ಆಘಾತಕಾರಿ…: ಪತ್ನಿಯನ್ನು ಕೊಂದು, ಶವದ ಜೊತೆ ಸೆಲ್ಫಿ ತೆಗೆದುಕೊಂಡು ವಾಟ್ಸಾಪ್ ಸ್ಟೇಟಸ್ ಪೋಸ್ಟ್ ಮಾಡಿದ ವ್ಯಕ್ತಿ

ಚೆನ್ನೈ: ತಮಿಳುನಾಡಿನಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಘಟನೆಯಲ್ಲಿ, ಕೋಯಮತ್ತೂರಿನ ಮಹಿಳಾ ವಸತಿ ನಿಲಯದೊಳಗೆ ತಿರುನೆಲ್ವೇಲಿ ಮೂಲದ ಮಹಿಳೆಯೊಬ್ಬರನ್ನು ಅವರಿಂದ ಬೇರೆಯಾಗಿರುವ ಪತಿ ಅತ್ಯಂತ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ.
ಕೋಯಮತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಪ್ರಿಯಾ ಅವರು ತಮ್ಮ ಪತಿ ಬಾಲಮುರುಗನ್ ಅವರಿಂದ ಪ್ರತ್ಯೇಕವಾಗಿದ್ದರು. ಭಾನುವಾರ ಮಧ್ಯಾಹ್ನ, ಆತ ಬಟ್ಟೆಯಲ್ಲಿ ಕುಡುಗೋಲನ್ನು ಅಡಗಿಸಿಕೊಂಡು ಆಕೆಯನ್ನು ಭೇಟಿಯಾಗಲು ವಸತಿ ನಿಲಯಕ್ಕೆ ಬಂದಿದ್ದ.

ತನಿಖಾಧಿಕಾರಿಗಳ ಪ್ರಕಾರ, ಅವರಿಬ್ಬರು ಭೇಟಿಯಾದ ತಕ್ಷಣವೇ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಈ ವೇಳೆ, ಬಾಲಮುರುಗನ್ ಇದ್ದಕ್ಕಿದ್ದಂತೆ ಕುಡುಗೋಲನ್ನು ಹೊರತೆಗೆದು ವಸತಿ ನಿಲಯದಲ್ಲಿಯೇ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆಘಾತಕಾರಿ ವಿಷಯವೆಂದರೆ, ಕೊಲೆ ಮಾಡಿದ ನಂತರ ಆತ ಶವದೊಂದಿಗೆ ಸೆಲ್ಫಿ ತೆಗೆದುಕೊಂಡು, ತನಗೆ “ದ್ರೋಹ” ಮಾಡಿದ್ದಾಳೆ ಎಂದು ಹೇಳಿ ಅದನ್ನು ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಭೀಕರ ದಾಳಿಯ ಸಮಯದಲ್ಲಿ ವಸತಿ ನಿಲಯದ ಇತರ ನಿವಾಸಿಗಳು ಭಯಭೀತರಾಗಿ ಹೊರಗೆ ಓಡಿ ಹೋಗಿದ್ದಾರೆ. ಆದರೆ, ಬಾಲಮುರುಗನ್ ಸ್ಥಳದಲ್ಲೇ ನಿಂತು ಪೊಲೀಸರು ಬರುವವರೆಗೂ ಕಾಯ್ದಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದು, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆತ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಒಮಾನ್‌ ಕರಾವಳಿಯಲ್ಲಿ ಮುಳುಗುತ್ತಿದ್ದ ನೌಕೆಯಲ್ಲಿದ್ದ 14 ಭಾರತೀಯರನ್ನು ರಕ್ಷಿಸಿದ ಅಮೆರಿಕ ನೌಕಾಪಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement