“ನಿಮ್ಮ ಚರ್ಮದ ಆರೈಕೆಯ ಗುಟ್ಟೇನು? ; ಭಾರತದ ವನಿತಾ ಕ್ರಿಕೆಟ್ ತಂಡದ ಆಟಗಾರ್ತಿ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರವೇನು ಗೊತ್ತೆ…?

ನವದೆಹಲಿ : ಐತಿಹಾಸಿಕ ಏಕದಿನ ವಿಶ್ವಕಪ್ ಗೆಲುವಿನ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಭೇಟಿ ಮಾಡಿ ಶ್ಲಾಘಿಸಿದರು.
ಸಂವಾದದ ಸಂದರ್ಭದಲ್ಲಿ ಅವರಿಗೆ ಒಂದು ಹಾಸ್ಯಭರಿತ ಪ್ರಶ್ನೆ ಎದುರಾಯಿತು. ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ಹರ್ಲೀನ್ ಡಿಯೋಲ್ ಅವರು ನಿಮ್ಮ ಚರ್ಮದ ಆರೈಕೆಯ (Skincare) ರಹಸ್ಯವೇನು? ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ. ಅವರು ಪ್ರಧಾನಿಯವರಿಗೆ ನೀವು “ತುಂಬಾ ಹೊಳೆಯುತ್ತೀರಿ” ಎಂದೂ ಹೇಳಿದರು. ಅವರ ಈ ಪ್ರಶ್ನೆಗೆ ಇಡೀ ಸಭಾಂಗಣವೇ ನಗೆಗಡಲಲ್ಲಿ ತೇಲಿತು. ಆಟಗಾರ್ತಿಯರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, “ನಾನು ಈ ಬಗ್ಗೆ ಎಂದಿಗೂ ಹೆಚ್ಚು ಯೋಚಿಸಿಲ್ಲ” ಎಂದು ಉತ್ತರಿಸಿದರು.
ವಿಶ್ವಕಪ್‌ ವಿಜೇತ ಭಾರತದ ಮಹಿಳಾ ಕ್ರಿಕೆಟ್‌ ತಂಡದ ಜೊತೆಗಿನ ಈ ಸಂವಾದದ ವಿಡಿಯೋ ಗುರುವಾರ ಪ್ರಸಾರವಾಯಿತು. ಆಲ್‌ರೌಂಡರ್ ಸ್ನೇಹಾ ರಾಣಾ ಅವರು, ಪ್ರಧಾನಿಯವರ ಹೊಳಪಿಗೆ “ದೇಶವಾಸಿಗಳ ಪ್ರೀತಿಯೇ ಕಾರಣ” ಎಂದು ಹೇಳಿದಾಗ, ಮೋದಿ ಅವರು ಪ್ರತಿಕ್ರಿಯಿಸಿ “ಖಂಡಿತವಾಗಿಯೂ ಹೌದು. ಇದು ಬಲದ ದೊಡ್ಡ ಮೂಲವಾಗಿದೆ. ನಾನು ಸರ್ಕಾರದಲ್ಲಿ ಹಲವು ವರ್ಷಗಳನ್ನು ಕಳೆದಿದ್ದೇನೆ. ಇದೆಲ್ಲದರ ನಡುವೆಯೂ, ಆಶೀರ್ವಾದಗಳು ಬರುತ್ತಲೇ ಇರುತ್ತವೆ ಮತ್ತು ಅದು ಅಂತಿಮವಾಗಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕ

ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿ
ಭಾನುವಾರ ಮುಂಬೈನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ತಮ್ಮ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿತು.
ಇದು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಒಂದು ಮಹತ್ವದ ಕ್ಷಣವಾಗಿತ್ತು. ಹಲವು ವರ್ಷಗಳ ಶ್ರಮ ಮತ್ತು ಕೂದಲೆಳೆಯ ಅಂತರದಲ್ಲಿ ಕೈತಪ್ಪಿದ ಅವಕಾಶಗಳ ನಂತರ, ತಂಡವು ಭಾನುವಾರ ರಾತ್ರಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಏಕದಿನದ ಪಂದ್ಯದ ವಿಶ್ವಕಪ್‌ ಪ್ರಶಸ್ತಿ ಗೆದ್ದ ನಾಲ್ಕನೇ ತಂಡವಾಗಿ ಹೊರಹೊಮ್ಮಿತು.
“2017 ರಲ್ಲಿ ನಾವು ನಿಮ್ಮನ್ನು ಭೇಟಿಯಾದಾಗ ನನಗೆ ಇನ್ನೂ ನೆನಪಿದೆ. ಆ ಸಮಯದಲ್ಲಿ ನಾವು ಟ್ರೋಫಿಯೊಂದಿಗೆ ಬಂದಿರಲಿಲ್ಲ. ಆದರೆ ಈ ಬಾರಿ, ನಾವು ಹಲವು ವರ್ಷಗಳಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಪ್ರಶಸ್ತಿಯೊಂದಿಗೆ ಬಂದಿರುವುದು ನಮಗೆ ಹೆಮ್ಮೆಯ ವಿಷಯ” ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಪ್ರಧಾನಿ ಮೋದಿ ಅವರಿಗೆ ತಿಳಿಸಿದರು. “ಭವಿಷ್ಯದಲ್ಲಿ ನಾವು ಮತ್ತೆ ಮತ್ತೆ ನಿಮ್ಮನ್ನು ಭೇಟಿ ಮಾಡುತ್ತೇವೆ ಮತ್ತು ನಿಮ್ಮೊಂದಿಗೆ ಮತ್ತೆ ಮತ್ತೆ ಫೋಟೋ ತೆಗೆದುಕೊಳ್ಳುತ್ತೇವೆ ಎಂಬುದು ನಮ್ಮ ಗುರಿಯಾಗಿದೆ,” ಎಂದು ಅವರು ಹೇಳಿದರು.

2017 ರಲ್ಲಿ ತಮ್ಮ ಎರಡನೇ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಭಾರತವು ಇಂಗ್ಲೆಂಡ್ ವಿರುದ್ಧ ಕೇವಲ ಒಂಬತ್ತು ರನ್‌ಗಳಿಂದ ಸೋತು ರನ್ನರ್‌ ಅಪ್‌ ಆದ ನಂತರ ತಂಡವು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿತ್ತು.
ಹರ್ಮನ್‌ಪ್ರೀತ್ ಕೌರ್ ಅವರ ಮಾತುಗಳಿಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ, “ನೀವು ದೊಡ್ಡ ಕೆಲಸ ಮಾಡಿದ್ದೀರಿ. ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಆಟವಲ್ಲ. ಒಂದು ರೀತಿಯಲ್ಲಿ, ಅದು ಭಾರತದ ಜನರ ಜೀವನವಾಗಿದೆ. ಕ್ರಿಕೆಟ್‌ನಲ್ಲಿ ಒಳ್ಳೆಯದಾದರೆ, ಇಡೀ ಭಾರತಕ್ಕೆ ಸಂತೋಷವಾಗುತ್ತದೆ ಮತ್ತು ಸ್ವಲ್ಪ ತಪ್ಪು ಸಂಭವಿಸಿದರೂ ಸಹ, ಇಡೀ ಭಾರತವು ದುಃಖಿತವಾಗುತ್ತದೆ” ಎಂದು ಹೇಳಿದರು.
ಪ್ರಧಾನಿಯವರು, ವಿಶ್ವಕಪ್‌ ಸರಣಿ ಆಟಗಾರ್ತಿ (Player of the Tournament) ದೀಪ್ತಿ ಶರ್ಮಾ ಅವರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಆಕೆಯ ಹನುಮಾನ್ ಟ್ಯಾಟೂ ಬಗ್ಗೆಯೂ ವಿಚಾರಿಸಿದರು.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement