ಸಿಡ್ನಿ (ಆಸ್ಟ್ರೇಲಿಯಾ): ಬಾಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಕನಿಷ್ಠ 12 ಜನರ ಸಾವಿಗೆ ಕಾರಣನಾದ ಬಂದೂಕುಧಾರಿಯೊಬ್ಬನನ್ನು ದಿಟ್ಟತನದಿಂದ ತಡೆದು, ಆತನಿಂದ ಆಯುಧವನ್ನು ಕಸಿದುಕೊಂಡ ಸಾಹಸಿಗನ ಬಗ್ಗೆ ಇಡೀ ಆಸ್ಟ್ರೇಲಿಯಾ ಮಾತನಾಡುವಂತಾಗಿದೆ. ಸಿದರ್ಲ್ಯಾಂಡ್‌ನಲ್ಲಿ ಹಣ್ಣಿನ ಅಂಗಡಿ ಮಾಲೀಕ ಹಾಗೂ ಇಬ್ಬರು ಮಕ್ಕಳ ತಂದೆಯಾದ 43 ವರ್ಷದ ಅಹ್ಮದ್ ಅಲ್ ಅಹ್ಮದ್ ಅವರು ಪ್ರಾಣವನ್ನೇ ಪಣಕ್ಕಿಟ್ಟು ಈ ಭಯೋತ್ಪಾದಕನೊಂದಿಗೆ ಸೆಣಸಿದವರು.
ದಾಳಿಕೋರನನ್ನು ಎದುರಿಸುವಾಗ ಅಹ್ಮದ್ ಅವರಿಗೆ ಎರಡು ಗುಂಡುಗಳು ತಾಗಿದರೂ, ಅವರು ಕೇವಲ ಐದು ಸೆಕೆಂಡ್‌ಗಳ ಹೋರಾಟದಲ್ಲಿ ಬಂದೂಕನ್ನು (Shotgun) ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಹ್ಮದ್ ಅವರು ಕಾರಿನ ಹಿಂದೆ ಅಡಗಿ, ಸರಿಯಾದ ಸಮಯ ನೋಡಿಕೊಂಡು ದಾಳಿಕೋರನ ಮೇಲೆ ನುಗ್ಗಿ, ಹಿಂದಿನಿಂದ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು (Headlock) ಆಯುಧವನ್ನು ಕಿತ್ತುಕೊಳ್ಳುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಶಸ್ತ್ರವನ್ನು ತಮ್ಮ ವಶಕ್ಕೆ ಪಡೆದ ನಂತರ, ಆಯುಧವನ್ನು ಶೂಟರ್ ನಿಗೆ ತೋರಿಸಿ ಆತನನ್ನು ಹೆದರಿಸಿ, ನಂತರ ಅದನ್ನು ಮರದ ಬಳಿ ಇಟ್ಟಿದ್ದಾರೆ.
ಯಾವುದೇ ಬಂದೂಕು ತರಬೇತಿ ಅಥವಾ ಅನುಭವ ಇಲ್ಲದಿದ್ದರೂ, ಅಲ್ಲಿ ಹಾದುಹೋಗುತ್ತಿದ್ದ ಅಹ್ಮದ್ ಅವರು ಸಂಪೂರ್ಣ ಸ್ವಯಂಪ್ರೇರಿತವಾಗಿ ಈ ಸಾಹಸ ಕೃತ್ಯ ಎಸಗಿದ್ದಾರೆ. ಕಾಲುಗಳಿಗೆ ಗುಂಡು ತಗುಲಿದ್ದರೂ ಅವರು ಪ್ರಜ್ಞಾವಸ್ಥೆಯಲ್ಲಿ ಇದ್ದು, ಸ್ಥಳದಲ್ಲೇ ಇತರರು ಪ್ರಥಮ ಚಿಕಿತ್ಸೆ ನೀಡುವ ದೃಶ್ಯವೂ ವೀಡಿಯೊದಲ್ಲಿ ಸೆರೆಯಾಗಿದೆ. ಭಾನುವಾರ ಸಂಜೆಯೇ ಅವರಿಗೆ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು.
“ಅವರು ಸಂಪೂರ್ಣವಾಗಿ ಹೀರೋ,” ಎಂದು ಅಹ್ಮದ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಆಸ್ಪತ್ರೆಯಿಂದ ಮಾಹಿತಿ ನಿರೀಕ್ಷಿಸುತ್ತಿದ್ದ ಅವರ ಸೋದರಸಂಬಂಧಿ ಮುಸ್ತಫಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಾಳಿಕೋರನ ಗುರುತು ಪತ್ತೆ
ಈ ಭಯೋತ್ಪಾದಕ ಘಟನೆಯು ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಯಹೂದಿ ಹನುಕ್ಕಾ ಆಚರಣೆಯ ಸಂದರ್ಭದಲ್ಲಿ ನಡೆದಿದೆ. 24 ವರ್ಷದ ನವೀದ್ ಅಕ್ರಮ್ ಎಂಬಾತ ದಾಳಿಕೋರರಲ್ಲಿ ಒಬ್ಬ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಪೊಲೀಸರು ಇಬ್ಬರು ದಾಳಿಕೋರರಲ್ಲಿ ಒಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಎರಡನೆಯವನಿಗೆ ಗಂಭೀರ ಗಾಯಗಳಾಗಿವೆ ಮತ್ತು ಆತನನ್ನು ಬಂಧಿಸಲಾಗಿದೆ.
ಸಂಶಯಾಸ್ಪದ ವಾಹನ ಪರಿಶೀಲನೆ
ಎನ್‌ಎಸ್‌ಡಬ್ಲ್ಯೂ ಪೊಲೀಸ್ ಆಯುಕ್ತ ಮಾಲ್ ಲ್ಯಾನ್ಸನ್ ಅವರು, ಕ್ಯಾಂಪ್‌ಬೆಲ್ ಪರೇಡ್‌ನಲ್ಲಿರುವ ಒಂದು ವಾಹನದಲ್ಲಿ ಸುಧಾರಿತ ಸ್ಫೋಟಕ ಸಾಧನಗಳು (IED) ಇರಬಹುದು ಎಂಬ ಸಂಶಯದ ಮೇಲೆ ಬಾಂಬ್ ನಿಷ್ಕ್ರಿಯ ದಳಗಳು ಪರಿಶೀಲನೆ ನಡೆಸುತ್ತಿವೆ ಎಂದು ಖಚಿತಪಡಿಸಿದ್ದಾರೆ. ಮೂರನೇ ಅಪರಾಧಿ ಈ ದಾಳಿಯಲ್ಲಿ ಭಾಗಿಯಾಗಿದ್ದನೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದು, ಇದಕ್ಕಾಗಿ ವಿಶೇಷ ತುರ್ತು ಅಧಿಕಾರಗಳನ್ನು ಬಳಸಲು ಮುಂದಾಗಿದ್ದಾರೆ.
ವೀಡಿಯೊದಲ್ಲಿ, ಎರಡನೇ ಬಂದೂಕುಧಾರಿಯು ಸೇತುವೆಯ ಮೇಲಿನಿಂದ ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸುವ ದೃಶ್ಯವೂ ಸೆರೆಯಾಗಿದೆ. ಪೊಲೀಸರು ಆತನನ್ನು ಸ್ಥಳದಲ್ಲೇ ಹತ್ಯೆ ಮಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ