ಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕ

ಅಯೋಧ್ಯೆ: ರಾಮಮಂದಿರದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಬುಧವಾರ (ಸೆಪ್ಟೆಂಬರ್‌ 2) ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ಅವರನ್ನು ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯಾಗಿ ನೇಮಿಸಿದೆ.
ಪಶ್ಚಿಮ ವಾಯು ಕಮಾಂಡ್‌ ಮುಖ್ಯಸ್ಥರಾಗಿ ‘ಆಪರೇಷನ್‌ ಸಿಂಧೂರ’ ವೇಳೆ ನೇತೃತ್ವ ವಹಿಸಿದ್ದ ಜೀತೇಂದ್ರ ಮಿಶ್ರ ಅವರಿಗೆ ಈಗ ರಾಮಮಂದಿರದ ಆಡಳಿತದ ಹೊಣೆ ವಹಿಸಲಾಗಿದೆ.
ದೇವಾಲಯದಲ್ಲಿ ದೇಣಿಗೆ ಕಳ್ಳತನದ ವ್ಯಾಪಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಹಾಗೂ ಟ್ರಸ್ಟ್‌ ಸದಸ್ಯ ಅನಿಲ ಮಿಶ್ರ ಅವರು ಹುದ್ದೆಗೆ ರಾಜೀನಾಮೆ ಬಳಿಕ ಈ ನೇಮಕಾತಿ ನಡೆದಿದೆ. ರಾಮಮಂದಿರದ ಆಡಳಿತಾತ್ಮಕ ಕಾರ್ಯಗಳನ್ನು ಸುಗಮವಾಗಿ ಮುನ್ನಡೆಸುವ ಉದ್ದೇಶದಿಂದ ಸಿಇಒ ಹುದ್ದೆಯನ್ನು ಸೃಷ್ಟಿಸಿ ಜೀತೇಂದ್ರ ಮಿಶ್ರ ಅವರನ್ನು ಆಯ್ಕೆ ಮಾಡಲಾಗಿದೆ.

ಸಿಇಒ ಆಗಿ ಜೀತೇಂದ್ರ ಮಿಶ್ರ ಅವರು ದೇವಾಲಯದ ದೈನಂದಿನ ಆಡಳಿತ, ಯಾತ್ರಾರ್ಥಿಗಳ ಸೌಲಭ್ಯಗಳ ನಿರ್ವಹಣೆ, ಹಣಕಾಸು ಹಾಗೂ ಆಡಳಿತಾತ್ಮಕ ವ್ಯವಸ್ಥೆ, ಸಿಬ್ಬಂದಿ ಸಮನ್ವಯ, ಭದ್ರತಾ ವ್ಯವಸ್ಥೆಗಳು ಹಾಗೂ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳ ಸಿದ್ಧತೆ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.
ಸಿಇಒ ಹುದ್ದೆಗೆ ಮಾಜಿ ಐಪಿಎಸ್‌ ಅಧಿಕಾರಿ ರಾಜೇಶ್‌ ಪಾಂಡೆ, ಮಾಜಿ ಐಎಎಸ್‌ ಅಧಿಕಾರಿ ದಿನೇಶ ಚಂದ್ರ, ನಿವೃತ್ತ ಐಎಎಸ್‌ ಅಧಿಕಾರಿ ಯೋಗೇಶ್ವರರಾಮ ಮಿಶ್ರ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಪರೇಶ ಸಕ್ಸೇನಾ ಸೇರಿದಂತೆ ಹಲವರು ಅಭ್ಯರ್ಥಿಗಳಾಗಿದ್ದರು.
ರಾಮಮಂದಿರ ಟ್ರಸ್ಟ್‌ಗೆ ಮೂವರು ಹೊಸ ಟ್ರಸ್ಟಿಗಳು
ಇದಕ್ಕೂ ಮುನ್ನ ರಾಮಮಂದಿರದ ಆಡಳಿತ ಪುನರ್‌ ವ್ಯವಸ್ಥೆಯ ಭಾಗವಾಗಿ ಟ್ರಸ್ಟ್‌ ಮೂವರು ಹೊಸ ಟ್ರಸ್ಟಿಗಳನ್ನು ನೇಮಕ ಮಾಡಿತು. ದೆಹಲಿ ಮೂಲದ ಮಹೇಶ ಭಾಗಚಂದ್ಕಾ, ಅಯೋಧ್ಯೆಯ ಮದನಮೋಹನ ಪಾಂಡೆ ಹಾಗೂ ಶಿಕೋಹಾಬಾದ್‌ನ ನಿರ್ಮಲಾ ಯಾದವ್‌ ಹೊಸ ಟ್ರಸ್ಟಿಗಳಾಗಿ ಆಯ್ಕೆಯಾಗಿದ್ದಾರೆ.

ಪ್ರಮುಖ ಸುದ್ದಿ :-   ಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್‌ ರದ್ದು ಮಾಡಿದ ಸುಪ್ರೀಂ ಕೋರ್ಟ್‌ ; ಆದರೆ ಕೆಲವರಿಗೆ ವಿನಾಯಿತಿ ಇಲ್ಲ...

ಯಾರು ಈ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ?
ಸರ್ವೋತ್ತಮ ಯುದ್ಧ ಸೇವಾ ಪದಕ (SYSM), ಅತಿ ವಿಶಿಷ್ಟ ಸೇವಾ ಪದಕ (AVSM) ಹಾಗೂ ವಿಶಿಷ್ಟ ಸೇವಾ ಪದಕ (VSM) ಪುರಸ್ಕೃತರಾದ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ಅವರು ಭಾರತೀಯ ವಾಯುಪಡೆಯ ಹಿರಿಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಅವರು ಭಾರತೀಯ ವಾಯುಪಡೆಯ ಪಶ್ಚಿಮ ವಾಯು ಕಮಾಂಡ್‌ನ ಏರ್‌ ಆಫೀಸರ್‌ ಕಮಾಂಡಿಂಗ್‌-ಇನ್‌-ಚೀಫ್‌ ಆಗಿ ಸೇವೆ ಸಲ್ಲಿಸಿದ್ದು, ಪಾಕಿಸ್ತಾನದ ವಿರುದ್ಧದ ‘ಆಪರೇಷನ್‌ ಸಿಂಧೂರ’ ಕಾರಾಯಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
2026ರ ಏಪ್ರಿಲ್‌ 30ರಂದು ಭಾರತೀಯ ವಾಯುಪಡೆಯಿಂದ ನಿವೃತ್ತರಾದ ಮಿಶ್ರ ಅವರಿಗೆ ಅತ್ಯುತ್ತಮ ಸೇವೆಗಾಗಿ ಸರ್ವೋತ್ತಮ ಯುದ್ಧ ಸೇವಾ ಪದಕ ಪ್ರದಾನ ಮಾಡಲಾಗಿದೆ. ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯವರಾದ ಅವರು 38 ವರ್ಷಗಳಿಗಿಂತ ಹೆಚ್ಚು ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ಫೈಟರ್‌ ಸ್ಕ್ವಾಡ್ರನ್‌ನ ಕಮಾಂಡಿಂಗ್‌ ಆಫೀಸರ್‌, ಏರ್‌ಕ್ರಾಫ್ಟ್‌ ಮತ್ತು ಸಿಸ್ಟಮ್ಸ್‌ ಟೆಸ್ಟಿಂಗ್‌ ಎಸ್ಟಾಬ್ಲಿಷ್‌ಮೆಂಟ್‌ (ASTE) ನ ಮುಖ್ಯ ಪರೀಕ್ಷಾ ಪೈಲಟ್‌, ಎರಡು ಮುಂಚೂಣಿ ವಾಯುನೆಲೆಗಳ ಏರ್‌ ಆಫೀಸರ್‌ ಕಮಾಂಡಿಂಗ್‌, ಆಪರೇಷನಲ್‌ ಪ್ಲಾನಿಂಗ್‌ ಮತ್ತು ಅಸೆಸ್ಮೆಂಟ್‌ ಗ್ರೂಪ್‌ನ ನಿರ್ದೇಶಕ, ಪ್ರಧಾನ ನಿರ್ದೇಶಕ (ASR), ವಾಯುಪಡೆ ಮುಖ್ಯ ಕಚೇರಿಯ ಸಹಾಯಕ ವಾಯು ಸಿಬ್ಬಂದಿ ಮುಖ್ಯಸ್ಥ (ಪ್ರಾಜೆಕ್ಟ್ಸ್‌), ASTE ಕಮಾಂಡಂಟ್‌ ಹಾಗೂ ಇಂಟಿಗ್ರೇಟೆಡ್‌ ಡಿಫೆನ್ಸ್‌ ಸ್ಟಾಫ್‌ನ ಉಪ ಮುಖ್ಯಸ್ಥ (ಸಿದ್ಧಾಂತ, ಸಂಘಟನೆ ಮತ್ತು ತರಬೇತಿ) ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಪಶ್ಚಿಮ ವಾಯು ಕಮಾಂಡ್‌ನ ಮುಖ್ಯಸ್ಥರಾಗುವ ಮೊದಲು ಅವರು ಇಂಟಿಗ್ರೇಟೆಡ್‌ ಡಿಫೆನ್ಸ್‌ ಸ್ಟಾಫ್‌ನ ಉಪ ಮುಖ್ಯಸ್ಥ(ಆಪರೇಷನ್ಸ್‌)ರಾಗಿಯೂ ಕಾರ್ಯನಿರ್ವಹಿಸಿದ್ದರು.
ಸಿಇಒ ಆಯ್ಕೆ ಹೇಗೆ ನಡೆಯಿತು?
ರಾಮಮಂದಿರದ ಮೊದಲ ಸಿಇಒ ಆಯ್ಕೆ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಪರಿಶೀಲನೆ ಹಾಗೂ ಮಾನವ ಮೌಲ್ಯಮಾಪನ ಎರಡನ್ನೂ ಬಳಸಲಾಯಿತು. ಒಟ್ಟು 600 ಅಂಕಗಳ ಮೌಲ್ಯಮಾಪನ ಮಾನದಂಡದಡಿ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ 3,577 ಅಭ್ಯರ್ಥಿಗಳು ಭಾಗವಹಿಸಿದ್ದರು.
470 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿತ್ತು. ಬಳಿಕ 108 ಅಭ್ಯರ್ಥಿಗಳ ಜೊತೆ ವರ್ಚುವಲ್‌ ಸಂವಾದ ನಡೆಸಿ, ಅಂತಿಮವಾಗಿ 16 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಆಗಸ್ಟ್‌ 11 ಮತ್ತು 12ರಂದು ಅಯೋಧ್ಯೆಯಲ್ಲಿ ಸಂದರ್ಶನ ನಡೆಸಲಾಯಿತು.
ಸಿಇಒ ಹುದ್ದೆಗೆ ಒಟ್ಟು 5,585 ಮಂದಿ ಅರ್ಜಿ ಸಲ್ಲಿಸಿದ್ದರೆ, ಅವರಲ್ಲಿ 3,570 ಅಭ್ಯರ್ಥಿಗಳು ಅರ್ಜಿಯನ್ನು ಪೂರ್ಣಗೊಳಿಸಿ ಹಿಂತಿರುಗಿಸಿದ್ದರು.
ಸಿಇಒ ಆಯ್ಕೆಗಾಗಿ ಜುಲೈ 6ರಂದು ಮೂವರು ಸದಸ್ಯರ ಶೋಧ ಸಮಿತಿಯನ್ನು ರಚಿಸಲಾಗಿತ್ತು. ನಿವೃತ್ತ ನ್ಯಾಯಮೂರ್ತಿ ಪ್ರಮೋದ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ವಿಷ್ಣುಕಾಂತ ಚತುರ್ವೇದಿ ಹಾಗೂ ಸುರೇಶ ಹವಾರೆ ಈ ಸಮಿತಿಯ ಸದಸ್ಯರಾಗಿದ್ದರು.
ರಾಮಮಂದಿರದ ಆಡಳಿತದಲ್ಲಿ ಮಹತ್ವದ ಪುನರ್‌ ವ್ಯವಸ್ಥೆಯ ನಡುವೆ ಜೀತೇಂದ್ರ ಮಿಶ್ರ ಅವರ ನೇಮಕಾತಿ ನಡೆದಿದ್ದು, ದೇವಾಲಯದ ನಿರ್ವಹಣೆ ಮತ್ತು ಭಕ್ತರ ಸೇವೆಗಳನ್ನು ಇನ್ನಷ್ಟು ವ್ಯವಸ್ಥಿತಗೊಳಿಸುವತ್ತ ಟ್ರಸ್ಟ್‌ ಹೆಜ್ಜೆ ಇಟ್ಟಿದೆ.

ಪ್ರಮುಖ ಸುದ್ದಿ :-   200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement