ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಅವರ ಜೆಡಿಯು (JD(U)) ಪಕ್ಷದಿಂದ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಶಾಸಕ ಅನಂತ ಸಿಂಗ್ ಅವರನ್ನು ಭಾನುವಾರ ಮುಂಜಾನೆ ಬಂಧಿಸಲಾಗಿದೆ. ಜನ ಸುರಾಜ್ ಪಕ್ಷದ ಬೆಂಬಲಿಗ ದುಲಾರ್ ಚಂದ ಯಾದವ್ ಅವರ ಕೊಲೆಗೆ ಸಂಬಂಧಿಸಿದಂತೆ ಈ ಬಂಧನವಾಗಿದೆ.
ಯಾದವ್ ಅವರು ಈ ಹಿಂದೆ ಆರ್‌ಜೆಡಿ (RJD) ಜೊತೆ ಸಂಬಂಧ ಹೊಂದಿದ್ದ ಗ್ಯಾಂಗ್‌ಸ್ಟರ್-ರಾಜಕಾರಣಿ ಆಗಿದ್ದು, ಪ್ರಶಾಂತ ಕಿಶೋರ ಅವರ ಜನ ಸುರಾಜ್ ಪಕ್ಷದ ಅಭ್ಯರ್ಥಿಯಾಗಿ ಮೊಕಾಮಾದಿಂದ ಸ್ಪರ್ಧಿಸುತ್ತಿರುವ ತಮ್ಮ ಸೋದರಳಿಯ ಪ್ರಿಯದರ್ಶಿ ಪಿಯೂಷ್ ಪರವಾಗಿ ಗುರುವಾರ ಪ್ರಚಾರ ನಡೆಸುತ್ತಿದ್ದಾಗ ಕೊಲೆಯಾಗಿದ್ದರು.
ಏನಿದು ಘಟನೆ?:
ಹಾಲಿ ಶಾಸಕಿ ನೀಲಂ ದೇವಿ ಅವರ ಪತಿ ಹಾಗೂ ಮೊಕಾಮಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಅನಂತ ಸಿಂಗ್ ಅವರನ್ನು ಬಾರ್ಹ್‌ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಯಿತು. ಘಟನೆ ನಡೆದಾಗ ಸ್ಥಳದಲ್ಲಿದ್ದ ಇತರ ಇಬ್ಬರು ವ್ಯಕ್ತಿಗಳಾದ ಮಣಿಕಾಂತ ಠಾಕೂರ್ ಮತ್ತು ರಣಜಿತ್ ರಾಮ ಅವರನ್ನು ಸಹ ಬಂಧಿಸಲಾಗಿದೆ.
ಪೊಲೀಸ್ ಹೇಳಿಕೆ ಪ್ರಕಾರ, “ದುಲಾರ್ ಚಂದ ಯಾದವ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ ಸಿಂಗ್, ಮಣಿಕಾಂತ ಠಾಕೂರ್ ಮತ್ತು ರಣಜಿತ್ ರಾಮ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ,” ಎಂದು ಪಟ್ನಾ ಪೊಲೀಸ್ ವರಿಷ್ಠಾಧಿಕಾರಿ (SSP) ಕಾರ್ತಿಕೇಯ ಶರ್ಮಾ ಅವರು ಪಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ತ್ಯಾಗರಾಜನ್ ಎಸ್.ಎಂ ಅವರೊಂದಿಗೆ ತಡರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಯಾದವ್ ಅವರ ಮರಣೋತ್ತರ ಪರೀಕ್ಷೆ (Post-mortem) ವರದಿಯ ಪ್ರಕಾರ, ಕಠಿಣ ಮತ್ತು ಮೊನಚಾದ ವಸ್ತುವಿನಿಂದ ಹೃದಯ ಮತ್ತು ಶ್ವಾಸಕೋಶಕ್ಕೆ ಆದ ಗಾಯದಿಂದಾಗಿ ಉಂಟಾದ ಆಘಾತದಿಂದ ಅವರು ‘ಕಾರ್ಡಿಯೊರೆಸ್ಪಿರೇಟರಿ ವೈಫಲ್ಯ’ದಿಂದ ಮೃತಪಟ್ಟಿದ್ದಾರೆ. “ಹೀಗಾಗಿ, ಮರಣೋತ್ತರ ಪರೀಕ್ಷೆ ಮತ್ತು ಪ್ರಾಥಮಿಕ ತನಿಖೆಯು ಇದು ಕೊಲೆ ಮಾಡಿದ ಪ್ರಕರಣ ಎಂದು ಸೂಚಿಸುತ್ತದೆ,” ಎಂದು ಎಸ್ಎಸ್‌ಪಿ ಹೇಳಿದ್ದಾರೆ.
ಅನಂತ ಸಿಂಗ್ ಹೇಳಿದ್ದೇನು?
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅನಂತ್ ಸಿಂಗ್, ದುಲಾರ್ ಚಂದ ಯಾದವ್ ಮತ್ತು ಅವರ ಬೆಂಬಲಿಗರ ನಡುವೆ ವಾಗ್ವಾದ ನಡೆದ ಸ್ಥಳದಿಂದ ತಾನು “ಬಹಳ ದೂರ” ಇದ್ದೆ ಎಂದು ಹೇಳಿದ್ದರು. “ಏನು ನಡೆಯಿತು ಎಂಬುದು ನನಗೆ ನಿಖರವಾಗಿ ತಿಳಿದಿಲ್ಲ, ಆದರೆ ನನ್ನ ಕೆಲವು ಜನರು ಯಾದವ್ ಅವರ ಹಿಂಬಾಲಕರು ತಮ್ಮ ವಾಹನಗಳನ್ನು ನಾಶ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ ಎಂದು ಹೇಳಿದ್ದರು.
2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅನಂತ ಸಿಂಗ್ ಅವರು ಆರ್‌ಜೆಡಿ ಅಭ್ಯರ್ಥಿಯಾಗಿ ಗೆದ್ದಿದ್ದರು, ಆದರೆ 2022 ರಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಗಾದ ನಂತರ ಅವರನ್ನು ಅನರ್ಹಗೊಳಿಸಲಾಯಿತು. ನಂತರ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ನೀಲಂ ದೇವಿ ಗೆಲುವು ಸಾಧಿಸಿದ್ದರು.
ಚುನಾವಣಾ ಆಯೋಗದಿಂದ ಅಧಿಕಾರಿಗಳ ವರ್ಗಾವಣೆ
ಯಾದವ್ ಅವರ ಕೊಲೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಶನಿವಾರ ಪಟ್ನಾ ಪೊಲೀಸ್ ಅಧೀಕ್ಷಕ (ಗ್ರಾಮೀಣ) ವಿಕ್ರಮ್ ಸಿಹಾಗ್ ಅವರನ್ನು ವರ್ಗಾಯಿಸಿದೆ. ಮೊಕಾಮಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಬಾರ್ಹ್‌ನ ಉಪ-ವಿಭಾಗೀಯ ಅಧಿಕಾರಿ, ಬಾರ್ಹ್-1 ಮತ್ತು ಬಾರ್ಹ್-2 ಉಪ-ವಿಭಾಗೀಯ ಪೊಲೀಸ್ ಅಧಿಕಾರಿಗಳ ಬದಲಿಗೆ ಹೊಸ ಅಧಿಕಾರಿಗಳನ್ನು ನೇಮಿಸುವಂತೆ ಸಹ ಆಯೋಗ ಆದೇಶಿಸಿದೆ. ಮೂವರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಿರುವ ಆಯೋಗವು, ಬಾರ್ಹ್-2 ರ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಅಭಿಷೇಕ ಸಿಂಗ್ ಅವರನ್ನು ಅಮಾನತುಗೊಳಿಸುವಂತೆ ನಿರ್ದೇಶಿಸಿದೆ.
ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಮತ್ತು ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ