ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಎರಡು ವರ್ಷದ ಮಗುವೊಂದನ್ನುವಮರುದಿನ ಸಾಕು ನಾಯಿ ಪತ್ತೆ ಮಾಡಿದೆ ಎಂದು ವರದಿಯಾಗಿದೆ.
ಎಸ್ಟೇಟ್ ಮನೆಯಿಂದ ಕಾಣೆಯಾಗಿದ್ದ ಎರಡು ವರ್ಷದ ಹೆಣ್ಣು ಮಗು, ಅರಣ್ಯ ಇಲಾಖೆಯ ಸಿಬ್ಬಂದಿ, ಸಾಕಿದ ನಾಯಿ ಮತ್ತು ಇತರ ಗ್ರಾಮಸ್ಥರ ನಿರಂತರ ಪ್ರಯತ್ನದ ನಂತರ ಪತ್ತೆಯಾಗಿ ಪೋಷಕರ ಮಡಿಲು ಸೇರಿದೆ.
ಅರಣ್ಯದಂಚಿನಲ್ಲಿರುವ ಕೊಂಗನ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಎಸ್ಟೇಟ್ ಕೆಲಸಗಾರ ದಂಪತಿ ಐದು ದಿನಗಳ ಹಿಂದೆ ಬಿ ಶೆಟ್ಟಿಗೇರಿಯ ಖಾಸಗಿ ಎಸ್ಟೇಟ್ನಲ್ಲಿ ಕೆಲಸಕ್ಕೆ ಬಂದಿದ್ದರು. ಈ ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ.
ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಶನಿವಾರ ಕಾರ್ಮಿಕರಾದ ಸುನಿಲ ಮತ್ತು ನಾಗಿಣಿ ದಂಪತಿ ಕೆಲಸಕ್ಕೆ ಹೊರಡುವಾಗ ಮಗುವನ್ನು ಎಸ್ಟೇಟ್ ಲೈನ್ ಮನೆಯ ಬಳಿ ಇರುವ ಇತರ ಮಕ್ಕಳೊಂದಿಗೆ ಆಟವಾಡಲು ಬಿಟ್ಟು ಹೋಗಿದ್ದರು. ಆದರೆ, ದಂಪತಿ ಕೆಲಸ ಮುಗಿಸಿ ಹಿಂದಿರುಗಿದಾಗ ಮಗಳು ಕಾಣೆಯಾಗಿದ್ದಳು. ಮಗುವಿನೊಂದಿಗೆ ಆಡುತ್ತಿದ್ದ ಇತರ ಮಕ್ಕಳಿಗೂ ಅವಳು ಎಲ್ಲಿ ಹೋದಳು ಎಂಬುದು ತಿಳಿದಿರಲಿಲ್ಲ.
ತಕ್ಷಣವೇ ದಂಪತಿ ಮತ್ತು ಇತರ ಎಸ್ಟೇಟ್ ಕೆಲಸಗಾರರು ಎಸ್ಟೇಟ್ನಾದ್ಯಂತ ಮಗುವನ್ನು ಹುಡುಕಿದರು. ಮಗು ಎಲ್ಲಿಯೂ ಸಿಗದಿದ್ದಾಗ ಎಸ್ಟೇಟ್ ಮಾಲೀಕರಿಗೆ ವಿಷಯ ತಿಳಿಸಿ, ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ದೂರು ನೀಡಲಾಯಿತು.
ಎಸ್ಟೇಟ್ ಅರಣ್ಯದಂಚಿನಲ್ಲೇ ಇದ್ದ ಕಾರಣ, ಅರಣ್ಯ ಇಲಾಖೆಯ ಸಿಬ್ಬಂದಿ ಸಹ ಹುಡುಕಾಟ ಕಾರ್ಯಾಚರಣೆಯಲ್ಲಿ ಸೇರಿಕೊಂಡು, ಅರಣ್ಯ ಪ್ರದೇಶದ ಭಾಗವನ್ನು ಜಾಲಾಡಿದರು. ಅರಣ್ಯ ಸಿಬ್ಬಂದಿ ನಿರಂತರವಾಗಿ ಶೋಧ ಕಾರ್ಯ ನಡೆಸಿದರು.ತಂಡವು ಮಧ್ಯರಾತ್ರಿಯವರೆಗೂ ಹುಡುಕಾಟವನ್ನು ಮುಂದುವರೆಸಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಸಾಕು ನಾಯಿಯ ಸಹಾಯದಿಂದ ಮಗು ಪತ್ತೆ
ಭಾನುವಾರ ಬೆಳಿಗ್ಗೆ ಗ್ರಾಮಸ್ಥರು ಮತ್ತು ಬಿ ಶೆಟ್ಟಿಗೇರಿ ಗ್ರಾಪಂ ಅಧ್ಯಕ್ಷ ಕೊಲ್ಲಿರ ಬೋಪಣ್ಣ ಮತ್ತು ಅವರ ಪರಿಚಿತ ಅನಿಲ ಕಲಪ್ಪ ಅವರು ಹುಡುಕಾಟ ಕಾರ್ಯಾಚರಣೆಗೆ ಕೈಜೋಡಿಸಿದರು. ಅನಿಲ ಅವರು ತಮ್ಮ ಸಾಕು ನಾಯಿಗಳಾದ ಓರಿಯೋ, ಡ್ಯೂಕ್, ಲಾಲಾ ಮತ್ತು ಚುಕ್ಕಿ ಯನ್ನು ಹುಡುಕಾಟಕ್ಕಾಗಿ ಕರೆತಂದರು. ಈ ನಾಯಿಗಳು ಎಸ್ಟೇಟ್ ಪ್ರದೇಶವನ್ನು ಜಾಲಾಡಿದವು. ಅವುಗಳಲ್ಲಿ ಒಂದು ನಾಯಿಯಾದ ಓರಿಯೋ, ಎಸ್ಟೇಟ್ನ ಅತ್ಯಂತ ಎತ್ತರದ ಸ್ಥಳದಿಂದ ಜೋರಾಗಿ ಬೊಗಳಲು ಪ್ರಾರಂಭಿಸಿತು. ಗ್ರಾಮಸ್ಥರು ಅಲ್ಲಿಗೆ ಧಾವಿಸಿದಾಗ, ಸುನನ್ಯಾ ಎಸ್ಟೇಟ್ನ ಕಾಫಿ ಗಿಡದ ಬಳಿ ಕುಳಿತಿರುವುದು ಪತ್ತೆಯಾಯಿತು. ಇಡೀ ರಾತ್ರಿ ಅರಣ್ಯದಂಚಿನಲ್ಲಿ ಒಬ್ಬಂಟಿಯಾಗಿ ಕಳೆದಿದ್ದರೂ ಮಗು ಸುರಕ್ಷಿತವಾಗಿದ್ದಳು ಎಂದು ವರದಿ ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ