ಢಾಕಾ: ಬಾಂಗ್ಲಾದೇಶದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯೊಬ್ಬನನ್ನು ಗುಂಪೊಂದು ಬರ್ಬರವಾಗಿ ಹೊಡೆದು ಕೊಂದಿರುವ ಘಟನೆ ಗುರುವಾರ ನಡೆದಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ ಮೈಮನ್‌ಸಿಂಗ್ ಜಿಲ್ಲೆಯ ಭಾಲುಕಾ ಉಪಜಿಲಾದಲ್ಲಿ ಈ ಘಟನೆ ನಡೆದಿದೆ ಎಂದು ಬಿಬಿಸಿ ಬಾಂಗ್ಲಾ ವರದಿ ಮಾಡಿದೆ. ಮೃತರನ್ನು ಸ್ಥಳೀಯ ಗಾರ್ಮೆಂಟ್ ಕಾರ್ಖಾನೆಯ ಉದ್ಯೋಗಿ ದೀಪುಚಂದ್ರ ದಾಸ್ ಎಂದು ಗುರುತಿಸಲಾಗಿದೆ. ಮತ್ತು ದುಬಾಲಿಯಾ ಪ್ಯಾರಾ ಪ್ರದೇಶದಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು.
ಧರ್ಮ ನಿಂದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಉದ್ರಿಕ್ತ ಗುಂಪು ದೀಪು ಅವರನ್ನು ಹಿಡಿದು ತೀವ್ರವಾಗಿ ಥಳಿಸಿದೆ. ಗುಂಪಿನ ಹಲ್ಲೆಯಿಂದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಷ್ಟಕ್ಕೇ ನಿಲ್ಲದ ದುಷ್ಕರ್ಮಿಗಳು, ದೀಪು ಅವರ ಮೃತದೇಹವನ್ನು ಮೈಮನ್‌ಸಿಂಗ್ ಹೆದ್ದಾರಿಯಲ್ಲಿ ಮರವೊಂದಕ್ಕೆ ಕಟ್ಟಿ ನೇತು ಹಾಕಿ, ನಂತರ ಬೆಂಕಿ ಅದಕ್ಕೆ ಹಚ್ಚಿದ್ದಾರೆ. ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೆಂಕಿ ಉರಿಯುತ್ತಿರುವುದನ್ನು ನೂರಾರು ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸುತ್ತಿರುವುದು ಕಂಡುಬಂದಿದೆ.
ಪೊಲೀಸರ ಹೇಳಿಕೆ:
ಭಾಲುಕಾ ಪೊಲೀಸ್ ಠಾಣೆಯ ಕರ್ತವ್ಯ ನಿರತ ಅಧಿಕಾರಿ ರಿಪನ್ ಮಿಯಾ ಅವರ ಪ್ರಕಾರ, ದೀಪು ಅವರು ಇಸ್ಲಾಂ ಧರ್ಮವನ್ನು ಎಲ್ಲಿ ಮತ್ತು ಹೇಗೆ ನಿಂದಿಸಿದ್ದಾರೆ ಎಂಬ ಬಗ್ಗೆ ವಿಚಾರಣೆಗೊಳಪಟ್ಟ ವ್ಯಕ್ತಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಕೇವಲ ವದಂತಿ ಅಥವಾ ಆರೋಪದ ಮೇಲೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಪ್ರಸ್ತುತ ಮೃತದೇಹವನ್ನು ಮೈಮನ್‌ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪೊಲೀಸರು ಮೃತರ ಕುಟುಂಬದವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದು, ಪ್ರಕರಣ ದಾಖಲಾದ ನಂತರ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ