
ಗುವಾಹತಿ: ಅಸ್ಸಾಂ ವಿಧಾನಸಭೆಯಲ್ಲಿ ಗುರುವಾರ ಬಹುಪತ್ನಿತ್ವವನ್ನು ನಿಷೇಧಿಸುವ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಈ ಕಾಯಿದೆಯು ಬಹುಪತ್ನಿತ್ವವನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿದ್ದು, ಈ ಕೃತ್ಯಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಸಂತ್ರಸ್ತ ಮಹಿಳೆಗೆ ಪರಿಹಾರ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
‘ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ, 2025’ ಯು ಉತ್ತರಾಖಂಡ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆಯ ಹಾದಿಯಲ್ಲಿ ರಾಜ್ಯದಲ್ಲಿ ಹೊಸ ಶಾಸನವನ್ನು ತರುವ ಮೊದಲ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಮುಂದಿನ ವರ್ಷದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಮೊದಲ ವಿಧಾನಸಭೆ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆಯನ್ನು ಸಂಪೂರ್ಣವಾಗಿ ಅಂಗೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಶರ್ಮಾ ಭರವಸೆ ನೀಡಿದ್ದಾರೆ.
ಮಸೂದೆಯ ಪ್ರಮುಖ ಅಂಶಗಳು:
ಮೊದಲ ವಿವಾಹವು ಕಾನೂನುಬದ್ಧವಾಗಿ ಇರುವಾಗಲೇ ಎರಡನೇ ವಿವಾಹ ಕಾನೂನುಬಾಹಿರವಾಗಿದ್ದು, ಕಾನೂನುಬಾಹಿರವಾಗಿ ಎರಡನೇ ಮದುವೆಯಾಗಿರುವುದು ಸಾಬೀತಾದರೆ ವಿವಾಹವಾಗುವ ಯಾವುದೇ ವ್ಯಕ್ತಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಈಗಾಗಲೇ ಇರುವ ವಿವಾಹವನ್ನು ಮುಚ್ಚಿಟ್ಟು ಮತ್ತೆ ವಿವಾಹವಾದಲ್ಲಿ, ಅಂತಹ ವ್ಯಕ್ತಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
ಬಹುಪತ್ನಿತ್ವದಿಂದಾಗಿ ಅಪಾರ ನೋವು ಮತ್ತು ಕಷ್ಟ ಅನುಭವಿಸುವ ಸಂತ್ರಸ್ತ ಮಹಿಳೆಯರಿಗೆ ಪರಿಹಾರ ನೀಡಲು ಮಸೂದೆ ಅವಕಾಶ ಕಲ್ಪಿಸುತ್ತದೆ. ಈ ಕಾಯಿದೆಯಡಿ ಪುನರಾವರ್ತಿತ ಅಪರಾಧ ಎಸಗುವವರಿಗೆ ಪ್ರತಿ ನಂತರದ ಅಪರಾಧಕ್ಕೆ ನಿಗದಿತ ಶಿಕ್ಷೆಯ ಎರಡು ಪಟ್ಟು ಶಿಕ್ಷೆಯನ್ನು ನೀಡಲು ಮಸೂದೆ ಪ್ರಸ್ತಾಪಿಸಿದೆ.
ಬಹುಪತ್ನಿತ್ವ ವಿವಾಹವನ್ನು ನಡೆಸಲು ಅಥವಾ ಅದರಲ್ಲಿ ಭಾಗವಹಿಸಲು ಉದ್ದೇಶಪೂರ್ವಕವಾಗಿ ಅಥವಾ ಮೋಸದಿಂದ ಸತ್ಯಗಳನ್ನು ಮುಚ್ಚಿಟ್ಟ ಗ್ರಾಮದ ಮುಖ್ಯಸ್ಥ, ಪೋಷಕರು ಅಥವಾ ಕಾನೂನು ಪಾಲಕರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು.
ಉದ್ದೇಶಿತ ಕಾನೂನನ್ನು ಉಲ್ಲಂಘಿಸಿ ವಿವಾಹವನ್ನು ತಿಳಿದೂ ಅದನ್ನು ನಡೆಸುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 1.50 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು.
ಈ ಮಸೂದೆಯು ಸಂವಿಧಾನದ ಆರನೇ ವೇಳಾಪಟ್ಟಿಯ ವ್ಯಾಪ್ತಿಯಲ್ಲಿರುವ ಪ್ರದೇಶಗಳು ಮತ್ತು ಪರಿಶಿಷ್ಟ ಪಂಗಡಗಳನ್ನು (Scheduled Tribes) ಹೊರತುಪಡಿಸಿದೆ. ಈ ಪ್ರದೇಶಗಳು ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಪ್ರದೇಶಗಳಿಗೆ ಸ್ವಾಯತ್ತತೆಯನ್ನು ನೀಡುತ್ತವೆ.
ಸಿಎಂ ಹಿಮಂತಬಿಸ್ವ ಶರ್ಮಾ ಹೇಳಿಕೆ:
ಮಸೂದೆಯನ್ನು ಮಂಡಿಸುವಾಗ ಮುಖ್ಯ ಶರ್ಮಾ ಅವರು, ರಾಜ್ಯದಲ್ಲಿ ಮಹಿಳೆಯರ ಹಕ್ಕುಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. “ಮಹಿಳೆಯರಿಗೆ ನ್ಯಾಯ, ಗೌರವ ಮತ್ತು ಕಾನೂನು ರಕ್ಷಣೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಅಚಲ ನಿರ್ಧಾರದೊಂದಿಗೆ ಮುನ್ನಡೆಯುತ್ತಿದೆ” ಎಂದು ಅವರು ತಿಳಿಸಿದ್ದಾರೆ. ಈ ಮಸೂದೆಯು ‘ನಾರಿ ಶಕ್ತಿ’ ತತ್ವಗಳನ್ನು ಎತ್ತಿಹಿಡಿಯುವ ಮತ್ತು ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಬಲಪಡಿಸುವ ಅಸ್ಸಾಂನ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಶರ್ಮಾ ಪ್ರತಿಪಾದಿಸಿದರು.



ನಿಮ್ಮ ಕಾಮೆಂಟ್ ಬರೆಯಿರಿ