ಕೋಲ್ಕತ್ತಾ: ವಿಶ್ವ ಫುಟ್ಬಾಲ್ನ ದಂತಕಥೆ ಲಿಯೋನೆಲ್ ಮೆಸ್ಸಿ ಅವರ ‘ಗೋಟ್ ಟೂರ್’ (GOAT Tour) ಭಾಗವಾಗಿ ಕೋಲ್ಕತ್ತಾದ ಯುವ ಭಾರತಿ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವು, ಮೆಸ್ಸಿಯನ್ನು ನೋಡಲು ಆಗಮಿಸಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಶೆ ಮತ್ತು ಗೊಂದಲಕ್ಕೆ ಕಾರಣವಾಯಿತು.
ಶನಿವಾರ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ವ್ಯಾಪಕ ಅವ್ಯವಸ್ಥೆಯಿಂದಾಗಿ ವಿಶ್ವಕಪ್ ವಿಜೇತ ನಾಯಕ ಲಿಯೋನೆಲ್ ಮೆಸ್ಸಿ ಬೇಗನೆ ಮೈದಾನದಿಂದ ನಿರ್ಗಮಿಸಿದ ನಂತರ ಉಂಟಾದ ಘಟನಾವಳಿಗಳಿಗೆ ನಂತರ ಅವರ ಕೋಲ್ಕತ್ತಾ ಕಾರ್ಯಕ್ರಮದ ಆಯೋಜಕ ಸತಾದ್ರು ದತ್ತಾ ಅವರನ್ನು ಬಂಧಿಸಲಾಯಿತು.
ಅಧಿಕ ಹಣ ನೀಡಿ ಟಿಕೆಟ್ ಖರೀದಿಸಿದ್ದರೂ ಮೆಸ್ಸಿಯನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ಪರಿಣಾಮವಾಗಿ ಆಯೋಜಕರು ಮೆಸ್ಸಿಯನ್ನು ಸ್ಥಳದಿಂದ ತಕ್ಷಣಕ್ಕೆ ಕರೆದೊಯ್ಯುವ ಪರಿಸ್ಥಿತಿ ಎದುರಾಯಿತು.
ಸಾವಿರಾರು ರೂ. ಪಾವತಿಸಿದರೂ ನಿರಾಶೆ
ಕಾರ್ಯಕ್ರಮದ ಟಿಕೆಟ್ಗಳು ₹5,000 ದಿಂದ ₹25,000 ರವರೆಗೆ ದುಬಾರಿ ಬೆಲೆಯನ್ನು ಹೊಂದಿದ್ದವು. ಆದರೆ, ಅಭಿಮಾನಿಗಳು ನಿಂತಿದ್ದ ಗ್ಯಾಲರಿಗಳ ಎದುರೇ ಭದ್ರತಾ ಸಿಬ್ಬಂದಿ ಮತ್ತು ಇತರ ಗಣ್ಯರು ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದರಿಂದ, ಕ್ರೀಡಾಂಗಣದ ಸ್ಟ್ಯಾಂಡ್ಗಳಿಂದ ಮೆಸ್ಸಿಯನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗಲಿಲ್ಲ.
ಇದರಿಂದ ಕೆರಳಿದ ಅಭಿಮಾನಿಗಳು ಕುರ್ಚಿಗಳು ಮತ್ತು ಬಾಟಲಿಗಳನ್ನು ಎಸೆದ ಕಾರಣ, ಪರಿಸ್ಥಿತಿ ನಿಯಂತ್ರಣ ಮೀರಿ ಹೋಯಿತು. ಈ ಗದ್ದಲದ ಕಾರಣದಿಂದಾಗಿ ಮೆಸ್ಸಿ ಕೇವಲ 20 ನಿಮಿಷಗಳ ಕಾಲ ಮಾತ್ರ ಕ್ರೀಡಾಂಗಣದಲ್ಲಿ ಉಳಿದು, ಬೆಳಗ್ಗೆ 11:15ಕ್ಕೆ ಸ್ಥಳದಿಂದ ನಿರ್ಗಮಿಸಿದರು. 2022ರ ವಿಶ್ವಕಪ್ ವಿಜೇತ ಮೆಸ್ಸಿ ಅವರು ಕ್ರೀಡಾಂಗಣದ ಸುತ್ತ ಸಂಪೂರ್ಣ ಸುತ್ತು ಹಾಕಬೇಕಿತ್ತು, ಆದರೆ ಗೊಂದಲದಿಂದಾಗಿ ಅದು ಸಾಧ್ಯವಾಗಲಿಲ್ಲ.
ಗಂಗೂಲಿಗೂ ಭಾಗಿಯಾಗಲು ಆಗಲಿಲ್ಲ
ಮೆಸ್ಸಿ ಕ್ರೀಡಾಂಗಣದಿಂದ ಹೊರಬರುತ್ತಿದ್ದಂತೆಯೇ ಪರಿಸ್ಥಿತಿ ಸಂಪೂರ್ಣ ಕೈಮೀರಿತು. ಈ ವಿಶೇಷ ಕಾರ್ಯಕ್ರಮಕ್ಕಾಗಿ ಕೋಲ್ಕತ್ತಾಗೆ ಆಗಮಿಸಿದ್ದ ಬಾಲಿವುಡ್ ನಟ ಶಾರುಖ್ ಖಾನ್, ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಸಹ ಗೊಂದಲದ ನಡುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದೆ, ಕಾರ್ಯಕ್ರಮ ಮೊಟಕುಗೊಂಡಿತು.
ಪರಿಸ್ಥಿತಿ ಹದಗೆಟ್ಟ ಕಾರಣ, ಆಯೋಜಕ ಶತಾಬ್ದು ದತ್ತಾ ಅವರು ಭದ್ರತಾ ಸಿಬ್ಬಂದಿಯೊಂದಿಗೆ ಮೆಸ್ಸಿಯನ್ನು ಸಾಲ್ಟ್ ಲೇಕ್ ಕ್ರೀಡಾಂಗಣದಿಂದ ಹೊರ ಕರೆದೊಯ್ಯಬೇಕಾಯಿತು. ಕೆಲವು ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಡೇರೆಗಳನ್ನು ಧ್ವಂಸಗೊಳಿಸಿದರು. ಅಭಿಮಾನಿಗಳು ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಹಾನಿ ಮಾಡಲು ಪ್ರಯತ್ನಿಸಿದಾಗ, ಕೋಲ್ಕತ್ತಾ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ (RAF) ಲಘು ಬಲ ಪ್ರಯೋಗಿಸಿ ಆಕ್ರೋಶಿತ ಜನಸಂದಣಿಯನ್ನು ಚದುರಿಸಿದರು.
ಆಯೋಜಕನ ಬಂಧನ
ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದ ಬಳಿಕ, ಕಾರ್ಯಕ್ರಮದ ಮುಖ್ಯ ಆಯೋಜಕ ಶತಾಬ್ದು ದತ್ತಾ ಅವರನ್ನು ಬಂಧಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADG) ಜಾವೇದ್ ಶಮೀಮ್ ದೃಢಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗೊಂದಲಮಯ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶ ನೀಡಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಅಶಿಮ್ ಕುಮಾರ ರೇ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಪ್ರಕಟಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ