ಫುಟ್‌ಬಾಲ್ ಲೋಕದ ದಂತಕಥೆ ಲಿಯೋನೆಲ್ ಮೆಸ್ಸಿ ಇತ್ತೀಚೆಗೆ ಭಾರತದಲ್ಲಿ ತಮ್ಮ ಚೊಚ್ಚಲ ಜಿಒಎಟಿ ಪ್ರವಾಸ (‘GOAT Tour) ಅನ್ನು ಯಶಸ್ವಿಯಾಗಿ ಪೂರೈಸಿದರು. ಈ ಐತಿಹಾಸಿಕ ಪ್ರವಾಸದ ಭಾಗವಾಗಿ ಅವರು ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ನವದೆಹಲಿ ಸೇರಿದಂತೆ ನಾಲ್ಕು ಪ್ರಮುಖ ನಗರಗಳಿಗೆ ಭೇಟಿ ನೀಡಿದ್ದರು.
ತಮ್ಮ ಪ್ರವಾಸದ ನಂತರ, ಮೆಸ್ಸಿ ಅವರು ಅನಂತ ಅಂಬಾನಿ ಸ್ಥಾಪಿಸಿರುವ ವನ್ಯಜೀವಿ ಸಂರಕ್ಷಣಾ ಕೇಂದ್ರವಾದ ‘ವಂತಾರಾ’ (Vantara)ಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉದ್ಯಮಿ ಅನಂತಅಂಬಾನಿ ಅವರು ಮೆಸ್ಸಿಗೆ ಅಂದಾಜು 10.9 ಕೋಟಿ ರೂಪಾಯಿ ಮೌಲ್ಯದ ಅತ್ಯಂತ ಅಪರೂಪದ ಐಷಾರಾಮಿ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮೆಸ್ಸಿಗೆ ನೀಡಲಾದ ಈ ವಾಚ್ ‘ರಿಚರ್ಡ್ ಮಿಲೆ RM 003-V2 GMT ಟೂರ್ಬಿಲನ್ ಏಷ್ಯಾ ಆವೃತ್ತಿ’ (Richard Mille RM 003-V2 GMT Tourbillon “Asia Edition”) ಆಗಿದೆ. ವಿಶೇಷವೆಂದರೆ, ಇಡೀ ವಿಶ್ವದಲ್ಲಿ ಇಂತಹ ಕೇವಲ 12 ವಾಚ್‌ಗಳನ್ನು ಮಾತ್ರ ತಯಾರಿಸಲಾಗಿದ್ದು, ಇದು ಜಗತ್ತಿನ ಅತ್ಯಂತ ವಿಶಿಷ್ಟ ಮಾದರಿಗಳಲ್ಲಿ ಒಂದಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವಾಗ ಮೆಸ್ಸಿ ಯಾವುದೇ ವಾಚ್ ಧರಿಸಿರಲಿಲ್ಲ, ಆದರೆ ಮರಳುವಾಗ ಈ ಅಮೂಲ್ಯವಾದ ವಾಚ್ ಧರಿಸಿರುವುದು ಕಂಡುಬಂದಿದೆ.
ಈ ವಾಚ್‌ನ ವಿಶೇಷತೆಗಳೇನು?
ಈ ಕೈಗಡಿಯಾರವು ಕೇವಲ ಸಮಯ ತೋರಿಸುವುದಕ್ಕಷ್ಟೇ ಸೀಮಿತವಾಗಿಲ್ಲ, ಇದರಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನಗಳಿವೆ. ಇದು ಮ್ಯಾನುಯಲ್-ವೈಂಡಿಂಗ್ ಟೂರ್ಬಿಲನ್ ಚಲನೆಯನ್ನು ಹೊಂದಿದ್ದು, ಎರಡು ವಿಭಿನ್ನ ಕಾಲ ವಲಯಗಳನ್ನು (Dual Time-zone) ಪ್ರದರ್ಶಿಸುತ್ತದೆ.
ಸ್ಕೆಲಿಟನ್ ಡಯಲ್, ಕಪ್ಪು ಕಾರ್ಬನ್ ಕೇಸ್ ಮತ್ತು ಟೈಟಾನಿಯಂ ಬೇಸ್‌ಪ್ಲೇಟ್ ಅನ್ನು ಈ ವಾಚ್ ಹೊಂದಿದೆ. ಇದರ 38mm ಕೇಸ್ ಅನ್ನು ‘ಕಾರ್ಬನ್ TPT’ ಎಂಬ ವಸ್ತುವಿನಿಂದ ತಯಾರಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಏರೋಸ್ಪೇಸ್ ಮತ್ತು ಫಾರ್ಮುಲಾ 1 ರೇಸಿಂಗ್ ಕಾರುಗಳಲ್ಲಿ ಬಳಸಲಾಗುತ್ತದೆ.
ಇದರಲ್ಲಿರುವ ಸಫೈರ್ ಡಿಸ್ಕ್ ವಿಶೇಷವಾದ ದೃಶ್ಯ ಎಫೆಕ್ಟ್ ನೀಡುತ್ತದೆ. ಇದರ ಸಹಾಯದಿಂದ ಕಪ್ಪು ಬಣ್ಣದ ಅಂಕಿಗಳು ಬಿಳಿ ಬಣ್ಣದ ಹಿನ್ನೆಲೆಯಲ್ಲಿ “ಬೆಳಗುತ್ತಿರುವಂತೆ” ಕಾಣುತ್ತವೆ. ಗುರುತ್ವಾಕರ್ಷಣೆಯು ಸಮಯದ ನಿಖರತೆಯ ಮೇಲೆ ಬೀರುವ ಪರಿಣಾಮವನ್ನು ತಡೆಯಲು ಇದರಲ್ಲಿ ‘ಟೂರ್ಬಿಲನ್ ಮೂವ್‌ಮೆಂಟ್’ ಅಳವಡಿಸಲಾಗಿದೆ.
ಈ ಅತ್ಯಂತ ಅಪರೂಪದ ವಾಚ್ ಅನ್ನು ಜಗತ್ತಿನ ಕೆಲವೇ ಕೆಲವು ಗಣ್ಯರು ಮಾತ್ರ ಹೊಂದಿದ್ದಾರೆ. ಬ್ರೂನೈ ಸುಲ್ತಾನ್ ಹಸನಲ್ ಬೋಲ್ಕಿಯಾ, ಫಾರ್ಮುಲಾ 1 ರೇಸರ್ ಮಿಕ್ ಶೂಮಾಕರ್, ಫೆರಾರಿ ತಂಡದ ಮಾಜಿ ಮುಖ್ಯಸ್ಥ ಜೀನ್ ಟಾಡ್, ಜೊಹೋರ್‌ನ ಯುವರಾಜ ತುಂಕು ಇಸ್ಮಾಯಿಲ್ ಇಬ್ನಿ ಸುಲ್ತಾನ್, ಇಬ್ರಾಹಿಂ, ಖ್ಯಾತ ವಾಚ್ ಮೇಕರ್ ಕಾರಿ ವೌಟಿಲೈನೆನ್ ಇವರ ಬಳಿ ಈ ವಾಚ್ ಇದೆ. ಈಗ ಈ ಪ್ರತಿಷ್ಠಿತ ಪಟ್ಟಿಗೆ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಕೂಡ ಸೇರ್ಪಡೆಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ