ಅಪರೂಪದಲ್ಲಿ ಅಪರೂಪದ ಸಂಪೂರ್ಣ ಬಿಳಿಯ ಮಂಗ ಪತ್ತೆ…! ಇದು ವಿಶೇಷ ಯಾಕೆ ಗೊತ್ತೆ..?

ಅಸ್ಸಾಂ ನಂತರ ಈಗ ಹಿಮಾಚಲ ಪ್ರದೇಶದಲ್ಲಿ ಅಪರೂಪದ ಬಿಳಿ ಮಂಗದ ಪ್ರಭೇದ ಪತ್ತೆಯಾಗಿದೆ. ಹಿಮಾಚಲದ ಚಂಬಾ ಜಿಲ್ಲೆಯ ತುಂದಾಹ್‌ನ ಶಾಂತ, ಮಂಜು ಮುಸುಕಿದ ಕಾಡುಗಳಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ರಕ್ಷಕರೊಬ್ಬರು ಇದ್ದಕ್ಕಿದ್ದಂತೆ ಆಶ್ಚರ್ಯಚಕಿತರಾದರು. ಕಾಡುಗಳಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಯೊಬ್ಬರು ಬೆಚ್ಚಿಬಿದ್ದರು. ಮಂಗಗಳ ಹಿಂಡಿನಲ್ಲಿ ಶತಮಾನಗಳಿಗೆ ಒಮ್ಮೆ ಪ್ರಕೃತಿ ಅಪರೂಪವಾಗಿ ತೋರಿಸುವ ಬಿಳಿ ಮಂಗ ಅವರಿಗೆ ಕಂಡಿತ್ತು. ಪ್ರಕೃತಿಯು ಬಹುಶಃ ನೂರಾರು ವರ್ಷಗಳಲ್ಲಿ ಒಮ್ಮೆ ತೋರಿಸುವಂಥದ್ದಾಗಿತ್ತು… ಒಂದು ಸಂಪೂರ್ಣ ಬಿಳಿ ರೇಸಸ್ ಮಕಾಕ್ (Rhesus Macaque) ಅಲ್ಲಿ ಕಂಡುಬಂದಿದೆ. ಈ ಅಪರೂಪದ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಂತೆಯೇ, ಹಿಮಾಚಲ ಪ್ರದೇಶದ ವನ್ಯಜೀವಿ ಇತಿಹಾಸದಲ್ಲಿ ಹೊಸ ಪುಟ ಸೇರ್ಪಡೆಯಾಗಿದೆ.

ಚಂಬಾದ ಭರ್ಮೌರ್ ಅರಣ್ಯ ವಿಭಾಗದ ತುಂದಾಹ್ ಕಾಡಿನಲ್ಲಿ ರಾಜ್ಯದ ಮೊದಲ ಬಿಳಿ ಕೋತಿ (ಆಲ್ಬಿನೋ ರೇಸಸ್ ಮಕಾಕ್) ಕಂಡುಬಂದಿದೆ. ಇದು ಭಾರತದಲ್ಲಿ ಈ ರೀತಿಯ ಎರಡನೇ ಆವಿಷ್ಕಾರವಾಗಿದೆ. ಈ ಹಿಂದೆ 2022 ರಲ್ಲಿ ಅಸ್ಸಾಂನಲ್ಲಿ ಇದೇ ರೀತಿಯ ಬಿಳಿ ರೇಸಸ್ ಮಕಾಕ್ ದಾಖಲಾಗಿತ್ತು. ಭಾನುವಾರ ತುಂದಾಹ್ ಪ್ರದೇಶದಲ್ಲಿ ನಿಯಮಿತ ಗಸ್ತು ತಿರುಗುತ್ತಿದ್ದಾಗ ಅರಣ್ಯ ರಕ್ಷಕ ಕುಶಲಕುಮಾರ ಅವರಿಗೆ ಈ ಕೋತಿ ಕಂಡುಬಂದಿದೆ. ಅವರು ಹೆಣ್ಣು ಕೋತಿಯ ಬೆನ್ನ ಮೇಲೆ ಕುಳಿತಿದ್ದ ಸಂಪೂರ್ಣ ಬಿಳಿ ಕೋತಿಯನ್ನು ನೋಡಿದ್ದಾರೆ. ಅವರು ತಕ್ಷಣವೇ ಕ್ಯಾಮೆರಾದಲ್ಲಿ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದು ಅರಣ್ಯ ವಿಭಾಗದ ಅಧಿಕಾರಿಗೆ ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಸಿಜೆಪಿಯ ಸೌರವ ದಾಸ್, ಅಶುತೋಷ ರಾಂಕಾ ಬಿಡುಗಡೆಗೆ ಆದೇಶ

ಸ್ಥಳೀಯ ಅರಣ್ಯಾಧಿಕಾರಿಗಳ ಪ್ರಕಾರ, ಇದು ಯಾವುದೇ ಪ್ರತ್ಯೇಕ ಪ್ರಭೇದವಲ್ಲ, ಬದಲಿಗೆ ಸಾಮಾನ್ಯ ಕಂದು ಬಣ್ಣದ ರೇಸಸ್ ಮಕಾಕ್‌ನ ಆಲ್ಬಿನೋ ರೂಪ (albino form) ಆಗಿದೆ. ಇದರಲ್ಲಿ ಜನ್ಮಜಾತ ಅನುವಂಶಿಕ ಕಾರಣಗಳಿಂದಾಗಿ ಚರ್ಮ ಮತ್ತು ಕೂದಲಿನಲ್ಲಿ ಮೆಲನಿನ್ ಉತ್ಪಾದನೆಯು ತೀರಾ ಕಡಿಮೆಯಾಗುತ್ತದೆ ಅಥವಾ ಇರುವುದಿಲ್ಲ. ಇದೇ ಕಾರಣಕ್ಕೆ ಈ ಕೋತಿಯು ತಲೆಯಿಂದ ಬಾಲದವರೆಗೆ ಪ್ರಕಾಶಮಾನವಾದ ಬಿಳಿ ಬಣ್ಣದಲ್ಲಿ ಕಾಣಿಸುತ್ತದೆ. ಇದರ ನೋಟ ಮತ್ತು ನಡವಳಿಕೆಯು ಸಾಮಾನ್ಯ ಮಂಗಗಳಂತೆಯೇ ಇರುತ್ತದೆ. ಆಲ್ಬಿನೋಗಳು ಪ್ರಕೃತಿಯ ಅತ್ಯಂತ ಅಪರೂಪದ ಸೃಷ್ಟಿ. ಇಂತಹ ಜೀವಿಗಳು ಸೂರ್ಯನ ಬೆಳಕು ಮತ್ತು ಯುವಿ ಕಿರಣಗಳಿಗೆ ಹೆಚ್ಚು ಸೂಕ್ಷ್ಮವಾಗಿರುತ್ತವೆ ಎಂದು ತಜ್ಞರು ಹೇಳುತ್ತಾರೆ.
ಈ ರೀತಿಯ ಮಂಗಗಳು ದೂರದಿಂದ ಗೋಚರಿಸುವುದರಿಂದ ಕಾಡುಗಳಲ್ಲಿ ಬದುಕುವುದು ಅವುಗಳಿಗೆ ಕಷ್ಟವಾಗುತ್ತದೆ. ಕೆಲವೊಮ್ಮೆ ಮಂಗಗಳ ಹಿಂಡು ಕೂಡ ಅವುಗಳನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ಕಾಡಿನಲ್ಲಿ ಇದು ಕಂಡುಬಂದಿರುವುದು ವೈಜ್ಞಾನಿಕವಾಗಿ ಮಾತ್ರವಲ್ಲದೆ, ಜೀವವೈವಿಧ್ಯದ ಬಗ್ಗೆ ಸೂಕ್ಷ್ಮತೆಯನ್ನು ಹೆಚ್ಚಿಸುವ ಹೊಸ ದಿಕ್ಕನ್ನೂ ನೀಡಬಹುದು ಎಂದು ಭಾವಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement