ಪುಟ್ಟಪರ್ತಿ (ಆಂಧ್ರ ಪ್ರದೇಶ): ಬುಧವಾರ (ನವೆಂಬರ್ 19) ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟಿ ಐಶ್ವರ್ಯ ರೈ, ಕೇಂದ್ರ ಸಚಿವರಾದ ರಾಮ ಮೋಹನ ನಾಯ್ಡು ಮತ್ತು ಜಿ. ಕಿಶನ್ ರೆಡ್ಡಿ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ, ಐಶ್ವರ್ಯ ಅವರು ಶ್ರೀ ಸತ್ಯಸಾಯಿ ಬಾಬಾ ಅವರ ಬೋಧನೆಗಳನ್ನು ಸ್ಮರಿಸುತ್ತಾ ಪ್ರಭಾವಶಾಲಿ ಭಾಷಣ ಮಾಡಿದರು. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದ್ದು ಎಲ್ಲರ ಗಮನಸೆಳೆಯಿತು. ಐಶ್ವರ್ಯ ಅವರು ಪ್ರಧಾನಿಯವರ ಪಾದಗಳಿಗೆ ನಮಸ್ಕರಿಸುತ್ತಿದ್ದಂತೆ, ಪ್ರಧಾನಿ ಮೋದಿ ಅವರು ಆಶೀರ್ವಾದ ಮಾಡಿ ನಂತರ ಕೈ ಜೋಡಿಸಿ ನಮಸ್ಕರಿಸಿದರು. ಇದರ ವೀಡಿಯೋ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಐಶ್ವರ್ಯ ಅವರು, ಶ್ರೀ ಸತ್ಯಸಾಯಿ ಬಾಬಾ ಅವರ ಅಮರ ಸಂದೇಶವನ್ನು ನೆನಪಿಸಿಕೊಂಡು, “ಇರುವುದು ಒಂದೇ ಜಾತಿ, ಅದು ಮಾನವೀಯತೆಯ ಜಾತಿ. ಇರುವುದು ಒಂದೇ ಧರ್ಮ, ಅದು ಪ್ರೀತಿಯ ಧರ್ಮ. ಇರುವುದು ಒಂದೇ ಭಾಷೆ, ಅದು ಹೃದಯದ ಭಾಷೆ, ಮತ್ತು ಇರುವುದು ಒಬ್ಬನೇ ದೇವರು, ಅವನು ಸರ್ವವ್ಯಾಪಿ” ಎಂದು ಹೇಳಿದರು.
ಮಾಜಿ ವಿಶ್ವ ಸುಂದರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದರು. “ಇಂದು ನಮ್ಮೊಂದಿಗೆ ಇಲ್ಲಿ ಉಪಸ್ಥಿತರಿದ್ದು, ಈ ವಿಶೇಷ ಸಂದರ್ಭಕ್ಕೆ ಗೌರವ ತಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇಲ್ಲಿ ನಿಮ್ಮ ಉಪಸ್ಥಿತಿಯು ಈ ಶತಮಾನೋತ್ಸವ ಸಮಾರಂಭಕ್ಕೆ ಪಾವಿತ್ರ್ಯ ಮತ್ತು ಸ್ಫೂರ್ತಿಯನ್ನು ತುಂಬಿದೆ. ‘ನಿಜವಾದ ನಾಯಕತ್ವವೇ ಸೇವೆ ಮತ್ತು ಮಾನವನ ಸೇವೆ ದೇವರ ಸೇವೆ’ ಎಂಬ ಸತ್ಯ ಸಾಯಿ ಬಾಬಾ ಸಂದೇಶವನ್ನು ಇದು ನಮಗೆ ನೆನಪಿಸುತ್ತದೆ ಎಂದು ಐಶ್ವರ್ಯ ರೈ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ