ನವದೆಹಲಿ:ಮೊಬೈಲ್ ತಯಾರಕರಿಗೆ ‘ಸಂಚಾರ ಸಾಥಿ’ (Sanchar Saathi) ಆ್ಯಪ್ ಅನ್ನು ಕಡ್ಡಾಯವಾಗಿ ಮೊದಲೇ ಅಳವಡಿಸುವ ಆದೇಶವನ್ನು ಕೇಂದ್ರ ಸರ್ಕಾರ ಬುಧವಾರ ಹಿಂಪಡೆದಿದೆ.
ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ, ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರಾಂತ್ಯಗಳ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಸಾರ್ವಜನಿಕರ ಸಲಹೆ ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ಪ್ಲಾಟ್ಫಾರ್ಮ್ನ ನಿಯಮಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಸಂಚಾರ ಸಾಥಿ ಆ್ಯಪ್ ಮೂಲಕ ಗೂಢಚಾರಿಕೆ (Snooping) ಮಾಡಲು ಸಾಧ್ಯವಿಲ್ಲ, ಮತ್ತು ಅದು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಒತ್ತಿ ಹೇಳಿದರು. ಬಳಕೆದಾರರ ನೋಂದಣಿ ಇಲ್ಲದೆ ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ. ಯಾವುದೇ ನಾಗರಿಕರು ಅದನ್ನು ಬಳಸಲು ಅಥವಾ ಅದನ್ನು ಅಳಿಸಲು ಪೂರ್ಣ ಹಕ್ಕು ಹೊಂದಿರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ನಾಗರಿಕರಿಗೆ ಅಂತಿಮ ಅಧಿಕಾರ
ಈ ಉಪಕ್ರಮದ ಏಕೈಕ ಉದ್ದೇಶ ಭಾರತದ ಪ್ರತಿಯೊಬ್ಬ ಮೊಬೈಲ್ ಬಳಕೆದಾರರನ್ನು ರಕ್ಷಿಸುವುದಾಗಿದೆ. ಪ್ರಜಾಪ್ರಭುತ್ವದಲ್ಲಿ ಅಂತಿಮ ಅಧಿಕಾರ ನಾಗರಿಕರಲ್ಲಿರುತ್ತದೆ ಮತ್ತು ಸಾರ್ವಜನಿಕರ ಸಲಹೆ, ಪ್ರತಿಕ್ರಿಯೆಗಳ ಆಧಾರದ ಮೇಲೆ ನಿಯಮಗಳನ್ನು ಬದಲಾಯಿಸಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ತಿಳಿಸಿದರು. “ನಾಗರಿಕರ ಸಲಹೆ ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ನಿಯಮಗಳನ್ನು ತಿದ್ದುಪಡಿ ಮಾಡಲು ನಾವು ಯಾವಾಗಲೂ ಸಿದ್ಧರಿದ್ದೇವೆ,” ಎಂದು ಅವರು ಹೇಳಿದರು.
ಗೌಪ್ಯತೆಯ ಬಗ್ಗೆ ಚರ್ಚೆ
ಕಳೆದುಹೋದ ಫೋನ್ಗಳನ್ನು ಟ್ರ್ಯಾಕ್ ಮಾಡಲು ಮತ್ತು ಟೆಲಿಕಾಂ ವಂಚನೆಯನ್ನು ತಡೆಯಲು ನಾಗರಿಕರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ನಿರ್ಣಾಯಕ ಸೈಬರ್ ಭದ್ರತಾ ಸಾಧನವಾಗಿ ಸರ್ಕಾರವು ಈ ಆ್ಯಪ್ ಅನ್ನು ಬಿಂಬಿಸಿತ್ತು. ಆದರೆ ಕಡ್ಡಾಯ ಅಳವಡಿಕೆಯ ನಿರ್ದೇಶನವು ಗೌಪ್ಯತೆ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕಾರಣವಾಗಿತ್ತು. ವಿಪಕ್ಷಗಳು ಸಂಭವನೀಯ ಕಣ್ಗಾವಲು, ಡೇಟಾ ಗೌಪ್ಯತೆ ಉಲ್ಲಂಘನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.
ಆ್ಯಪ್ನ ಉದ್ದೇಶ
ಪ್ರಕಟಣೆಯ ಪ್ರಕಾರ, ಇಲ್ಲಿಯವರೆಗೆ 1.4 ಕೋಟಿ ಬಳಕೆದಾರರು ಸಂಚಾರ ಸಾಥಿ ಆ್ಯಪ್ ಅನ್ನು ಡೌನ್ಲೋಡ್ ಮಾಡಿದ್ದಾರೆ ಮತ್ತು ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. “ಕೇವಲ ಕಳೆದ ಒಂದು ದಿನದಲ್ಲಿ, 6 ಲಕ್ಷ ನಾಗರಿಕರು ಆ್ಯಪ್ ಅನ್ನು ಡೌನ್ಲೋಡ್ ಮಾಡಲು ನೋಂದಾಯಿಸಿಕೊಂಡಿದ್ದಾರೆ, ಇದು ಅದರ ಬಳಕೆಯಲ್ಲಿ 10 ಪಟ್ಟು ಹೆಚ್ಚಳವಾಗಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಚಾರ ಸಾಥಿ ಎಂಬುದು ಸೈಬರ್ ವಂಚನೆ ಪತ್ತೆ ಮಾಡಲು ಮತ್ತು ದೂರಸಂಪರ್ಕ ಭದ್ರತೆ ಬಲಪಡಿಸಲು ವಿನ್ಯಾಸಗೊಳಿಸಲಾದ ನಾಗರಿಕ ಕೇಂದ್ರಿತ ಉಪಕ್ರಮವಾಗಿದೆ. ಅದರ ಪೋರ್ಟಲ್ ಮತ್ತು ಅಪ್ಲಿಕೇಶನ್ ಮೂಲಕ ಬಳಕೆದಾರರು ಉಪಯೋಗ ಪಡೆದುಕೊಳ್ಳಬಹುದು. ಈ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿದ ಬಳಿಕ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಅದನ್ನು ಬ್ಲಾಕ್ ಮಾಡಬಹುದು.


ನಿಮ್ಮ ಕಾಮೆಂಟ್ ಬರೆಯಿರಿ