ಮೊಹಾಲಿ: ಕಬಡ್ಡಿ ಆಟಗಾರ ರಾಣಾ ಹತ್ಯೆ ಆರೋಪಿ ಪೊಲೀಸ್ ಎನ್‌ಕೌಂಟರಿನಲ್ಲಿ ಸಾವು

ಮೊಹಾಲಿ: ಖ್ಯಾತ ಕಬಡ್ಡಿ ಆಟಗಾರ ರಾಣಾ ಬಾಲಚೌರಿಯಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹರ್ಪಿಂದರ್ ಅಲಿಯಾಸ್ ಮಿಡ್ಡು, ಬುಧವಾರ ಪಂಜಾಬ್‌ನ ಮೊಹಾಲಿಯಲ್ಲಿ ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿದ್ದಾನೆ.
ತರನ್‌ ತಾರನ್ ಜಿಲ್ಲೆಯ ನೌಶೆಹ್ರಾ ಪನ್ನುವಾನ್ ನಿವಾಸಿಯಾದ ಹರ್ಪಿಂದರ್‌ನನ್ನು ಬಂಧಿಸಲು ಹೋದಾಗ ಪೊಲೀಸರು ಮತ್ತು ಆರೋಪಿಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಹರ್ಪಿಂದರ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ರಾಣಾ ಬಾಲಚೌರಿಯಾ ಹತ್ಯೆ ಪ್ರಕರಣದಲ್ಲಿ ನಮಗೆ ದೊಡ್ಡ ಯಶಸ್ಸು ಸಿಕ್ಕಿದೆ. ಬಂಧಿತ ಆರೋಪಿ ಹರ್ಪಿಂದರ್ ಅನೇಕ ಭೀಕರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಮತ್ತು ಆತನ ಹಿನ್ನೆಲೆ ಕ್ರಿಮಿನಲ್ ಚಟುವಟಿಕೆಗಳಿಂದ ಕೂಡಿತ್ತು,” ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ರಾಣಾ ಬಾಲಚೌರಿಯಾ ಹತ್ಯೆ ಪ್ರಕರಣದ ಹಿನ್ನೆಲೆ:
ಕಳೆದ ಸೋಮವಾರ ಮೊಹಾಲಿಯ ಸೋಹಾನಾದಲ್ಲಿ ಖಾಸಗಿ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದಾಗ ಈ ಕೃತ್ಯ ನಡೆದಿತ್ತು. 30 ವರ್ಷದ ಕನ್ವರ್ ದಿಗ್ವಿಜಯ್ ಸಿಂಗ್ ಅಲಿಯಾಸ್ ರಾಣಾ ಬಾಲಚೌರಿಯಾ ಅವರು ಪಂದ್ಯಾವಳಿಯಲ್ಲಿ ಭಾಗವಹಿಸಲು ಮೈದಾನಕ್ಕೆ ಬಂದಾಗ, ಅಪರಿಚಿತ ದುಷ್ಕರ್ಮಿಗಳು ಜನಜಂಗುಳಿಯ ನಡುವೆಯೇ ಗುಂಡಿನ ದಾಳಿ ನಡೆಸಿದ್ದರು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ರಾಣಾ ಅವರನ್ನು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಮೋಟಾರ್ ಸೈಕಲ್‌ನಲ್ಲಿ ಬಂದಿದ್ದ ಇಬ್ಬರಿಂದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದರು. ಈ ಕೊಲೆಯ ಹಿಂದೆ ಹಳೆಯ ದ್ವೇಷ ಅಥವಾ ಗ್ಯಾಂಗ್ ವಾರ್ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement