ಶಾಲೆಯಲ್ಲಿ 100 ಸಿಟ್-ಅಪ್‌ಗಳನ್ನು ಮಾಡಿಸಿದ ನಂತರ 6ನೇ ತರಗತಿ ವಿದ್ಯಾರ್ಥಿನಿ ಸಾವು ; ಕುಟುಂಬದ ಆರೋಪ

ಪಾಲ್ಘರ್ (ಮಹಾರಾಷ್ಟ್ರ) : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕರು ನೀಡಿದ ದಂಡನೆಯ ಭಾಗವಾಗಿ 100 ಸಿಟ್-ಅಪ್‌ಗಳನ್ನು ಮಾಡಿದ ನಂತರ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.  ಈ ವಿದ್ಯಾರ್ಥಿನಿ, ಶುಕ್ರವಾರ ರಾತ್ರಿ ಮುಂಬೈನ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ.
ರಾಜ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಸದಸ್ಯರು ಆರೋಪಿಸಿರುವ ಪ್ರಕಾರ, ಈ ವಿದ್ಯಾರ್ಥಿನಿ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳು ನವೆಂಬರ್ 8 ರಂದು ಶಾಲೆಗೆ ತಡವಾಗಿ ತಲುಪಿದ್ದರಿಂದ, ಶಿಕ್ಷಕರು ಅವರಿಗೆ ತಲಾ 100 ಸಿಟ್-ಅಪ್‌ಗಳನ್ನು ಮಾಡಿಸಿದ್ದಾರೆ.
ಮೃತ ವಿದ್ಯಾರ್ಥಿನಿಯ ತಾಯಿ ಈ ದಂಡನೆಯನ್ನು “ಅಮಾನವೀಯ” ಎಂದು ಬಣ್ಣಿಸಿದ್ದಾರೆ. ಮಗಳ ಬೆನ್ನಿನ ಮೇಲೆ ಶಾಲಾ ಬ್ಯಾಗ್ ಇದ್ದಾಗಲೇ ಸಿಟ್-ಅಪ್‌ಗಳನ್ನು ಮಾಡಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ದಂಡನೆಯ ನಂತರ ಬಾಲಕಿ ತೀವ್ರ ಬೆನ್ನು ಮತ್ತು ಕುತ್ತಿಗೆ ನೋವಿನಿಂದ ಬಳಲುತ್ತಿದ್ದು, ಏಳಲು ಸಹ ಸಾಧ್ಯವಾಗಿರಲಿಲ್ಲ ಎಂದು ತಾಯಿ ತಿಳಿಸಿದ್ದಾರೆ. ವಸೈಯ ಎಂಎನ್‌ಎಸ್ ನಾಯಕ ಸಚಿನ್ ಮೋರೆ, ವಿದ್ಯಾರ್ಥಿನಿಗೆ ಮೊದಲೇ ಆರೋಗ್ಯ ಸಮಸ್ಯೆಗಳಿದ್ದರೂ ಶಿಕ್ಷೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ದಂಡನೆಯ ನಂತರ ವಿದ್ಯಾರ್ಥಿನಿಯ ಆರೋಗ್ಯವು ಕ್ಷಿಪ್ರವಾಗಿ ಹದಗೆಟ್ಟಿತು. ಆಕೆಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ ಎಂದು ಹೇಳಲಾಗಿದೆ.
ಘಟನೆಯ ಬಗ್ಗೆ ತಿಳಿದ ತಾಯಿ ತಕ್ಷಣ ಶಾಲೆಗೆ ಹೋಗಿ ಶಿಕ್ಷಕರನ್ನು ಪ್ರಶ್ನಿಸಿದ್ದಾರೆ. “ವಿದ್ಯಾರ್ಥಿಗಳು ತಡವಾಗಿ ಬಂದಿದ್ದಕ್ಕೆ ಶಿಕ್ಷೆ ನೀಡಲಾಗಿದೆ ಎಂದು ನನಗೆ ಹೇಳಲಾಯಿತು. ಪೋಷಕರು ಶುಲ್ಕ ಪಾವತಿಸಿದರೂ ಪಾಠ ಮಾಡುವುದಿಲ್ಲ ಎಂದು ಆರೋಪಿಸುತ್ತಾರೆ, ಆದ್ದರಿಂದ ಶಿಕ್ಷೆ ನೀಡಿದೆವು ಎಂದು ಶಿಕ್ಷಕರು ಸಮರ್ಥಿಸಿಕೊಂಡರು,” ಎಂದು ಅವರು ವರದಿಗಾರರಿಗೆ ತಿಳಿಸಿದರು. “ಆದರೆ, ದಂಡನೆ ಎಂದರೆ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಸಿಟ್-ಅಪ್ ಮಾಡುವಂತೆ ಒತ್ತಾಯಿಸುವುದಲ್ಲ,” ಎಂದು ಶಿಕ್ಷಕರಿಗೆ ಹೇಳಿದ್ದಾಗಿ ತಾಯಿ ತಿಳಿಸಿದ್ದಾರೆ.

ಪೋಷಕರಲ್ಲಿ ಆಕ್ರೋಶ
ಈ ಘಟನೆಯು ಪೋಷಕರು ಮತ್ತು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಇಲ್ಲಿಯವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಬ್ಲಾಕ್ ಶಿಕ್ಷಣಾಧಿಕಾರಿ ಪಾಂಡುರಂಗ ಗಲಂಗೆ ಅವರು ವಿದ್ಯಾರೀನಿ ಸಾವಿನ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. “ಈ ತನಿಖೆಯಿಂದ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ,” ಎಂದು ಅವರು ಹೇಳಿದ್ದಾರೆ.
ಶಾಲೆಯ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿ, “ಈ ಮಗು ಎಷ್ಟು ಸಿಟ್-ಅಪ್‌ಗಳನ್ನು ಮಾಡಿತ್ತು ಎಂಬುದು ತಿಳಿದಿಲ್ಲ. ಇದು ದಂಡನೆಯಿಂದಾಗಿ ಆಗಿದೆಯೇ ಅಥವಾ ಬೇರೆ ಕಾರಣದಿಂದಾಗಿದೆಯೇ ಎಂಬುದು ನಿಜವಾಗಿಯೂ ತಿಳಿದಿಲ್ಲ,” ಎಂದಿದ್ದಾರೆ.
ಏತನ್ಮಧ್ಯೆ, ಎಂಎನ್‌ಎಸ್ ಕಾರ್ಯಕರ್ತರು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಶಾಲೆಗೆ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement