ಬಿಹಾರ ಚುನಾವಣೆ : ಈ ಬಾರಿ ಅಧಿಕಾರಿ ಯಾರಿಗೆ ? ಜೆವಿಸಿ ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು..?

ಬಿಹಾರ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ, ಪ್ರಶಾಂತ್ ಕಿಶೋರ್ ಅವರ ಜನ್‌ ಸುರಾಜ್‌ ಪಕ್ಷವು ಎನ್‌ಡಿಎ (NDA) ಮತ್ತು ಮಹಾ ಮೈತ್ರಿಕೂಟದ ಜೊತೆಗೆ ಸ್ಪರ್ಧಿಸುತ್ತಿದ್ದು, ಸ್ಪರ್ಧೆಯನ್ನು ಆಸಕ್ತಿದಾಯಕವಾಗಿಸಿದೆ.
ಚುನಾವಣೆಗೆ ಕೆಲದಿನಗಳ ಮೊದಲು, ಟೈಮ್ಸ್ ನೌ ಸುದ್ದಿ ಚಾನೆಲ್ -ಜೆವಿಸಿ (JVC) ನಡೆಸಿದ ಅಭಿಪ್ರಾಯ ಸಮೀಕ್ಷೆಯು ಆಡಳಿತಾರೂಢ ಎನ್‌ಡಿಎ ಪುನಃ ಅಧಿಕಾರಕ್ಕೆ ಮರಳುವ ಸೂಚನೆ ನೀಡಿದೆ. ಸಮೀಕ್ಷೆಯ ಪ್ರಕಾರ, ಎನ್‌ಡಿಎ 120-140 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಬಹುಮತಕ್ಕೆ 122 ಸ್ಥಾನಗಳಲ್ಲಿ ಗೆಲ್ಲಬೇಕಿದೆ. ತೇಜಸ್ವಿ ಯಾದವ್ ನೇತೃತ್ವದ ಮಹಾ ಮೈತ್ರಿಕೂಟ 93-112 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು ಎಂದು ಹೇಳಿದೆ. ಆದರೆ ಎರಡೂ ಮೈತ್ರಿಕೂಟಗಳ ನಡುವೆ ನಿಕಟ ಸ್ಪರ್ಧೆ ಇದೆ ಎಂಬುದನ್ನು ಇದು ಸೂಚಿಸುತ್ತದೆ.

ಎನ್‌ಡಿಗೆ ಬಹುಮತದ ನಿರೀಕ್ಷೆ
ಜೆವಿಸಿ ಪೋಲ್ಸ್ ನಡೆಸಿದ ಅಭಿಪ್ರಾಯ ಸಮೀಕ್ಷೆಯು ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿ (ಯು) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಧಿಕಾರವನ್ನು ಉಳಿಸಿಕೊಳ್ಳಬಹುದು ಎಂದು ಭವಿಷ್ಯ ನುಡಿದಿದೆ. ಸಮೀಕ್ಷೆಯ ವರದಿಯ ಪ್ರಕಾರ, 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ 120 ರಿಂದ 140 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದರೆ, ಮಹಾ ಮೈತ್ರಿಕೂಟ (ಮಹಾ ಮೈತ್ರಿಕೂಟ) 93 ರಿಂದ 112 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಬಿಜೆಪಿ 70 ರಿಂದ 81 ಸ್ಥಾನಗಳನ್ನು ಪಡೆಯುವ ಮೂಲಕ ವಿಧಾನಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಜೆಡಿಯು 42 ರಿಂದ 48 ಸ್ಥಾನಗಳನ್ನು, ಎಲ್‌ಜೆಪಿ (ರಾಮ್ ವಿಲಾಸ್) 5 ರಿಂದ 7, ಎಚ್‌ಎಎಂ (ಜಾತ್ಯತೀತ) 2 ಮತ್ತು ರಾಷ್ಟ್ರೀಯ ಲೋಕ ಮೋರ್ಚಾ 1 ರಿಂದ 2 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಪ್ರಶಾಂತ ಕಿಶೋರಗೆ ಒಳ್ಳೆಯ ಸುದ್ದಿಯಲ್ಲ
ಮಹಾ ಮೈತ್ರಿಕೂಟದೊಳಗೆ, ಆರ್‌ಜೆಡಿ 69 ರಿಂದ 78 ಸ್ಥಾನಗಳನ್ನು, ಕಾಂಗ್ರೆಸ್ 9 ರಿಂದ 17, ಸಿಪಿಐ (ಎಂಎಲ್) 12 ರಿಂದ 14, ಸಿಪಿಐ 1 ಮತ್ತು ಸಿಪಿಎಂ 1 ರಿಂದ 2 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಜೆವಿಸಿ ಸಮೀಕ್ಷೆಯು ರಾಜಕಾರಣಿಯಾಗಿ ಬದಲಾದ ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಅವರ ಜನ್ ಸುರಾಜ್‌ ಪಕ್ಷವು ಕೇವಲ ಒಂದು ಸ್ಥಾನದೊಂದಿಗೆ ತನ್ನ ಖಾತೆಯನ್ನು ತೆರೆಯುತ್ತದೆ ಎಂದು ಭವಿಷ್ಯ ನುಡಿದಿದೆ. ಏತನ್ಮಧ್ಯೆ, ಎಐಎಂಐಎಂ (AIMIM), ಬಿಎಸ್‌ಪಿ (BSP) ಮತ್ತು ಇತರರು 8 ರಿಂದ 10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ.

ಜನಪ್ರಿಯತೆಯ ಪಟ್ಟಿಯಲ್ಲಿ ಯಾರಿಗೆ ಅಗ್ರಸ್ಥಾನ ?
ಜೆವಿಸಿ ಸಮೀಕ್ಷೆಯ ಪ್ರಕಾರ, ಮುಖ್ಯಮಂತ್ರಿ ಹುದ್ದೆಗೆ ಶೇ. 33 ರಷ್ಟು ಬೆಂಬಲದೊಂದಿಗೆ ತೇಜಸ್ವಿ ಯಾದವ್ ಹೆಚ್ಚು ಆದ್ಯತೆ ಪಡೆದ ಅಭ್ಯರ್ಥಿಯಾಗಿದ್ದಾರೆ. ನಿತೀಶಕುಮಾರ ಸಮೀಪವೇ ಇದ್ದು, ಶೇ. 29 ರಷ್ಟು ಬೆಂಬಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಚಿರಾಗ್ ಪಾಸ್ವಾನ್ ಮತ್ತು ಪ್ರಶಾಂರ ಕಿಶೋರ ತಲಾ ಶೇ. 10 ರಷ್ಟು ಬೆಂಬಲದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಶೇ. 9 ರಷ್ಟು ಬೆಂಬಲ ಪಡೆದಿದ್ದರೆ ಮತ್ತು ಶೇ. 4 ರಷ್ಟು ಜನ ಬಿಜೆಪಿಯ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಶೇ. 5 ರಷ್ಟು ಜನ ಮಹಾ ಮೈತ್ರಿಕೂಟದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಕೇವಲ ಶೇ. 2 ರಷ್ಟು ಮತಗಳ ಅಂತರ
ಅಭಿಪ್ರಾಯ ಸಮೀಕ್ಷೆಗಳ ಪ್ರಕಾರ, ಎನ್‌ಡಿಎ (NDA) ಶೇ. 41 ರಿಂದ ಶೇ. 43 ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ, ಮಹಾ ಮೈತ್ರಿಕೂಟ ಶೇ. 39 ರಿಂದ ಶೇ. 41 ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಜನ್ ಸುರಾಜ್‌ ಪಕ್ಷ ಶೇ. 6 ರಿಂದ ಶೇ. 7 ರಷ್ಟು ಮತಗಳನ್ನು ಗಳಿಸಬಹುದು. ಇತರ ಸಣ್ಣ ಪಕ್ಷಗಳು ಶೇ. 10 ರಿಂದ ಶೇ. 11 ರಷ್ಟು ಮತಗಳನ್ನು ಗಳಿಸಬಹುದು.
ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಅಂತಿಮ ಪಟ್ಟಿಯಲ್ಲಿರುವ ಒಟ್ಟು ಮತದಾರರ ಸಂಖ್ಯೆ 7.42 ಕೋಟಿ ಮತದಾರರಿದ್ದಾರೆ.
2020 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿ 74 ಸ್ಥಾನಗಳನ್ನು ಗೆದ್ದು 19.8% ಮತಗಳನ್ನು ಗಳಿಸಿತ್ತು. ಜನತಾದಳ (ಯುನೈಟೆಡ್) 115 ಸ್ಥಾನಗಳಲ್ಲಿ ಸ್ಪರ್ಧಿಸಿ 43 ಸ್ಥಾನಗಳನ್ನು ಗೆದ್ದು 15.7% ಮತಗಳನ್ನು ಗಳಿಸಿತ್ತು. ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಏಳು ಸ್ಥಾನಗಳಲ್ಲಿ ಸ್ಪರ್ಧಿಸಿ, ನಾಲ್ಕು ಸ್ಥಾನಗಳನ್ನು ಗೆದ್ದು 0.9% ಮತಗಳನ್ನು ಗಳಿಸಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement