) ಆಗಿ ನೇಮಕ ಮಾಡಲು ಕೇಂದ್ರ ಸರ್ಕಾರವು ಗುರುವಾರ ಒಪ್ಪಿಗೆ ನೀಡಿದೆ. ಅವರು ನವೆಂಬರ್ 24 ರಿಂದ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.
ಕೇಂದ್ರ ಕಾನೂನು ಸಚಿವರಾದ ಅರ್ಜುನರಾಮ ಮೇಘವಾಲ್ ಅವರು ‘ಎಕ್ಸ್’ (X) ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯವನ್ನು ಪ್ರಕಟಿಸಿದ್ದಾರೆ. “ಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ಸೂರ್ಯಕಾಂತ ಅವರನ್ನು ನವೆಂಬರ್ 24, 2025 ರಿಂದ ಜಾರಿಗೆ ಬರುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಿಸಲು ರಾಷ್ಟ್ರಪತಿಯವರು ಸಂತೋಷಪಟ್ಟಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ,” ಎಂದು ಮೇಘವಾಲ್ ಅವರು ತಿಳಿಸಿದ್ದಾರೆ.
ಈ ನೇಮಕಾತಿಯು ಹಾಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಶಿಫಾರಸಿನ ಮೇರೆಗೆ ನಡೆದಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರು ನವೆಂಬರ್ 23 ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ, ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸೂರ್ಯಕಾಂತ ಅವರ ಹೆಸರನ್ನು ಶಿಫಾರಸು ಮಾಡಿ ಅವರು ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಸುದೀರ್ಘ ಅವಧಿ
ನ್ಯಾಯಮೂರ್ತಿ ಸೂರ್ಯಕಾಂತ ಅವರು ಮೇ 24, 2019 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಅವರು ಫೆಬ್ರವರಿ 9, 2027 ರವರೆಗೆ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು 14 ತಿಂಗಳಿಗೂ ಹೆಚ್ಚು ಕಾಲ ತುಲನಾತ್ಮಕವಾಗಿ ಸುದೀರ್ಘ ಅವಧಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.
ನ್ಯಾಯಮೂರ್ತಿ ಸೂರ್ಯಕಾಂತ ಅವರ ಬಗ್ಗೆ
ಜನನ: ನ್ಯಾಯಮೂರ್ತಿ ಸೂರ್ಯಕಾಂತ ಅವರು ಫೆಬ್ರವರಿ 10, 1962 ರಂದು ಹರಿಯಾಣದ ಹಿಸಾರ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರು 1981 ರಲ್ಲಿ ಹಿಸಾರ್‌ನ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು 1984 ರಲ್ಲಿ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು.

1984 ರಲ್ಲಿ ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ಕಾನೂನು ಪ್ರಾಕ್ಟೀಸ್‌ ಪ್ರಾರಂಭಿಸಿ, 1985 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ತಮ್ಮ ಪ್ರಾಕ್ಟೀಸ್‌ ಅನ್ನು ವರ್ಗಾಯಿಸಿದರು. ಮಾರ್ಚ್ 2001 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು.
ಜನವರಿ 9, 2004 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರಾಗಿ ನೇಮಕಗೊಳ್ಳುವವರೆಗೂ ಅವರು ಹರಿಯಾಣದ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದರು. ಮೇ 2019 ರಲ್ಲಿ ಸುಪ್ರೀಂ ಕೋರ್ಟ್‌ಗೆ ಬರುವ ಮೊದಲು, ಅಕ್ಟೋಬರ್ 5, 2018 ರಿಂದ ಹಿಮಾಚಲ ಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿಯೂ ಕಾರ್ಯನಿರ್ವಹಿಸಿದ್ದರು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement