ಭಾರತವು ಪರ್ವತಗಳಿಂದ ಹಿಡಿದು ಮರುಭೂಮಿ, ದಟ್ಟವಾದ ಕಾಡುಗಳಿಂದ ಹಿಡಿದು ಸಮುದ್ರದ ಮೇಲೆಯೂ ವರೆಗೂ ವಿಸ್ತರಿಸಿರುವ ಬೃಹತ್ ರೈಲ್ವೆ ಜಾಲವನ್ನು ಹೊಂದಿದೆ. ಕೆಲವು ರೈಲುಗಳು ತಮ್ಮ ವೇಗಕ್ಕೆ ಹೆಸರುವಾಸಿಯಾಗಿದ್ದರೆ, ಮತ್ತೆ ಕೆಲವು ಅತಿ ನಿಧಾನವಾಗಿ ಚಲಿಸುವುದಕ್ಕಾಗಿಯೇ ಖ್ಯಾತಿ ಪಡೆದಿವೆ. ಬುಲೆಟ್ ರೈಲುಗಳು ಮತ್ತು ಹೈಪರ್ ಲೂಪ್ ರೈಲುಗಳನ್ನು ಪರಿಚಯಿಸುವ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೂ, ಆಮೆ ವೇಗದಲ್ಲಿ ಚಲಿಸುವ ರೈಲುಗಳೂ ಇವೆ. ಈ ನಿಧಾನಗತಿಯ ರೈಲುಗಳು ಸಹ ಸದಾ ಪ್ರಯಾಣಿಕರಿಂದ ತುಂಬಿರುತ್ತವೆ.
ಭಾರತದ ಅತಿ ನಿಧಾನಗತಿಯಲ್ಲಿ ಚಲಿಸುವ ರೈಲು ಯಾವುದು?
ಈ ರೈಲು ತನ್ನ ನಿಧಾನಗತಿಯ ವೇಗದಿಂದ ಭಾರತದ ಅತಿ ನಿಧಾನದ ರೈಲು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇದು ಕೇವಲ 46 ಕಿಲೋಮೀಟರ್ ದೂರವನ್ನು ಕ್ರಮಿಸಲು 5 ತಾಸುಗಳ ಸಮಯ ತೆಗೆದುಕೊಳ್ಳುತ್ತದೆ.
ಝೀ ನ್ಯೂಸ್ ವರದಿಯ ಪ್ರಕಾರ, ಈ ರೈಲು ನೀಲಗಿರಿ ಬೆಟ್ಟಗಳ ಸುಂದರ ಕಣಿವೆಗಳು, ದಟ್ಟವಾದ ಅರಣ್ಯಗಳು, ಜಲಪಾತಗಳ ಮೂಲಕ ಹಾದುಹೋಗುತ್ತದೆ. ಅಲ್ಲದೆ, ಇದು 16 ಸುರಂಗಗಳು ಮತ್ತು 250 ಕ್ಕೂ ಹೆಚ್ಚು ಸೇತುವೆಗಳನ್ನು ದಾಟಿ ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ.
ಈ ರೈಲನ್ನು ನೀಲಗಿರಿ ಮೌಂಟೇನ್ ರೈಲ್ವೆ (Nilgiri Mountain Railway) ಎಂದು ಕರೆಯಲಾಗುತ್ತದೆ. ಇದರ ವೇಗ ಗಂಟೆಗೆ ಕೇವಲ 9 ಕಿಲೋಮೀಟರ್. ಇದು ಸೈಕಲ್‌ಗಿಂತಲೂ ನಿಧಾನ ಎಂದು ವರದಿಯಾಗಿದೆ. ದೇಶದ ಅತಿ ವೇಗದ ರೈಲಿಗಿಂತ ಇದು ಸುಮಾರು 18 ಪಟ್ಟು ನಿಧಾನವಾಗಿ ಚಲಿಸುತ್ತದೆ.
ಆದರೆ ಈ ನಿಧಾನಗತಿಯ ಚಲನೆಯ ನಡುವೆಯೂ ಈ ರೈಲು ಪ್ರಯಾಣಿಕರಿಂದ ತುಂಬಿರುತ್ತದೆ. ಪರ್ವತಗಳು, ಕಾಡುಗಳು, ಜಲಪಾತಗಳು ಮತ್ತು ಸುರಂಗಗಳ ಮೂಲಕ ಸಾಗುವ ಈ ರೈಲು, ಪ್ರಯಾಣಿಕರಿಗೆ ಪ್ರಕೃತಿಯ ಸೌಂದರ್ಯವನ್ನು ಹತ್ತಿರದಿಂದ ಆನಂದಿಸುವ ಆಹ್ಲಾದಕರ ಅನುಭವವನ್ನು ನೀಡುತ್ತದೆ.
ನೀಲಗಿರಿ ಮೌಂಟೇನ್ ಎಕ್ಸ್‌ಪ್ರೆಸ್ ತಮಿಳುನಾಡಿನ ಮೆಟ್ಟುಪಾಳ್ಯಂ ನಿಲ್ದಾಣದಿಂದ ಉದಕಮಂಡಲಂ (ಊಟಿ) ನಿಲ್ದಾಣದವರೆಗೆ ಸಂಚರಿಸುತ್ತದೆ. ಈ ಮಾರ್ಗದಲ್ಲಿ ಕೂನೂರು, ವೆಲ್ಲಿಂಗ್ಟನ್ ಮತ್ತು ಲವ್‌ಡೇಲ್‌ನಂತಹ ಪ್ರದೇಶಗಳ ಮೂಲಕ ಸಾಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ