
ಉಡುಪಿ : ವರನಿಗೆ ರಜೆ ಸಿಗದ ಹಿನ್ನೆಲೆಯಲ್ಲಿ ವಧು-ವರ ವಿಡಿಯೋ ಕಾಲ್ ಮೂಲಕ ಆನ್ಲೈನ್ನಲ್ಲೇ ನಿಶ್ಚಿತಾರ್ಥ (Online engagement) ಮಾಡಿಕೊಂಡ ವಿದ್ಯಮಾನ ಉಡುಪಿಯಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್ ಹಾಗೂ ಉಡುಪಿ ಮೂಲದ ಮೇಘನಾ ಅವರು ಆನ್ಲೈನ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಮವಾರ ಉಡುಪಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ವರನ ಅನುಪಸ್ಥಿತಿಯಲ್ಲಿ ಎರಡೂ ಕಡೆಯ ಕುಟುಂಬಗಳು ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ನೆರವೇರಿಸಿವೆ.
ಕೆನಡಾದಲ್ಲಿ ಉದ್ಯೋಗದಲ್ಲಿರುವ ಸುಹಾಸ್ ಅವರಿಗೆ ಭಾರತಕ್ಕೆ ಬರಲು ರಜೆ ಸಿಗದ ಕಾರಣ ನಿಶ್ಚಿತಾರ್ಥಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.

ಜನವರಿ 7 ಮತ್ತು 8ರಂದು ಮದುವೆ ದಿನಾಂಕ ನಿಗದಿಯಾಗಿರುವುದರಿಂದ, ಕುಟುಂಬಗಳು ಆನ್ಲೈನ್ ನಿಶ್ಚಿತಾರ್ಥಕ್ಕೆ ನಿರ್ಧರಿಸಿವೆ.ಮತ್ತೊಂದೆಡೆ, ವರ ಸುಹಾಸ್ ಕೆನಡಾದಿಂದಲೇ ವೀಡಿಯೊ ಕಾಲ್ ಮೂಲಕ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು. ಪೂಜೆ ನೆರವೇರಿಸಿ, ಎಲ್ಇಡಿ ಪರದೆಯ ಮುಂದೆ ಆರತಿ ಬೆಳಗಿ ಮಂತ್ರಾಕ್ಷತೆ ಹಾಕಿ ವಧು–ವರರಿಗೆ ಹಿರಿಯರು ಆಶೀರ್ವಾದ ಮಾಡಿದ್ದಾರೆ. ಕ್ಯಾಮೆರಾ ಎದುರಲ್ಲೇ ಇಬ್ಬರೂ ಪರಸ್ಪರ ಉಂಗುರ ಧರಿಸಿ ನಿಶ್ಚಿತಾರ್ಥ ಮಾಡಿಕೊಂಡರು.
ಭಾರತ ಮತ್ತು ಕೆನಡಾ ಮಧ್ಯೆ ಸುಮಾರು 12 ಗಂಟೆಗಳ ಸಮಯ ವ್ಯತ್ಯಾಸದ ನಡುವೆಯೂ ಈ ಕಾರ್ಯಕ್ರಮ ನಡೆಯಿತು. ಉಡುಪಿಯಲ್ಲಿ ಬೆಳಿಗ್ಗೆ ನಿಶ್ಚಿತಾರ್ಥ ನಡೆದರೆ, ಕೆನಡಾದಲ್ಲಿ ಮಧ್ಯರಾತ್ರಿ ಈ ವಿಶೇಷ ಕ್ಷಣವನ್ನು ವರ ಹಂಚಿಕೊಂಡರು.
ಡಿಜಿಟಲ್ ತಂತ್ರಜ್ಞಾನವು ದೂರದ ಅಂತರವನ್ನೂ ಹತ್ತಿರ ಮಾಡಬಲ್ಲದು ಎಂಬುದಕ್ಕೆ ಈ ಆನ್ಲೈನ್ ನಿಶ್ಚಿತಾರ್ಥ ಉತ್ತಮ ಉದಾಹರಣೆಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ