ಅತಿದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣ ; ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ…!

ಬೆಂಗಳೂರು: ಬೆಂಗಳೂರಿನಲ್ಲಿ 57 ವರ್ಷದ ಮಹಿಳೆಯೊಬ್ಬರಿಗೆ ಆರು ತಿಂಗಳ ಅವಧಿಯಲ್ಲಿ ಸುಮಾರು ₹ 32 ಕೋಟಿಗಳಷ್ಟು ಬೃಹತ್ ಮೊತ್ತದ ವಂಚನೆ ಮಾಡಲಾಗಿದೆ. ‘ಡಿಜಿಟಲ್ ಬಂಧನ’ (Digital Arrest) ಹೆಸರಿನಲ್ಲಿ ಈ ವಂಚನೆ ನಡೆಸಲಾಗಿದ್ದು, ಸಿಬಿಐ (CBI) ಅಧಿಕಾರಿಗಳೆಂದು ನಟಿಸಿದ ವಂಚಕರು ಮಹಿಳೆಯನ್ನು ನಿರಂತರವಾಗಿ ವೀಡಿಯೊ ಕಣ್ಗಾವಲಿನಲ್ಲಿರಿಸಿ, ಹಣ ಕಳುಹಿಸುವಂತೆ ಒತ್ತಾಯಿಸಿ 187 ಬ್ಯಾಂಕ್ ವರ್ಗಾವಣೆಗಳ ಮೂಲಕ ವಂಚನೆ ಮಾಡಲಾಗಿದೆ ಎನ್ನಲಾಗಿದೆ.
ಈ ವಂಚನೆಯು 2024ರ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಿದ್ದು, ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸಂತ್ರಸ್ತ ಮಹಿಳೆ ಹಲವು ತಿಂಗಳ ದುಃಸ್ಥಿತಿಯ ನಂತರ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತು ಈ ವರ್ಷದ ಆರಂಭದಲ್ಲಿ ತನಿಖಾಧಿಕಾರಿಗಳನ್ನು ಸಂಪರ್ಕಿಸಿದ ನಂತರ ಪ್ರಕರಣ ದಾಖಲಾಗಿದೆ.
ವಂಚನೆಯ ಆರಂಭ: ಡಿಎಚ್‌ಎಲ್ ಹೆಸರಿನಲ್ಲಿ ಕರೆ
ಮಹಿಳೆಗೆ ಮೊದಲು ಡಿಎಚ್‌ಎಲ್ (DHL) ಕಾರ್ಯನಿರ್ವಾಹಕ ಎಂದು ಹೇಳಿಕೊಂಡ ವ್ಯಕ್ತಿಯಿಂದ ಕರೆ ಬಂದಿತ್ತು. ಆ ಕರೆ ಮಾಡಿದ ವ್ಯಕ್ತಿ, ಮುಂಬೈನ ಅಂಧೇರಿ ಕೇಂದ್ರದಲ್ಲಿ ಆಕೆಯ ಹೆಸರಿನಲ್ಲಿ ಬಂದಿರುವ ಪಾರ್ಸೆಲ್‌ನಲ್ಲಿ ಮೂರು ಕ್ರೆಡಿಟ್ ಕಾರ್ಡ್‌ಗಳು, ನಾಲ್ಕು ಪಾಸ್‌ಪೋರ್ಟ್‌ಗಳು ಮತ್ತು ನಿಷಿದ್ಧ ಎಂಡಿಎಂಎ (MDMA) ಡ್ರಗ್ಸ್‌ ಇವೆ ಎಂದು ಆರೋಪಿಸಿದ್ದ.
ಈ ಪಾರ್ಸೆಲ್‌ಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಮಹಿಳೆ ಹೇಳಿದಾಗ, ಕರೆ ಮಾಡಿದವನು, ಆಕೆಯ ಫೋನ್ ಸಂಖ್ಯೆ ಪಾರ್ಸೆಲ್‌ಗೆ ಲಿಂಕ್ ಆಗಿದೆ ಮತ್ತು ಇದು ‘ಸೈಬರ್‌ ಕ್ರೈಮ್’ ಆಗಿರಬಹುದು ಎಂದು ಎಚ್ಚರಿಸಿದ್ದ. ನಂತರ, ಕರೆಯು ಸಿಬಿಐ ಅಧಿಕಾರಿಯೆಂದು ಹೇಳಿಕೊಂಡ ವ್ಯಕ್ತಿಗೆ ವರ್ಗಾವಣೆಯಾಯಿತು. ಆತ “ಎಲ್ಲಾ ಸಾಕ್ಷ್ಯಗಳು ನಿಮ್ಮ ವಿರುದ್ಧವಾಗಿವೆ” ಎಂದು ಮಹಿಳೆಗೆ ಬೆದರಿಸಿದ್ದ.

ನಿರಂತರ ವಿಡಿಯೋ ಕಣ್ಗಾವಲು ಮತ್ತು ಒತ್ತಡ
ವಂಚಕರು ಮಹಿಳೆಯ ಮನೆಯ ಮೇಲೆ ಅಪರಾಧಿಗಳು ನಿಗಾ ಇಟ್ಟಿರುವುದರಿಂದ ಪೊಲೀಸರನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಿದ್ದರು. ತನ್ನ ಕುಟುಂಬದ ಸುರಕ್ಷತೆ ಮತ್ತು ಮಗನ ಮದುವೆಯ ಭಯದಿಂದ ಮಹಿಳೆ ಅವರ ಸೂಚನೆಗಳನ್ನು ಪಾಲಿಸಿದ್ದಾಳೆ.
ವಂಚಕರು ಆಕೆಗೆ ಎರಡು ಸ್ಕೈಪ್ ಐಡಿಗಳನ್ನು ಇನ್‌ಸ್ಟಾಲ್ ಮಾಡಿ ನಿರಂತರವಾಗಿ ವೀಡಿಯೊ ಕರೆಗಳಲ್ಲಿ ಇರುವಂತೆ ಸೂಚಿಸಿದ್ದರು. ಈ ವೇದಿಕೆಯನ್ನು ಈ ವರ್ಷ ಮೇ ತಿಂಗಳಲ್ಲಿ ಸ್ಥಗಿತಗೊಳಿಸಲಾಯಿತು. ಮೊದಲು ‘ಮೋಹಿತ್ ಹಂಡಾ’ ಎಂಬಾತ ಎರಡು ದಿನಗಳ ಕಾಲ, ನಂತರ ‘ರಾಹುಲ್ ಯಾದವ್’ ಎಂಬಾತ ಒಂದು ವಾರ ಕಣ್ಗಾವಲು ಇಟ್ಟಿದ್ದ. ಮತ್ತೊಬ್ಬ ನಕಲಿ ಅಧಿಕಾರಿ, ‘ಪ್ರದೀಪ್ ಸಿಂಗ್’ ಎಂಬಾತ ಹಿರಿಯ ಸಿಬಿಐ ಅಧಿಕಾರಿಯೆಂದು ಹೇಳಿಕೊಂಡು ಒತ್ತಡ ಹೇರಿದ್ದ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್‌ ಚುನಾವಣೆ: ಬಿಜೆಪಿ-ಜೆಡಿಎಸ್ ಶಾಸಕರ ‘ಅಡ್ಡ ಮತದಾನ ’ ಕಾಂಗ್ರೆಸ್ ಕೈ ಹಿಡಿದದ್ದು ಹೇಗೆ ?

187 ವರ್ಗಾವಣೆಗಳಲ್ಲಿ 31.83 ಕೋಟಿ ವರ್ಗಾವಣೆ
ಕಳೆದ ವರ್ಷ ಸೆಪ್ಟೆಂಬರ್ 24 ಮತ್ತು ಅಕ್ಟೋಬರ್ 22 ರ ನಡುವೆ, ಮಹಿಳೆ ತನ್ನ ಹಣಕಾಸಿನ ವಿವರಗಳನ್ನು ವಂಚಕರಿಗೆ ಬಹಿರಂಗಪಡಿಸಿ, ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಲು ಪ್ರಾರಂಭಿಸಿದ್ದಳು. ಅಕ್ಟೋಬರ್ 24 ರಿಂದ ನವೆಂಬರ್ 3 ರವರೆಗೆ, ಆಕೆ ‘ಷ್ಯೂರಿಟಿ ಮೊತ್ತ’ (Surety Amount) ಎಂದು ₹ 2 ಕೋಟಿ ಠೇವಣಿ ಇಟ್ಟಳು. ನಂತರ ‘ತೆರಿಗೆಗಳು’ ಎಂದು ಹಣ ನೀಡಿದ್ದಳು.
ಸಂತ್ರಸ್ತೆ ತನ್ನ ಸ್ಥಿರ ಠೇವಣಿಗಳನ್ನು ಮುರಿದು, ಇತರ ಉಳಿತಾಯಗಳನ್ನು ಲಿಕ್ವಿಡೇಟ್ ಮಾಡಿ, ವಂಚಕರ ಸೂಚನೆಯಂತೆ187 ವಹಿವಾಟುಗಳಲ್ಲಿ ಒಟ್ಟು ₹ 31.83 ಕೋಟಿ ವರ್ಗಾಯಿಸಿದ್ದಾಳೆ. ಈ ಎಲ್ಲಾ ಹಣವನ್ನು “ಪರಿಶೀಲನೆಯ ನಂತರ” 2025ರ ಫೆಬ್ರವರಿಯೊಳಗೆ ಹಿಂದಿರುಗಿಸಲಾಗುವುದು ಎಂದು ವಂಚಕರು ಪದೇ ಪದೇ ಮಹಿಳೆಗೆ ಭರವಸೆ ನೀಡಿದ್ದರು.
ವಂಚಕರು ಮಗನ ನಿಶ್ಚಿತಾರ್ಥಕ್ಕೂ ಮುನ್ನ ‘ಕ್ಲಿಯರೆನ್ಸ್ ಲೆಟರ್’ ನೀಡುವುದಾಗಿ ಭರವಸೆ ನೀಡಿದ್ದು, ಆಕೆಗೆ ನಕಲಿ ದಾಖಲೆಯನ್ನು ಸಹ ನೀಡಿದ್ದರು. ಈ ಒತ್ತಡದಿಂದ ಮಹಿಳೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅಸ್ವಸ್ಥರಾಗಿ, ಒಂದು ತಿಂಗಳ ವೈದ್ಯಕೀಯ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ : ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್‌ ಬುಲಾವ್

ಪೊಲೀಸ್ ದೂರು ಮತ್ತು ತನಿಖೆ
“ಈ ಸಮಯದಲ್ಲೆಲ್ಲಾ ನಾನು ಸ್ಕೈಪ್ ಮೂಲಕ ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂದು ವರದಿ ಮಾಡಬೇಕಾಗಿತ್ತು. ಪ್ರದೀಪ್ ಸಿಂಗ್ ಪ್ರತಿದಿನ ಸಂಪರ್ಕದಲ್ಲಿದ್ದ. ಎಲ್ಲಾ ಕಾರ್ಯವಿಧಾನಗಳು ಪೂರ್ಣಗೊಂಡ ನಂತರ ಫೆಬ್ರವರಿ 25 ರೊಳಗೆ ಹಣವನ್ನು ಹಿಂದಿರುಗಿಸಲಾಗುವುದು ಎಂದು ನನಗೆ ಹೇಳಲಾಗಿತ್ತು” ಎಂದು ಮಹಿಳೆ ಹೇಳಿದ್ದಾರೆ.
ಡಿಸೆಂಬರ್ ನಂತರವೂ ವಂಚಕರು ‘ಪ್ರೊಸೆಸಿಂಗ್ ಶುಲ್ಕ’ (Processing Charges) ಎಂದು ಹಣವನ್ನು ಕೇಳುತ್ತಲೇ ಇದ್ದು, ಮರುಪಾವತಿಯ ಭರವಸೆಯನ್ನು ಫೆಬ್ರವರಿಯಿಂದ ಮಾರ್ಚ್‌ಗೆ ಮುಂದೂಡಿದ್ದರು. ಕೆಲವೇ ದಿನಗಳಲ್ಲಿ ಅವರ ಸಂಪರ್ಕವು ಸಂಪೂರ್ಣವಾಗಿ ನಿಂತುಹೋಯಿತು. ನಂತರ ಮಹಿಳೆಯು ತನ್ನ ಮಗನ ಮದುವೆಯು ಜೂನ್‌ನಲ್ಲಿ ಮುಗಿದ ನಂತರ ಪೊಲೀಸ್ ದೂರು ದಾಖಲಿಸಿದ್ದಾರೆ. “ಒಟ್ಟಾರೆಯಾಗಿ, 187 ವಹಿವಾಟುಗಳ ಮೂಲಕ, ನಾನು ಸುಮಾರು ₹ 31.83 ಕೋಟಿ ಕಳೆದುಕೊಂಡಿದ್ದೇನೆ” ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದು, ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪೊಲೀಸರು ಈ ಅತ್ಯಾಧುನಿಕ ವಂಚನೆಯ ಜಾಲದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement