ಬಾಂಡಿ ಬೀಚ್‌ನಲ್ಲಿ ಭೀಕರ ಗುಂಡಿನ ದಾಳಿ; ಸಾವಿನ ಸಂಖ್ಯೆ 15ಕ್ಕೆ ಏರಿಕೆ : ಪಾಕಿಸ್ತಾನಿ ತಂದೆ-ಮಗನಿಂದ ಕೃತ್ಯ

ಸಿಡ್ನಿ (ಆಸ್ಟ್ರೇಲಿಯಾ) : ಆಸ್ಟ್ರೇಲಿಯಾದ ಸಿಡ್ನಿಯ ಪ್ರಖ್ಯಾತ ಬಾಂಡಿ ಬೀಚ್‌ನಲ್ಲಿ ಭಾನುವಾರ (ಡಿಸೆಂಬರ್‌ 14) ನಡೆದ ಯಹೂದಿ ಹಬ್ಬದ ಆಚರಣೆಗೆ ಸೇರಿದ್ದ ಜನರ ಮೇಲೆ ನಡೆದ ಭೀಕರ ಗುಂಡಿನ ದಾಳಿಯ ಹಿಂದೆ ತಂದೆ ಮತ್ತು ಮಗ ಭಾಗಿಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕಟ್ಟುನಿಟ್ಟಾದ ಗನ್ ನಿಯಂತ್ರಣ ಕಾನೂನುಗಳನ್ನು ಹೊಂದಿರುವ ಆಸ್ಟ್ರೇಲಿಯಾದಲ್ಲಿ ಕಳೆದ ಮೂರು ದಶಕಗಳಲ್ಲಿ ನಡೆದ ಅತ್ಯಂತ ಭೀಕರ ಗುಂಡಿನ ಘಟನೆ ಇದಾಗಿದೆ. ದಾಳಿಯಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ.
 ಇಬ್ಬರು ದಾಳಿಕೋರರಲ್ಲಿ, 50 ವರ್ಷದ ಸಾಜಿದ್ ಅಕ್ರಮ್‌ನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಇನ್ನೊಬ್ಬ ದಾಳಿಕೋರ, ಆತನ 24 ವರ್ಷದ ಮಗ ನವೀದ್ ಅಕ್ರಮ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಕಮಿಷನರ್ ಮ್ಯಾಲ್ ಲ್ಯಾನನ್ ಹೇಳಿದ್ದಾರೆ.
ಪಾಕಿಸ್ತಾನ ಮೂಲದ ಶಂಕೆ
ತನಿಖೆಯ ಬಗ್ಗೆ ಮಾಹಿತಿ ಹೊಂದಿರುವ ಅಮೆರಿಕಾದ ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್, ಈ ಇಬ್ಬರು ಪಾಕಿಸ್ತಾನ ಮೂಲದವರಾಗಿರುವ ಸಾಧ್ಯತೆ ಇದೆ ಎಂದು ವರದಿ ಮಾಡಿದೆ. ಸಾಜಿದ್ ಅಕ್ರಮ್‌ನ ಡ್ರೈವಿಂಗ್ ಲೈಸೆನ್ಸ್ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆತ ಪಾಕಿಸ್ತಾನ ಕ್ರಿಕೆಟ್ ತಂಡದ ಜರ್ಸಿಯನ್ನು ಹೋಲುವ ಹಸಿರು ಶರ್ಟ್ ಧರಿಸಿರುವುದು ಕಂಡುಬಂದಿದೆ.
 ಮಗ ಆಸ್ಟ್ರೇಲಿಯಾದಲ್ಲಿ ಜನಿಸಿದ ಪ್ರಜೆಯಾಗಿದ್ದರೆ, ತಂದೆ ಸಾಜಿದ್ ಅಕ್ರಂ 1998 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾಕ್ಕೆ ಬಂದಿದ್ದ. ನಿವಾಸಿ ರಿಟರ್ನ್ ವೀಸಾಗಳಿಗೆ ವರ್ಗಾಯಿಸಲಾಯಿತು ಎಂದು ಆಸ್ಟ್ರೇಲಿಯಾದ ಗೃಹ ಸಚಿವ ಟೋನಿ ಬರ್ಕ್ ಹೇಳಿದ್ದಾರೆ.
ಈ ಹಿಂಸಾಚಾರವು ಹನುಕ್ಕಾ (Hanukkah) ಹಬ್ಬದ ಆರಂಭವನ್ನು ಆಚರಿಸಲು ನೂರಾರು ಯಹೂದಿಗಳು ಸೇರಿದಂತೆ ಸಾವಿರಾರು ಜನರು ಬಾಂಡಿ ಬೀಚ್‌ಗೆ ಆಗಮಿಸಿದ ಸಂದರ್ಭದಲ್ಲಿ ನಡೆದಿದೆ.
ದಾಳಿಯು ಸುಮಾರು 10 ನಿಮಿಷಗಳ ಕಾಲ ನಡೆದಿತ್ತು. ಕಪ್ಪು ಶರ್ಟ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಬೀಚ್‌ಗೆ ಹೋಗುವ ಪಾದಚಾರಿ ಸೇತುವೆಯಿಂದ ರೈಫಲ್‌ಗಳು ಮತ್ತು ಶಾಟ್‌ಗನ್‌ಗಳಿಂದ ಗುಂಡು ಹಾರಿಸಿದ್ದಾರೆ ಎಂದು ವೀಡಿಯೊ ತುಣುಕುಗಳು ತೋರಿಸಿವೆ.
ಸಹಾಯ ಮಾಡಿದ ಹೀರೋ
ಗುಂಡಿನ ದಾಳಿ ವೇಳೆ, ಸ್ಥಳೀಯ ಹಣ್ಣಿನ ಅಂಗಡಿ ಮಾಲೀಕ ಅಹ್ಮದ್ ಅಲ್ ಅಹ್ಮದ್ ಎಂಬವರು ಒಬ್ಬ ಬಂದೂಕುಧಾರಿಯನ್ನು ಕೆಡವಿ, ಆತನಿಂದ ಆಯುಧವನ್ನು ಕಸಿದು, ನಂತರ ಅದನ್ನು ಕೆಳಗೆ ಇರಿಸಿದ ನಾಟಕೀಯ ದೃಶ್ಯ ಆಸ್ಟ್ರೇಲಿಯಾದ ಟಿವಿಗಳಲ್ಲಿ ಪ್ರಸಾರವಾಯಿತು. ನ್ಯೂ ಸೌತ್ ವೇಲ್ಸ್ ಪ್ರಧಾನಿ ಕ್ರಿಸ್ ಮಿನ್ಸ್, ಅವರನ್ನು “ನಿಜವಾದ ಹೀರೋ” ಎಂದು ಕರೆದಿದ್ದು, ಅವರಿಗೆ ಬೆಂಬಲವಾಗಿ A$200,000 (ಸುಮಾರು $1,33,000) ಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ.
ಪೊಲೀಸರು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಆದರೆ ಇಬ್ಬರು ದಾಳಿಕೋರರು ಮಾತ್ರ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ದಾಳಿಯಲ್ಲಿ ಮೃತರಾದವರ ವಯಸ್ಸು 10 ರಿಂದ 87 ವರ್ಷಗಳ ನಡುವಿನದ್ದಾಗಿದೆ ಎಂದು ಮಿನ್ಸ್ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಕನಿಷ್ಠ 42 ಜನರು ಸೋಮವಾರ ಬೆಳಿಗ್ಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಮೃತರಾದವರಲ್ಲಿ ಬಾಂಡಿ ಚಬಾದ್‌ನ ಸಹಾಯಕ ರಬ್ಬಿ ಮತ್ತು ಕಾರ್ಯಕ್ರಮದ ಸಂಘಟಕ ರಬ್ಬಿ ಎಲಿ ಶ್ಲಾಂಗರ್ ಕೂಡ ಸೇರಿದ್ದಾರೆ.
ಜಾಗತಿಕ ಖಂಡನೆ:
ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್: ಪ್ರಧಾನಿ ಆಂಟನಿ ಅಲ್ಬನೀಸ್ ಅವರು ಈ ದಾಳಿಯನ್ನು “ನಮ್ಮ ದೇಶದ ಪಾಲಿಗೆ ಒಂದು ಕರಾಳ ಕ್ಷಣ” ಮತ್ತು “ಶುದ್ಧ ದುಷ್ಟತನದ ಕೃತ್ಯ, ಸೆಮಿಟಿಕ್-ವಿರೋಧಿ ಕೃತ್ಯ, ನಮ್ಮ ನೆಲದಲ್ಲಿ ನಡೆದ ಭಯೋತ್ಪಾದಕ ಕೃತ್ಯ” ಎಂದು ಖಂಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಹಲವು ವಿಶ್ವ ನಾಯಕರು ಈ ದಾಳಿಯನ್ನು ಖಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಭದ್ರತೆಯ ವಿಚಾರದಲ್ಲಿ ವಿಶ್ವದ ಅತ್ಯಂತ ಸುರಕ್ಷಿತ ದೇಶಗಳಲ್ಲಿ ಒಂದಾದ ಆಸ್ಟ್ರೇಲಿಯಾದಲ್ಲಿ ಇಂತಹ ಸಾಮೂಹಿಕ ಗುಂಡಿನ ದಾಳಿಗಳು ಅಪರೂಪ. ಈ ದಾಳಿಯು 1996 ರಲ್ಲಿ ಟ್ಯಾಸ್ಮೆನಿಯಾದ ಪೋರ್ಟ್ ಆರ್ಥರ್‌ನಲ್ಲಿ 35 ಜನರನ್ನು ಕೊಂದ ಘಟನೆಯ ನಂತರ ನಡೆದ ಅತ್ಯಂತ ಮಾರಣಾಂತಿಕ ದಾಳಿಯಾಗಿದೆ. ಗಾಜಾದಲ್ಲಿ ಇಸ್ರೇಲ್ ಯುದ್ಧ ಆರಂಭವಾದಾಗಿನಿಂದ ಆಸ್ಟ್ರೇಲಿಯಾದಲ್ಲಿ ಯಹೂದಿ ಸಮುದಾಯದ ಮೇಲಿನ ಸೆಮಿಟಿಕ್-ವಿರೋಧಿ ದಾಳಿಯ ಸರಣಿಯಲ್ಲಿ ಇದು ಅತ್ಯಂತ ಗಂಭೀರ ಘಟನೆಯಾಗಿದೆ.

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement