ಕೋಲ್ಕತ್ತಾ: ಸಾಲ್ಟ್ ಲೇಕ್‌ನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ (VYBK) ಡಿಸೆಂಬರ್ 13 ರಂದು ನಡೆದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರ ಕಾರ್ಯಕ್ರಮದಲ್ಲಿ ಉಂಟಾದ ಭಾರಿ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಸಂಚಲನ ಮೂಡಿದೆ.
ಕಾರ್ಯಕ್ರಮದ ನಿರ್ವಹಣೆಯಲ್ಲಿನ ವೈಫಲ್ಯದ ಹೊಣೆ ಹೊತ್ತು ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಪಶ್ಚಿಮ ಬಂಗಾಳದ ಡಿಜಿಪಿ ರಾಜೀವಕುಮಾರ ಮತ್ತು ಬಿಧಾನನಗರ ಪೊಲೀಸ್ ಕಮಿಷನರ್ ಮುಕೇಶಕುಮಾರ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, 24 ಗಂಟೆಗಳ ಒಳಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಡಿಸಿಪಿ ಅನೀಶ ಸರ್ಕಾರ್ (IPS) ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಕ್ರೀಡಾಂಗಣದ ಸಿಇಒ ದೇವಕುಮಾರ ನಂದನ್ ಅವರನ್ನು ಸೇವೆಯಿಂದ ತಕ್ಷಣವೇ ಬಿಡುಗಡೆಗೊಳಿಸಲಾಗಿದೆ.
ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಪಿಯೂಷ್ ಪಾಂಡೆ ಮತ್ತು ಜಾವೇದ್ ಶಮೀಮ್ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (SIT) ಸರ್ಕಾರ ರಚಿಸಿದೆ.
ಬಿಜೆಪಿ ಕಿಡಿ
ಈ ಘಟನೆಯ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಕೇವಲ ರಾಜೀನಾಮೆಯಿಂದ ಪ್ರಯೋಜನವಿಲ್ಲ ಎಂದು ಟೀಕಿಸಿದೆ.
“ಅಂತಾರಾಷ್ಟ್ರೀಯ ಕ್ರೀಡಾಪಟು ಮೆಸ್ಸಿಯನ್ನು ಬಲವಂತವಾಗಿ ಅಪ್ಪಿಕೊಂಡು, ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಸೆಲ್ಫಿ ತೆಗೆದುಕೊಳ್ಳುವಲ್ಲಿ ಮಗ್ನರಾಗಿದ್ದ ಸಚಿವರನ್ನು ಇನ್ನೂ ಏಕೆ ಬಂಧಿಸಿಲ್ಲ?” ಎಂದು ಬಿಜೆಪಿ ಸಂಸದ ಸುಕಾಂತ ಮಜುಂದಾರ ಪ್ರಶ್ನಿಸಿದ್ದಾರೆ.
ಮೆಸ್ಸಿ ಅವರ ಭಾರತ ಪ್ರವಾಸದ ವೇಳೆ ಕ್ರೀಡಾಂಗಣದಲ್ಲಿ ಭಾರಿ ಅವ್ಯವಸ್ಥೆ ಉಂಟಾಗಿತ್ತು. ಪ್ರೇಕ್ಷಕರು ಮೈದಾನಕ್ಕೆ ನುಗ್ಗಿದ್ದು, ಪ್ಲಾಸ್ಟಿಕ್ ಬಾಟಲಿಗಳನ್ನು ಒಳಗೆ ತಂದಿದ್ದು ಮತ್ತು ಕ್ರೀಡಾಂಗಣದಲ್ಲಿ ನಡೆದ ವಿಧ್ವಂಸಕ ಕೃತ್ಯಗಳು ಸರ್ಕಾರದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದ್ದವು.


ನಿಮ್ಮ ಕಾಮೆಂಟ್ ಬರೆಯಿರಿ