ವೀಡಿಯೊ…| ವಿದ್ಯಾರ್ಥಿಯನ್ನು ಬಸ್ಸಿನಿಂದ ಅಪಹರಿಸಿ, ನಕಲಿ ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸರು…! ಸ್ಫೋಟಕ ಸತ್ಯ ಬಯಲು

ಭೋಪಾಲ್ : ಮಧ್ಯಪ್ರದೇಶದ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿರುವ ಸಂಚಲನಾತ್ಮಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೇಶದ ಅತ್ಯುತ್ತಮ ಪೊಲೀಸ್ ಠಾಣೆಗಳ ಪೈಕಿ ಇತ್ತೀಚೆಗೆ ಒಂಬತ್ತನೇ ಸ್ಥಾನ ಪಡೆದಿದ್ದ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ಮಾಲ್ಹರ್‌ಗಢ ಪೊಲೀಸ್ ಠಾಣೆಯ ಅಧಿಕಾರಿಗಳೇ, ನಿರಪರಾಧಿ ವಿದ್ಯಾರ್ಥಿಯೊಬ್ಬನನ್ನು ಬಸ್‌ನಿಂದ ಅಪಹರಿಸಿ, ಸುಳ್ಳು ಡ್ರಗ್ಸ್ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸಿರುವುದು ಬಯಲಾಗಿದೆ.
ಪೊಲೀಸರು ದೊಡ್ಡ ಸಾಧನೆ ಎಂದು ಹೇಳಿಕೊಂಡಿದ್ದ “ಪ್ರಮುಖ ಮಾದಕವಸ್ತು ಪ್ರಕರಣ” ಈಗ ಅಧಿಕಾರದ ದುರುಪಯೋಗ ಎಂದು ಬಹಿರಂಗಗೊಂಡಿದ್ದು, ಮಂದಸೌರ್‌ನ ಪೊಲೀಸ್ ವರಿಷ್ಠಾಧಿಕಾರಿ (SP) ಅವರು ಹೈಕೋರ್ಟ್ ಮುಂದೆ ಹಾಜರಾಗಿ, ಈ ಪ್ರಕರಣವನ್ನು ಕಪೋಲಕಲ್ಪಿತ ಎಂದು ಒಪ್ಪಿಕೊಳ್ಳುವಂತಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ವರದಿ ಪ್ರಕಾರ, ಮಾಲ್ಹರ್‌ಗಢದ 18 ವರ್ಷದ, 12ನೇ ತರಗತಿಯ ಸೋಹನ್ ಎಂಬ ವಿದ್ಯಾರ್ಥಿಯನ್ನು ಆಗಸ್ಟ್ 29 ರಂದು ಚಲಿಸುತ್ತಿದ್ದ ಬಸ್‌ನಿಂದ ಬಲವಂತವಾಗಿ ಕರೆದುಕೊಂಡು ಹೋಗಲಾಗಿತ್ತು. ಕೆಲವೇ ಗಂಟೆಗಳ ನಂತರ, ಪೊಲೀಸರು ಆತನ ಬಳಿ 2.7 ಕೆಜಿ ಅಫೀಮು ಪತ್ತೆಯಾಗಿದೆ ಎಂದು ಪ್ರಕಟಿಸಿ, ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ಸಿಸಿಟಿವಿ, ಸಾಕ್ಷಿಗಳು ಹೇಳಿದ್ದೇ ಬೇರೆ ಕಥೆ
ಆದರೆ, ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ವೀಡಿಯೊಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಪೊಲೀಸರು ಹೇಳಿದ ಕಥೆಗಿಂತ ಭಿನ್ನವಾಗಿದ್ದವು. ಈ ಸಾಕ್ಷ್ಯಗಳು, ಯಾವುದೇ ಡ್ರಗ್ಸ್, ಬೆನ್ನಟ್ಟುವಿಕೆ, ಅಥವಾ ವಶಪಡಿಸಿಕೊಳ್ಳುವಿಕೆ ನಡೆದಿಲ್ಲ ಎಂದು ತೋರಿಸಿದವು. ಬದಲಿಗೆ, ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸರ ಗುಂಪು ಬಸ್ಸನ್ನು ನಿಲ್ಲಿಸಿ, ವಿದ್ಯಾರ್ಥಿಯನ್ನು ಕೆಳಗೆ ಎಳೆದುಕೊಂಡು ಹೋಗಿರುವುದು ಕಂಡುಬಂದಿದೆ.
ವಿದ್ಯಾರ್ಥಿಯ ಬಂಧನ ನಕಲಿಯಾಗಿದ್ದು, ಆತನನ್ನು ಅಪಹರಿಸಿ ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ ಎಂದು ಆತನ ಕುಟುಂಬವು ಡಿಸೆಂಬರ್ 5 ರಂದು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠದ ಮೆಟ್ಟಿಲೇರಿತು.

ಬಣ್ಣ ಬಯಲು 
ಮಂಗಳವಾರ ನಡೆದ ವಿಚಾರಣೆಯ ಸಮಯದಲ್ಲಿ, ಹೈಕೋರ್ಟ್ ಮಂದಸೌರ್ ಎಸ್‌ಪಿ ವಿನೋದಕುಮಾರ ಮೀನಾ ಅವರು ಖುದ್ದು ಹಾಜರಾಗಬೇಕು ಎಂದು ಆದೇಶಿಸಿತ್ತು.
ಈ ವೇಳೆ ಮೀನಾ ಅವರು, ಸೋಹನ್‌ನನ್ನು ಮಾಲ್ಹರ್‌ಗಢ ಪೊಲೀಸ್ ಅಧಿಕಾರಿಗಳು ಬಸ್‌ನಿಂದ ಕರೆದುಕೊಂಡು ಹೋಗಿರುವುದನ್ನು ಒಪ್ಪಿಕೊಂಡರು. ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ತೋರಿಸಲಾದ ಬಂಧನದ ಸಮಯ ಮತ್ತು ಸ್ಥಳವು ವೀಡಿಯೊದಲ್ಲಿ ಸೆರೆಯಾದ ನಿಜವಾದ ಸಮಯ ಮತ್ತು ಸ್ಥಳಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಅವರು ಹೇಳಿದರು.
ಈ ಸಂಪೂರ್ಣ ಕಾರ್ಯಾಚರಣೆಯನ್ನು ಮಾಲ್ಹರ್‌ಗಢದ ಹೆಡ್ ಕಾನ್‌ಸ್ಟೆಬಲ್ ಒಬ್ಬರ ನೇತೃತ್ವದಲ್ಲಿ ನಡೆದಿತ್ತು. ವಿದ್ಯಾರ್ಥಿಯನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡ ನಂತರವೇ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಕಾನೂನು ವಿಧಾನಗಳನ್ನು ಅನುಸರಿಸಿ ತನಿಖೆ ನಡೆಸಲಾಗಿಲ್ಲ ಎಂದು ಎಸ್‌ಪಿ ಒಪ್ಪಿಕೊಂಡರು. ಜಿಲ್ಲಾಡಳಿತವು ಹಿಂದೆ ನೀಡಿರುವ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, ಬಸ್ ಹತ್ತಿದ್ದ ಅಧಿಕಾರಿಗಳು ಮಾಲ್ಹರ್‌ಗಢದ ಪೊಲೀಸ್ ಸಿಬ್ಬಂದಿ ಎಂದು ಮೀನಾ ನ್ಯಾಯಾಲಯದಲ್ಲಿ ದೃಢಪಡಿಸಿದರು.
ಎಸ್‌ಪಿ ಮೀನಾ ಅವರು, ವಿದ್ಯಾರ್ಥಿಯನ್ನು ಎಳೆದೊಯ್ದವರು ಸೇರಿದಂತೆ ಆರು ಮಂದಿ ಮಾಲ್ಹರ್‌ಗಢ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಮತ್ತು ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

ತೀವ್ರ ಕ್ರಮದ ನಿರೀಕ್ಷೆ
ಹೈಕೋರ್ಟ್ ಇದೀಗ ತನ್ನ ಆದೇಶವನ್ನು ಕಾಯ್ದಿರಿಸಿದೆ. ಕಾನೂನು ತಜ್ಞರು ಕಠಿಣ ಕ್ರಮದ ನಿರೀಕ್ಷೆಯಲ್ಲಿದ್ದಾರೆ.
“ನ್ಯಾಯಾಲಯವು ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿದೆ. ಸೋಹನ್‌ನನ್ನು ಬಸ್‌ನಿಂದ ಅಕ್ರಮವಾಗಿ ಅಪಹರಿಸಲಾಗಿದೆ ಮತ್ತು ಸಂಜೆ 5 ಗಂಟೆಗೆ 2.7 ಕೆಜಿ ಅಫೀಮ್‌ನೊಂದಿಗೆ ಬಂಧಿಸಿರುವುದಾಗಿ ಸುಳ್ಳು ಹೇಳಲಾಗಿದೆ ಎಂಬುದನ್ನು ಒಪ್ಪಿಕೊಂಡಿದೆ. ಆತ 12ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದ ಪ್ರತಿಭಾವಂತ ವಿದ್ಯಾರ್ಥಿ. ಮಾಲ್ಹರ್‌ಗಢ ಪೊಲೀಸರು ಕಾನೂನುಬಾಹಿರವಾಗಿ ಮತ್ತು ಕಾನೂನನ್ನು ಮೀರಿ ವರ್ತಿಸಿದ್ದಾರೆ ಎಂದು ಎಸ್‌ಪಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಹಿರಿಯ ವಕೀಲ ಹಿಮಾಂಶು ಠಾಕೂರ್ ತಿಳಿಸಿದ್ದಾರೆ.
ಈ ಮಾಲ್ಹರ್‌ಗಢ ಪೊಲೀಸ್ ಠಾಣೆಯು ಕಳೆದ ತಿಂಗಳು ಭಾರತದ ಅತ್ಯುತ್ತಮ ಪೊಲೀಸ್ ಠಾಣೆಗಳ ಪೈಕಿ ಒಂಬತ್ತನೇ ಸ್ಥಾನವನ್ನು ಗಳಿಸಿ ರಾಷ್ಟ್ರೀಯ ಮನ್ನಣೆಯನ್ನು ಪಡೆದಿತ್ತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement