ಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್‌ ರದ್ದು ಮಾಡಿದ ಸುಪ್ರೀಂ ಕೋರ್ಟ್‌ ; ಆದರೆ ಕೆಲವರಿಗೆ ವಿನಾಯಿತಿ ಇಲ್ಲ…

ನವದೆಹಲಿ: ಜುಲೈ 20ರಂದು ನಡೆದ ಕಾಕ್ರೋಚ್‌ ಜನತಾ ಪಾರ್ಟಿ (CJP) ಪ್ರತಿಭಟನೆಗಳ ಬಳಿಕ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ದಾಖಲಿಸಲಾಗಿದ್ದ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ಮಾಡಿದ್ದು, ಜುಲೈ 20ರಿಂದ 25ರವರೆಗೆ ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ಪೀಠವು, ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳು ರದ್ದುಪಡಿಸಲಾಗಿದೆ ಎಂದು ಆದೇಶಿಸಿತು.
ಆದರೆ ಗಂಭೀರ ಅಪರಾಧ ಹಿನ್ನೆಲೆ (ಕ್ರಿಮಿನಲ್ ಆಂಟಿಸಿಡೆಂಟ್ಸ್) ಹೊಂದಿರುವವರ ವಿರುದ್ಧದ ಪ್ರಕರಣಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್‌ನ ಈ ಮಹತ್ವದ ತೀರ್ಪಿನ ಬಳಿಕ, ಸಿಜೆಪಿ ಸೆಪ್ಟೆಂಬರ್‌ 5ರಂದು ದೆಹಲಿಯಲ್ಲಿ ನಡೆಸಲು ಘೋಷಿಸಿದ್ದ ಮೆರವಣಿಗೆಯನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಿದೆ.

ಕೇಂದ್ರದ ಭರವಸೆ ಬಳಿಕ ತೀರ್ಪು
ಜುಲೈ 20ರ ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲಾಗುವುದು ಹಾಗೂ ಇದೇ ಪ್ರತಿಭಟನೆಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಈ ಭರವಸೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿತು.
ಆದಾಗ್ಯೂ, ಜಂತರ್‌ ಮಂತರ್‌ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಗಂಭೀರ ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂದು ತಿಳಿಸಲಾದ 2,873 ಮಂದಿಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ತನಿಖೆಯನ್ನು ಮುಂದುವರಿಸಲು ದೆಹಲಿ ಪೊಲೀಸರಿಗೆ ನ್ಯಾಯಾಲಯ ಅನುಮತಿ ನೀಡಿದೆ.
ಸಿಜೆಪಿ ವಕ್ತಾರ ಸೌರವ ದಾಸ್ ಅವರು, ಕೇಂದ್ರ ಸರ್ಕಾರದ ಸಕಾರಾತ್ಮಕ ಪ್ರತಿಕ್ರಿಯೆ ಹಾಗೂ ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 5ರ ಪ್ರತಿಭಟನಾ ಮೆರವಣಿಗೆಯನ್ನು ಹಿಂತೆಗೆದುಕೊಳ್ಳಲು ಸಂಘಟನೆ ನಿರ್ಧರಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಮುಖ ಸುದ್ದಿ :-   ವಿದೇಶ ಪ್ರವಾಸ, ವಿದೇಶದಲ್ಲಿ ಮದುವೆ ಬೇಡ, ಚಿನ್ನ ಖರೀದಿ ತಗ್ಗಿಸಿ : ದಾಖಲೆ ಆರ್ಥಿಕ ಬೆಳವಣಿಗೆ ನಡುವೆ ಮೋದಿ ಸ್ವದೇಶಿ ಮಂತ್ರ

ಪ್ರಕರಣ ರದ್ದತಿಗೆ ಒಪ್ಪಿದ ರಾಜ್ಯಗಳು
ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಾ, ದೆಹಲಿ ಪೊಲೀಸ್ ಹಾಗೂ ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ವಿದ್ಯಾರ್ಥಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿವೆ ಎಂದು ಹೇಳಿದರು. ಜೊತೆಗೆ ಜುಲೈ 20ರಿಂದ 25ರವರೆಗೆ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಯಾವುದೇ ಹೊಸ ಎಫ್‌ಐಆರ್‌ ದಾಖಲಿಸಲಾಗುವುದಿಲ್ಲ ಎಂಬ ಭರವಸೆಯನ್ನೂ ನೀಡಿವೆ ಎಂದರು.
ಜುಲೈ 25ರಂದು ಸಿಜೆಪಿ ನಾಯಕರಿಗೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯನ್ನು ಗೌರವಿಸುವ ಉದ್ದೇಶದಿಂದಲೇ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
ಕೇಂದ್ರ ಸರ್ಕಾರದ ಭರವಸೆ ಹಾಗೂ ಅದಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಕಾನೂನುಬದ್ಧ ಮಾನ್ಯತೆಯನ್ನು ಉಲ್ಲೇಖಿಸಿದ ಸೌರವ್ ದಾಸ್, “ಕೇಂದ್ರ ಸರ್ಕಾರ ನೀಡಿರುವ ಸಕಾರಾತ್ಮಕ ಭರವಸೆಗಳು ಮತ್ತು ಅವಕ್ಕೆ ಇಂದು ನ್ಯಾಯಾಲಯ ನೀಡಿರುವ ಮಾನ್ಯತೆಯ ಹಿನ್ನೆಲೆಯಲ್ಲಿ, ಹಾಗೂ ನ್ಯಾಯಾಲಯ ಹೊರಡಿಸುತ್ತಿರುವ ಆದೇಶವನ್ನು ಪರಿಗಣಿಸಿ, ಸೆಪ್ಟೆಂಬರ್‌ 5ರ ಮೆರವಣಿಗೆ ಕರೆ ಹಿಂತೆಗೆದುಕೊಳ್ಳುವುದು ಸೂಕ್ತವೆಂದು ಸಿಜೆಪಿ ನಿರ್ಧರಿಸಿದೆ. ಇಂದಿನ ಆದೇಶಕ್ಕಾಗಿ ನ್ಯಾಯಾಲಯಕ್ಕೂ ಹಾಗೂ ಉಭಯ ಪಕ್ಷಗಳ ವಕೀಲರಿಗೂ ಧನ್ಯವಾದ ಸಲ್ಲಿಸುತ್ತೇನೆ” ಎಂದು ಹೇಳಿದರು.

ಪ್ರಮುಖ ಸುದ್ದಿ :-   ಭಾರತದ ವ್ಯಾಪಕ ಸಂಪರ್ಕ ಬಳಸಿ ಯುದ್ಧದ ಹಾದಿಯಲ್ಲಿರುವ ದೇಶಗಳನ್ನು ಸಂವಾದಕ್ಕೆ ಕರೆತನ್ನಿ : ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರ ಮನವಿ

ನೀಟ್ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ
ಇದೇ ವೇಳೆ, ನೀಟ್-ಯುಜಿ 2026 ಪರೀಕ್ಷೆ ರದ್ದಾದ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ಗೌರವಿಸುತ್ತದೆ ಎಂದು ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಪರಿಹಾರ ನೀಡುವ ವಿಧಾನ ಹಾಗೂ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲು ಮೂರು ತಿಂಗಳ ಕಾಲಾವಕಾಶ ನೀಡುವಂತೆ ಕೋರಿದರು.
ಈ ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಪರಿಹಾರ ನೀಡುವ ಸಂಬಂಧದ ಎಲ್ಲಾ ಕಾರ್ಯವಿಧಾನಗಳನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement