ಕೋಲ್ಕತ್ತಾ: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಉಂಟಾದ ಗದ್ದಲ ಮತ್ತು ಅವ್ಯವಸ್ಥೆಯ ತನಿಖೆ ಈಗ ಹೊಸ ತಿರುವು ಪಡೆದುಕೊಂಡಿದೆ. ಕೇವಲ ಜನಸಂದಣಿಯ ನಿರ್ವಹಣೆಯ ಲೋಪವಷ್ಟೇ ಅಲ್ಲದೆ, ಈ ಪ್ರಕರಣದಲ್ಲಿ ಭಾರೀ ಆರ್ಥಿಕ ಅಕ್ರಮಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ, ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ಶುಕ್ರವಾರ ಕಾರ್ಯಕ್ರಮದ ಮುಖ್ಯ ಆಯೋಜಕ ಸತಾದ್ರು ದತ್ತಾ ಅವರ ರಿಶ್ರಾದಲ್ಲಿರುವ ಮೂರು ಅಂತಸ್ತಿನ ನಿವಾಸದ ಮೇಲೆ ದಾಳಿ ನಡೆಸಿದೆ. ಸತಾದ್ರು ದತ್ತಾ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿದ್ದ ₹22 ಕೋಟಿ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಒಟ್ಟು ₹100 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಸತಾದ್ರು ದತ್ತಾ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ಅವರು ಕೇವಲ 150 ಜನರಿಗೆ ಮಾತ್ರ ಮೈದಾನಕ್ಕೆ ಪ್ರವೇಶ ನೀಡಲು ಯೋಜಿಸಿದ್ದರು. ಆದರೆ ಕೆಲವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹೆಚ್ಚು ಜನರನ್ನು ಸೇರಿಸಬೇಕಾಯಿತು ಎಂದು ತಿಳಿಸಿದ್ದಾರೆ.
ಸೆಕ್ಯೂರಿಟಿ ಎಚ್ಚರಿಕೆ ನಿರ್ಲಕ್ಷ್ಯ:
ಮೆಸ್ಸಿಯ ಭದ್ರತಾ ತಂಡವು “ಯಾವುದೇ ಕಾರಣಕ್ಕೂ ಫುಟ್ಬಾಲ್ ತಾರೆಯನ್ನು ಮುಟ್ಟಬಾರದು” ಎಂದು ಎಚ್ಚರಿಕೆ ನೀಡಿತ್ತು. ಆದರೆ ಕಾರ್ಯಕ್ರಮದ ವೇಳೆ ಈ ಸೂಚನೆಯನ್ನು ಗಾಳಿಗೆ ತೂರಲಾಗಿದೆ. ಕ್ರೀಡಾಂಗಣದ ಅರ್ಧದಷ್ಟು ಟಿಕೆಟ್ಗಳ ಮಾರಾಟದ ದಾಖಲೆಗಳೇ ಮಾಯವಾಗಿವೆ. ಸುಮಾರು 66,000 ಆಸನಗಳ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಅರ್ಧದಷ್ಟು ಟಿಕೆಟ್ಗಳನ್ನು ಉಚಿತವಾಗಿ ಹಂಚಲಾಗಿದೆ ಎಂಬ ಸಂಘಟಕರ ಹೇಳಿಕೆಯನ್ನು ಪೊಲೀಸರು ಅನುಮಾನಿಸಿದ್ದಾರೆ.
ಮೆಸ್ಸಿ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳಿಂದ ತಲಾ ₹10 ಲಕ್ಷದಿಂದ ₹30 ಲಕ್ಷದವರೆಗೆ ಹಣ ಪಡೆಯಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಕಾರಣ, ಇದನ್ನು ಕಪ್ಪು ಹಣವೆಂದು ಪೊಲೀಸರು ಪರಿಗಣಿಸಿದ್ದಾರೆ.
ಐಷಾರಾಮಿ ಜೀವನ:
ಸತಾದ್ರು ದತ್ತಾ ಅವರ ಮನೆಯ ಪರಿಶೀಲನೆಯ ವೇಳೆ ಟೆರೇಸ್ ಮೇಲೆ ಫುಟ್ಬಾಲ್ ಮೈದಾನ, ಸ್ವಿಮ್ಮಿಂಗ್ ಪೂಲ್ ಮತ್ತು ಬೃಹತ್ ಕಚೇರಿ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳು ಕಂಡುಬಂದಿದ್ದು ಅಧಿಕಾರಿಗಳನ್ನೇ ಬೆರಗುಗೊಳಿಸಿವೆ.
ಡಿಸೆಂಬರ್ 13 ರಂದು ನಡೆದ ಗದ್ದಲದ ನಂತರ ದತ್ತಾ ಅವರನ್ನು ಬಂಧಿಸಲಾಗಿತ್ತು. ಸದ್ಯ ಎಸ್ಐಟಿ ತಂಡವು ಭದ್ರತಾ ಲೋಪ ಮತ್ತು ಆರ್ಥಿಕ ವಂಚನೆಯ ಆಯಾಮದಲ್ಲಿ ತನಿಖೆಯನ್ನು ತೀವ್ರಗೊಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ