ರಾಜ್ಯ ಸರ್ಕಾರದಿಂದ ಪರಿಷ್ಕೃತ ದರ ನಿಗದಿ ; ಪ್ರತಿ ಟನ್‌ ಕಬ್ಬಿಗೆ 3,300 ರೂ. ದರ ನೀಡಲು ನಿರ್ಧಾರ

ಬೆಂಗಳೂರು : ಕಬ್ಬು ಬೆಳೆಗಾರರ ಪ್ರತಿಭಟವೆ ತೀವ್ರಗೊಂಡ ಬೆನ್ನಲ್ಲೇ ಪ್ರತಿ ಟನ್‌ (1 ಸಾವಿರ ಕೆಜಿ) ಕಬ್ಬಿನ ಪರಿಷ್ಕೃತ ಬೆಲೆಯನ್ನು 3,300 ರೂ.ಗಳಿಗೆ ನಿಗದಿ ಮಾಡಿದೆ.
ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಕಬ್ಬು ಬೆಳೆಗಾರರು ಒಪ್ಪಿಗೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಶೇ.10.25 ಇಳುವರಿ ಆಧಾರದ ಮೇಲೆ ಪ್ರತಿ ಟನ್‌ ಕಬ್ಬಿಗೆ 3,550 ರೂ. ಎಫ್‍ಆರ್‌ಪಿ ದರವನ್ನು ನಿಗದಿ ಮಾಡಿತ್ತು. ಆದರೆ ಕರ್ನಾಟಕದಲ್ಲಿ ಸರಾಸರಿ ಇಳುವರಿ ಪ್ರಮಾಣ ಶೇ.9.5 ಮಾತ್ರ ಇದೆ. ಹೀಗಾಗಿ 3,550 ರೂ. ನೀಡಲು ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಪಟ್ಟು ಹಿಡಿದಿದ್ದರು. ಆದರೆ ರೈತರು, ಗುಜರಾತ್‌, ಮಹಾರಾಷ್ಟ್ರದಲ್ಲಿ ಪ್ರತಿ ಟನ್‌ ಕಬ್ಬಿಗೆ 3,500 ರೂ.ಗಳನ್ನು ನೀಡುತ್ತಿರುವಾಗ ಕರ್ನಾಟಕದ ರೈತರಿಗೆ ಮಾತ್ರ ಯಾಕೆ ಕಡಿಮೆ ಹಣ ನೀಡಲಾಗುತ್ತಿದೆ ಎಂದು ಪ್ರಶ್ನಿಸಿ ಪ್ರತಿಭಟನೆಗೆ ಇಳಿದಿದ್ದರು.

ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸರ್ಕಾರ ರೈತರು ಮತ್ತು ಕಾರ್ಖಾನೆ ಮಾಲೀಕರ ಜೊತೆ ಸಂಧಾನ ನಡೆಸಿತ್ತು. ಆದರೆ ರೈತರು ಮತ್ತು ಕಾರ್ಖಾನೆ ಮಾಲೀಕರು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ನಿರ್ಧಾರಕ್ಕೆ ಬರುವುದು ಸಾಧ್ಯವಾಗಿರಲಿಲ್ಲ. ಈಗ ಸರ್ಕಾರ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ 50 ರೂ. ನೀಡುವುದಾಗಿ ಹೇಳಿದ ನಂತರ ಮಾಲೀಕರು ಪಟ್ಟು ಸಡಿಲಿಸಿ ತಾವೂ 50 ರೂ. ನೀಡಲು ಒಪ್ಪಿಕೊಂಡಿದ್ದಾರೆ.
ಹೀಗಾಗಿ ಪ್ರತಿ ಟನ್‌ಗೆ ಕಬ್ಬಿಗೆ ರಾಜ್ಯದಲ್ಲಿ 3,300 ರೂ.ಗಳ ಎಫ್‌ಆರ್‌ಪಿ ನಿಗದಿ ಮಾಡಲಾಗಿದೆ. ಈಗಿರುವ ಪ್ರತಿ ಟನ್‌ ಕಬ್ಬಿಗೆ 3,200 ರೂ.ಗಳಿಗೆ ಹೆಚ್ಚುವರಿಯಾಗಿ 100 ರೂ. ನೀಡಲು ಒಪ್ಪಿಕೊಳ್ಳಲಾಗಿದೆ. ಕಾರ್ಖಾನೆಗಳು 50 ರೂ.ಗಳನ್ನು ಹೆಚ್ಚಿಗೆ ನೀಡಲು ಒಪ್ಪಿಗೆ ನೀಡಿದರೆ ಸರ್ಕಾರದಿಂದಲೂ ಪ್ರತಿಟನ್‌ಗೆ 50 ರೂ. ಸಹಾಯಧನ ಸಿಗಲಿದೆ.

ಪ್ರಮುಖ ಸುದ್ದಿ :-   ಅಪರಿಚಿತ ಬಂದೂಕುಧಾರಿಗಳಿಂದ ಪಾಕಿಸ್ತಾನದಲ್ಲಿ 30ಕ್ಕೂ ಹೆಚ್ಚು ಲಷ್ಕರ್ ಉಗ್ರರ ಹತ್ಯೆ' ; ಕ್ಯಾಮೆರಾ ಮುಂದೆಯೇ ಉಗ್ರನ ಒಪ್ಪಿಗೆ

ಕಾರ್ಖಾನೆಗಳು ಒಂದೇ ಕಂತಿನಲ್ಲಿ 3,200 ರೂ. ನೀಡಬೇಕಾಗುತ್ತದೆ. ಉಳಿದ 50 ರೂ. ಬಾಕಿ ಹಣವನ್ನು 6 ತಿಂಗಳಲ್ಲಿ ಕೊಡಬೇಕು. ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 300 ಕೋಟಿ ರೂ. ಹೊರೆಯಾಗಲಿದೆ. ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ಈ ದರ ಜಾರಿ ಮಾಡುತ್ತಿದ್ದೇವೆ ಎಂದು ಸರ್ಕಾರ ಹೇಳಿದೆ.
ನಿರ್ದಿಷ್ಟ ತೂಕದ ಕಬ್ಬನ್ನು ಅರೆದ ಬಳಿಕ ಉತ್ಪಾದನೆಯಾದ ಸಕ್ಕರೆಯ ಶೇಕಡವಾರು ಪ್ರಮಾಣವನ್ನು ಇಳುವರಿ ಪ್ರಮಾಣ ಎನ್ನಲಾಗುತ್ತದೆ. ಉದಾಹರಣೆಗೆ 100 ಕೆಜಿ ಕಬ್ಬು ಅರೆದಾಗ 10 ಕೆಜಿ ಸಕ್ಕರೆ ಸಿಕ್ಕಿದರೆ ಆಗ ಆ ಕಬ್ಬಿನ ಇಳುವರಿ ಪ್ರಮಾಣ ಶೇ.10 ಆಗುತ್ತದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಹೆದ್ದಾರಿ ಬಂದ್​​ಗೆ ಮುಂದಾಗಿರುವ ರೈತರ ಮೇಲೆ ಪೊಲಿಸರು ಲಾಠಿಚಾರ್ಜ್ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಲಾಠಿ ಚಾರ್ಜ್​ಗೆ ಪ್ರತಿಯಾಗಿ ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಹತ್ತರಗಿ ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement