ಚೆನ್ನೈ: ತಮಿಳುನಾಡು ಚುನಾವಣಾ ಆಯೋಗವು ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (Special Intensive Revision – SIR) ಕಾರ್ಯವನ್ನು ಪೂರ್ಣಗೊಳಿಸಿದ್ದು, ರಾಜ್ಯದ ಒಟ್ಟು 6.41 ಕೋಟಿ ಮತದಾರರ ಪೈಕಿ ಬರೋಬ್ಬರಿ 97.4 ಲಕ್ಷ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ. ಈ ಮೂಲಕ ರಾಜ್ಯದ ಒಟ್ಟು ಮತದಾರರ ಸಂಖ್ಯೆಯಲ್ಲಿ ಶೇ. 15.2 ರಷ್ಟು ಭಾರಿ ಇಳಿಕೆಯಾಗಿದ್ದು, ಪ್ರಸ್ತುತ ಮತದಾರರ ಸಂಖ್ಯೆ 5.4 ಕೋಟಿಗೆ ತಲುಪಿದೆ.
ಶುಕ್ರವಾರ ರಾಜ್ಯದ ಎಲ್ಲಾ 38 ಜಿಲ್ಲೆಗಳ ಜಿಲ್ಲಾ ಚುನಾವಣಾ ಅಧಿಕಾರಿಗಳು ಈ ಕರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತು ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಅವರು ಶುಕ್ರವಾರ ಸಂಜೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಮತದಾರರ ಪಟ್ಟಿಯಿಂದ ಹೆಸರು ಕಡಿತಕ್ಕೆ ಕಾರಣಗಳೇನು?
ಕೈಬಿಡಲಾದ ಒಟ್ಟು 97.4 ಲಕ್ಷ ಹೆಸರುಗಳಲ್ಲಿ ಸುಮಾರು 53 ಲಕ್ಷ ಜನ (ಶೇ. 54) ಬೇರೆಡೆಗೆ ವಲಸೆ ಹೋಗಿದ್ದಾರೆ. 27 ಲಕ್ಷ ಜನ (ಶೇ. 28) ಮೃತಪಟ್ಟಿದ್ದಾರೆ. ಪತ್ತೆಯಾಗದವರು 13.6 ಲಕ್ಷ ಜನ ಹಾಗೂ ನಕಲಿ ಹೆಸರುಗಳು 3.98 ಲಕ್ಷ (ಶೇ. 4) ಇದೆ ಎಂದು ಪತ್ತೆ ಹಚ್ಚಲಾಗಿದೆ. ಇತರ ಕಾರಣಗಳಿಂದ ಸುಮಾರು 16,400 ಜನರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಚೆನ್ನೈನಲ್ಲಿ ದಾಖಲೆ ಮಟ್ಟದ ಇಳಿಕೆ
ಜಿಲ್ಲಾವಾರು ಅಂಕಿಅಂಶಗಳನ್ನು ಗಮನಿಸಿದರೆ, ರಾಜಧಾನಿ ಚೆನ್ನೈನಲ್ಲಿ ಅತಿ ಹೆಚ್ಚು ಅಂದರೆ ಶೇ. 35.6 ರಷ್ಟು ಹೆಸರುಗಳನ್ನು ಕೈಬಿಡಲಾಗಿದೆ. ಇಲ್ಲಿನ 40.04 ಲಕ್ಷ ಮತದಾರರ ಪೈಕಿ 14.25 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಚೆನ್ನೈನ 16 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಶೇ. 40 ಕ್ಕಿಂತ ಹೆಚ್ಚು ಹೆಸರುಗಳು ಕಡಿತಗೊಂಡಿವೆ. ಅಣ್ಣಾನಗರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ. 42.2 ರಷ್ಟು ಮತದಾರರು ಕಡಿಮೆಯಾಗಿದ್ದಾರೆ. ವಿಲ್ಲಿವಾಕ್ಕಂ (40.7%), ಸಾವಿರ ದೀಪಗಳು (Thousand Lights – 40.7%), ಟಿ.ನಗರ (40.8%) ಮತ್ತು ವೇಲಾಚೇರಿ ಕ್ಷೇತ್ರಗಳಲ್ಲೂ ಶೇ. 40 ಕ್ಕೂ ಹೆಚ್ಚು ಕಡಿತ ದಾಖಲಾಗಿದೆ.
ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಕ್ಷೇತ್ರವಾದ ಚೆಪಾಕ್-ತಿರುವಲ್ಲಿಕೇಣಿಯಲ್ಲಿ ಶೇ. 37.2 ರಷ್ಟು ಹೆಸರುಗಳನ್ನು ತೆಗೆದುಹಾಕಲಾಗಿದೆ.
ಚೆಂಗಲ್ಪಟ್ಟು, ತಿರುಪ್ಪೂರು, ಕೊಯಮತ್ತೂರು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲೂ ಮತದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಹೊಸದಾಗಿ ಸೇರ್ಪಡೆಗೆ ಅವಕಾಶ
ಜಿಲ್ಲಾ ಚುನಾವಣಾ ಅಧಿಕಾರಿ ಜೆ. ಕುಮರಗುರುಬರನ್ ಅವರು ಮಾತನಾಡಿ, “ಈ ಪರಿಷ್ಕರಣೆಯ ನಂತರ ಸುಮಾರು 8 ರಿಂದ 10 ಲಕ್ಷ ಹೊಸ ಮತದಾರರು ‘ಫಾರ್ಮ್ 6’ ಮೂಲಕ ಹೆಸರು ಸೇರಿಸಲು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ,” ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ