ವೀಡಿಯೊ | ಹಾರಾಡುವ ಬಾವಲಿಗಳನ್ನು ಇಲಿಗಳು ಹಾರಿ ಹಿಡಿದು ತಿಂದಿದ್ದನ್ನು ನೋಡಿದ್ದೀರಾ..? ಮೊದಲ ಬಾರಿಗೆ ದೃಶ್ಯ ಸೆರೆ ; ರೋಗ ಹರಡುವ ಆತಂಕ

ಬರ್ಲಿನ್ (ಜರ್ಮನಿ) : ಇಲಿಗಳು ಹಾರಾಡುತ್ತಿದ್ದ ಬಾವಲಿಗಳನ್ನು ಬೇಟೆಯಾಡಿದ ಮೊದಲ ವೈಜ್ಞಾನಿಕ ಪುರಾವೆ ಲಭ್ಯವಾಗಿದ್ದು, ಇದು ವಿಜ್ಞಾನಿಗಳಲ್ಲಿ ತಲ್ಲಣ ಮೂಡಿಸಿದೆ. ಪ್ರಾಣಿ ಸಾಮ್ರಾಜ್ಯದ ಅತ್ಯಂತ ಅಪಾಯಕಾರಿ ರೋಗ ವಾಹಕಗಳಾದ ಬಾವಲಿ (Bats) ಮತ್ತು ಇಲಿಗಳ (Rats) ನಡುವಿನ ಈ ಅಪಾಯಕಾರಿ ಬೆಳವಣಿಗೆಯ ಬಗ್ಗೆ ಹೊಸ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಜರ್ಮನಿಯ ಉತ್ತರದ ಎರಡು ಪ್ರಮುಖ ನಗರ ಪ್ರದೇಶದ ಬಾವಲಿಗಳ ವಸಾಹತುಗಳ ಪ್ರವೇಶದ್ವಾರದಲ್ಲಿ ಅಳವಡಿಸಲಾದ ರಾತ್ರಿ ದೃಷ್ಟಿ ಕ್ಯಾಮರಾದಲ್ಲಿ (Night-Vision Footage) ಈ ಅನಿರೀಕ್ಷಿತ ದೃಶ್ಯಗಳು ದಾಖಲಾಗಿವೆ. ಹಾರುತ್ತಿದ್ದ ಬಾವಲಿಗಳನ್ನು ಇಲಿಗಳು ಜಿಗಿದು ಹಿಡಿದು ತಿನ್ನುತ್ತಿರುವ ದೃಶ್ಯವನ್ನು ಈ ಹಿಂದೆ ಎಂದಿಗೂ ಸೆರೆಹಿಡಿಯಲಾಗಿರಲಿಲ್ಲ ಎಂದು ಹೇಳಲಾಗಿದೆ.

ವೀಡಿಯೋದಲ್ಲಿ ಏನಿದೆ?
ಬರ್ಲಿನ್‌ನ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ (Museum of Natural History) ಯ ಜೀವಶಾಸ್ತ್ರಜ್ಞ ಹಾಗೂ ಈ ವರದಿಯ ಪ್ರಮುಖ ಲೇಖಕರಾದ ಫ್ಲೋರಿಯನ್ ಗ್ಲೋಜಾ-ರಾಶ್ (Florian Gloza-Rausch) ಅವರು, “ನಮಗೆ ತಿಳಿದಿರುವ ಪ್ರಕಾರ, ಈ ರೀತಿಯ ಇಲಿಗಳ ವರ್ತನೆ ಈ ಹಿಂದೆ ವೈಜ್ಞಾನಿಕವಾಗಿ ದಾಖಲಾಗಿಲ್ಲ” ಎಂದು ಯುಕೆ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ.
ಸಂಗ್ರಹವಾದ ದೃಶ್ಯಾವಳಿಗಳನ್ನು ‘ಗ್ಲೋಬಲ್ ಇಕಾಲಜಿ ಅಂಡ್ ಕನ್ಸರ್ವೇಶನ್’ (Global Ecology and Conservation) ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ವಿವರಿಸಲಾಗಿದೆ.
ಸೋಂಕು ರೋಗಗಳನ್ನು ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸುವ ಈ ಎರಡು ಪ್ರಭೇದಗಳ ನಡುವೆ ರೋಗಾಣುಗಳು (Pathogens) ಹರಡುವ ಅಪಾಯದ ಬಗ್ಗೆ ಈ ವೀಡಿಯೋ ಹೊಸ ಚರ್ಚೆಗೆ ಕಾರಣವಾಗಿದೆ.

ಏನಾಯಿತು..?
ಬ್ಯಾಡ್ ಸೆಗೆಬರ್ಗ್ (Bad Segeberg) ಎಂಬ ಪ್ರದೇಶದ ಗುಹೆಯ ಪ್ರವೇಶದ್ವಾರದಲ್ಲಿ ಸಂಶೋಧಕರು ಕ್ಯಾಮರಾ ಅಳವಡಿಸಿದ್ದರು.
ಗುಹೆಯಿಂದ ಹೊರಗೆ ಹೋಗುವ ಮತ್ತು ಒಳಗೆ ಬರುವ ಬಾವಲಿಗಳನ್ನು ಕನಿಷ್ಠ 30 ಬಾರಿ ಕಂದು ಇಲಿಗಳು (Brown Rats) ಬೇಟೆಯಾಡಲು ಯತ್ನಿಸಿವೆ. ಅದರಲ್ಲಿ ಅವು 13 ಬಾರಿ ಯಶಸ್ವಿಯಾಗಿವೆ. ಇಲಿಗಳು ಭಾಗಶಃ ತಿಂದ 50ಕ್ಕೂ ಹೆಚ್ಚು ಬಾವಲಿಗಳ ದೇಹದ ಅವಶೇಷಗಳು ಸ್ಥಳದಲ್ಲಿ ದೊರೆತಿವೆ.
ದೃಶ್ಯಾವಳಿಗಳಲ್ಲಿ ಇಲಿಯೊಂದು ಹಿಂಗಾಲುಗಳ ಮೇಲೆ ನಿಂತು, ಸುತ್ತಲೂ ಹಾರಾಡುತ್ತಿರುವ ಬಾವಲಿಗಳತ್ತ ಎಚ್ಚರಿಕೆಯಿಂದ ಗಮನವಿಡುವುದನ್ನು ನೋಡಬಹುದಾಗಿದೆ. ಸೂಕ್ತ ಸಮಯ ಬಂದಾಗ, ಅದು ಸಣ್ಣ ಬಾವಲಿಯನ್ನು ಹಿಡಿದು, ಕಚ್ಚಿ, ತಿನ್ನಲು ಎಳೆದೊಯ್ಯುವುದು ಚಿಚಿಟವಿಯಲ್ಲಿ ಸೆರೆಯಾಗಿದೆ.
ಬಾವಲಿಗಳು ಕತ್ತಲೆಯಲ್ಲಿ ಕೊಲ್ಲಲ್ಪಟ್ಟ ಕಾರಣ, ಇಲಿಗಳು ತಮ್ಮ ಕಳಪೆ ದೃಷ್ಟಿಯ ಬದಲು ಬಾವಲಿಗಳ ರೆಕ್ಕೆಗಳ ಗಾಳಿಯ ಪ್ರವಾಹವನ್ನು (Air Currents) ಗ್ರಹಿಸಿ ಅಥವಾ ತಮ್ಮ ಮೀಸೆಗಳ ಮೂಲಕ ಸ್ಪರ್ಶಿಸಿ (Whiskers) ಬೇಟೆಯಾಡಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

ಆತಂಕಕಾರಿ ಅಂಶಗಳು:
ಬಾವಲಿಗಳು ಕೊರೊನಾವೈರಸ್‌ಗಳಿಂದ ಹಿಡಿದು ರೇಬೀಸ್ (Rabies) ಮತ್ತು ಎಬೋಲಾ (Ebola) ದಂತಹ ಮಾರಣಾಂತಿಕ ಕಾಯಿಲೆಗಳ ವಾಹಕಗಳಾಗಿವೆ. ಇಲಿಗಳು ಮನುಷ್ಯರ ಬಳಿಯೇ ವಾಸಿಸುತ್ತವೆ ಮತ್ತು ಅಂಟಾರ್ಕ್ಟಿಕಾ ಹೊರತುಪಡಿಸಿ ಎಲ್ಲಾ ಖಂಡಗಳಲ್ಲಿ ಕಂಡುಬರುತ್ತವೆ.
“ಈ ರೀತಿಯ ಪರಸ್ಪರ ಕ್ರಿಯೆಯು ಬಾವಲಿ-ಸಂಬಂಧಿತ ರೋಗಾಣುಗಳನ್ನು ಇಲಿಗಳಿಗೆ ಹರಡಲು ಅನುಕೂಲ ಮಾಡಿಕೊಡುತ್ತದೆ, ಇದರಿಂದಾಗಿ ರೋಗಗಳ ಡೈನಾಮಿಕ್ಸ್ ಬದಲಾಗಬಹುದು ಮತ್ತು ಮನುಷ್ಯರು ಹಾಗೂ ಸಾಕುಪ್ರಾಣಿಗಳಿಗೆ ಅವುಗಳ ಹರಡುವಿಕೆಯ ಅವಕಾಶಗಳು ಹೆಚ್ಚಾಗಬಹುದು” ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಜರ್ಮನಿಯ ಮೂಲವಲ್ಲದ ಈ ಇಲಿಗಳು ಅಲ್ಲಿನ ಬಾವಲಿಗಳ ಸಂತತಿಗೆ ಗಂಭೀರ ಹಾನಿಯನ್ನುಂಟುಮಾಡಬಹುದು ಎಂಬ ಕಳವಳವನ್ನೂ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement